ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬವಿದ್ದಂತೆ

0
273

ಈ ಹಬ್ಬದ ಸಂದರ್ಭದಲ್ಲಿ ನಾವು‌ ಕೈಗೊಳ್ಳುವ ಕಾರ್ಯ ಹೇಗಿರುತ್ತದೇಯೋ ಮುಂದಿನ ಐದು ವರ್ಷಗಳ ಕಾಲ ನಮ್ಮ ಬದುಕು ಕೂಡ ಹಾಗೇ ಇರುತ್ತದೆ. ಆದ್ದರಿಂದ, ಈ ಮಹತ್ವದ ಸಮಯದಲ್ಲಿ, ತಮ್ಮೊಂದಿಗೆ ಅಂಬೇಡ್ಕರ್ ವಿಚಾರ ಕುರಿತ ನಾಲ್ಕು ಮಾತು ಹಂಚಿಕೊಳ್ಳಲೇಬೇಕಾಗಿದೆ, ದಯವಿಟ್ಟು ಕೇಳಿ. ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬವಿದ್ದಂತೆ.

ಸಾವಿರಾರು ವರ್ಷಗಳಿಂದ ಪಶುಗಳಿಗಿಂತ ಹೀನವಾಗಿ ಬದುಕುತ್ತಿದ್ದ ಶೋಷಿತ ಸಮುದಾಯಗಳಿಗೆ ಸ್ವಾಭಿಮಾನದಿಂದ ಬದುಕುವಂತೆ ಮಾಡಿದ್ದು ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು. ಸಂವಿಧಾನದ ಮೂಲಕ ಈ ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ಅದರ ಸೌಲಭ್ಯ ಸಿಗಲಿ ಎಂಬುದು ಅವರ ಸದಾಶಯವಾಗಿತ್ತು. ಆದರೆ, ಆ ಸಂವಿಧಾನ ಇಂದು ವಿನಾಶದ ಅಂಚಿನಲ್ಲಿದೆ, ಅದನ್ನು ಯಾವ ಪರಿಯಾದರು ಸರಿ, ಸಂವಿಧಾನ ಉಳಿಸಿಕೊಳ್ಳಬೇಕಾಗಿದೆ. ಇಲ್ಲವೆಂದರೆ ನನ್ನ ಅಜ್ಜನ ಅನ್ನದ ಋಣ ತೀರಿಸದೇ ಸತ್ತ ಹೇಡಿಗಳು ಎಂದು ನಮ್ಮ ಮಕ್ಕಳು ಮೊಮ್ಮಕ್ಕಳು ಶಾಪ ಹಾಕುತ್ತಾರೆ.

Contact Your\'s Advertisement; 9902492681

ಸಂವಿಧಾನವೆಂದರೆ ನಿಜ ಅರ್ಥದಲ್ಲಿ ಬಾಬಾಸಾಹೇಬರು ಜೀವನಪೂರ್ತಿ ಮನುವಾದಿಗಳೊಂದಿಗೆ ಹೋರಾಡಿ ತಮ್ಮ ವೈಯಕ್ತಿಕ ಬದುಕನ್ನು ತೇದು, ನನ್ನ ಜನ ಸ್ವಾಭಿಮಾನದಿಂದ ಬದುಕಲೆಂದು ಹಂಬಲಿಸಿ, ದುಃಖದಿಂದ ಸುರಿಸಿದ ಬೆವರಿನ ಮೊತ್ತವಲ್ಲದೆ ಬೇರೇನೂ ಅಲ್ಲ. ಅವರಲ್ಲಿ ಮಡುವುಗಟ್ಟಿದ್ದ ಆ ದುಃಖವನ್ನು ಅವರು ಯಾರೊಂದಿಗೂ ಹಂಚಿಕೊಳ್ಳಲಿಲ್ಲ, ಬದುಕಿನುದ್ದಕ್ಕೂ ಬ್ರಾಹ್ಮಣ್ಯದೊಂದಿಗೆ ಧೈರ್ಯದಿಂದ ಹೋರಾಡುತ್ತ ಸಂವಿಧಾನ ರಚಿಸಿದರು.

ಆದರೆ, ಇಂದು ಆ ಹೋರಾಟದ ಸಂಪೂರ್ಣ ಫಲಾನುಭವಿಗಳಾದ ನಾವು ಯಾರೋ ನೀಡಿದ ಅಲ್ಪ ಸಹಾಯಕ್ಕಾಗಿ ಸಮಾಜದ ಗೌರವ ಹರಾಜು ಮಾಡುತ್ತಿರುವುದು ಅತ್ಯಂತ ವಿಷಾದದ ಸಂಗತಿ. ನಾವು ಮಾಡುತ್ತಿರುವುದು ಸರಿಯೇ ಎಂಬುದನ್ನು ಬೇರೆಯವರಿಗಿಂತ ನಮ್ಮ ಆತ್ಮವನ್ನೇ ನಾವು ಕೇಳಬೇಕಿದೆ. ಏಕೆಂದರೆ, ಅದು ಮಾತ್ರ ನಿಜ ಹೇಳಬಲ್ಲದು. ಬಾಬಾಸಾಹೇಬರ ತ್ಯಾಗಕ್ಕೆ ಪ್ರತಿಯಾಗಿ ನಾವು ಋಣ ಸಂದಾಯ ಮಾಡಬೇಕೆಂದರೆ, ಅವರನ್ನು ಅವಮಾನಿಸುವುವರನ್ನು ಮತದಾನದ ಮೂಲಕ ಹೀನಾಯವಾಗಿ ಸೋಲಿಸಬೇಕಾಗಿದೆ.

ನೆನಪಿರಲಿ, ಈ ಓಟಿನ ಹಕ್ಕು ಕೊಡಿಸಿದವರು ಅಂಬೇಡ್ಕರರೆ. ನಾವೀಗ ಬದುಕುತ್ತಿರುವ ಐಷಾರಾಮಿ ಬದುಕು, ತೊಡುವ ಬಟ್ಟೆ, ಇರುವ ಮನೆ, ಒಂದು ರೀತಿಯಲ್ಲಿ ಉಸಿರಾಡುವ ಗಾಳಿ ಸಹ ಅವರ ಹೋರಾಟದ ಫಲವೇ ಆಗಿದೆ. ಇದೆಲ್ಲವೂ ಸಾಧ್ಯವಾಗಿಸಲು, ಅಂಬೇಡ್ಕರರು ಒಂದು ತೊಟ್ಟು ರಕ್ತ ಸುರಿಸದೇ ತಮ್ಮ ಅವಿರತ ಅಧ್ಯಯನದಿಂದ ಪಡೆದ ಜ್ಞಾನದಿಂದ ಸಾಧ್ಯವಾಗಿಸಿದರು. ಹಾಗೇಯೆ, ಅದೇ ಸಂವಿಧಾನ ಇಂದು ಅಪಾಯದಲ್ಲಿರುವುದರಿಂದ ನಾವು ವಿವೇಕದಿಂದ ತುಂಬಾ ಎಚ್ಚರಿಕೆಯಿಂದ ಮತ ಚಲಾಯಿಸಿ ಬಿಜೆಪಿಗರನ್ನು ಸೋಲಿಸಬೇಕಾಗಿದೆ. ಇದಕ್ಕೊಮ್ಮೆ ನಮ್ಮ ಆತ್ಮಸಾಕ್ಷಿಯ ಮಾತು ಕೇಳಿಸಬೇಕಿದೆ. ನಮಗೆ ಮರೆವು ಹೆಚ್ಚಿರುವುದರಿಂದ ಈ ಮಾತು ಮತ್ತೆ ನೆನಪಿಸುತ್ತಿದ್ದೇನೆ.!!

ಅಂಬೇಡ್ಕರರು ತಮ್ಮ ನಾಲ್ಕು ಮಕ್ಕಳು ತೀರಿಹೋದಾಗಲೂ ಅವರು ಹೆಚ್ಚು ದುಃಖಿಸುತ್ತ ಕೂಡಲಿಲ್ಲ. ಏಕೆಂದರೆ, ಈ ದೇಶದ ಲಕ್ಷಾಂತರ ಶೋಷಿತ ಮಕ್ಕಳಿಗೆ ಸ್ವಾಭಿಮಾನದ ಬದುಕು ನೀಡುವುದು ಅವರ ದೊಡ್ಡ ಉದ್ದೇಶವಾಗಿತ್ತು. ಈಗ ನಮ್ಮ ಮುಂದಿರುವುದು ನಮ್ಮ ಮಕ್ಕಳ ಬದುಕು ಮತ್ತು ಅವರ ಅನ್ನದ ಪ್ರಶ್ನೆ! ಅವರು ನಮ್ಮ ಕರುಳ ಕುಡಿಗಳಾಗಿರುವುದರಿಂದ, ನಮ್ಮ ಹಾಗಿಲ್ಲದಿದ್ದರೂ ಒಂದೊತ್ತಿನ ಊಟವಾದರು ತಿಂದು ಬದುಕಲಿ ಎಂಬ ಕಾಳಜಿಗಾಗಿ. ಇಲ್ಲವೆಂದರೆ ನಮ್ಮ ಮಕ್ಕಳನ್ನು ಈ ಬಿಜೆಪಿಗರು ಮನುವಾದದ ಕರಾಳ ನರಕಕ್ಕೆ ದೂಡಿಬಿಡುತ್ತಾರೆ. ಹಾಗಾಗಿ, ನಾವು ಸಂವಿಧಾನ ಉಳಿಸಿಕೊಂಡರೆ ಮಾತ್ರ ನಮಗೆ ಬದುಕಿದೆ, ಇಲ್ಲವೆಂದರೆ ನಾವು ಬದುಕಿದ್ದೂ ಸತ್ತಂತೆ ಎಂದು ಬೇರೆ ಹೇಳಬೇಕಾಗಿಲ್ಲ.

ಬಂಧುಗಳೇ ಈ ಬಿಜೆಪಿಯವರು; ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲಿಕ್ಕೆ ಎಂದು ನಮ್ಮನ್ನು ಅನೇಕ ಸಲ ಅಪಮಾನಿಸಿದ್ದಾರೆ, ಮಹಿಳೆಯರಿಗೆ, ರೈತರಿಗೆ, ದಲಿತರಿಗೆ, ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ತೀರಾ ನಿರ್ದಯವಾಗಿ ನಡೆಸಿಕೊಂಡಿರುವುದನ್ನು ನಾನು ಮತ್ತೆ ಬಿಡಿಸಿ ಹೇಳಬೇಕಾಗಿಲ್ಲ. ಹಿಂಸೆಯೇ ಸಂಘಪರಿವಾರದವರ ಪರಮ ತತ್ವವಾಗಿರುವಾಗ, ಇವರಿಂದ ಮತ್ತೇನನ್ನೂ ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ.

ಆದ್ದರಿಂದ, ಈ ಚುನಾವಣೆಯಲ್ಲಿ ಅವರನ್ನು ಪಾತಾಳಕ್ಕೆ ಬೀಳುವಂತೆ ಸೋಲಿಸಬೇಕಾಗಿದೆ. ಅದು ನಾವು ಬಾಬಾಸಾಹೇಬರಿಗೆ ತೋರುವ ನಿಜವಾದ ಗೌರವ. ದಸಂಸದ ಸಂಸ್ಥಾಪಕ ಬಿ. ಕೃಷ್ಣಪ್ಪ ಅವರು ಹೇಳಿದ ಒಂದು ಮಾತು ತುಂಬಾ ಸಾಂದರ್ಭಿಕ ಅನ್ನಿಸುತ್ತಿದೆ. ಮೇಲೊಂದು ಚೂಪಾದ ಕತ್ತಿ ನೇತಾಡುತ್ತಿದೆ, ಈ ಹೊಲೆ ಮಾದಿಗರು ಸಾಯಲು ನಾ ಮುಂದೆ ತಾ ಮುಂದೆ ಎನ್ನುವಂತೆ ಬಡಿದಾಡುತ್ತಿದ್ದಾರೆ. ಈಗ ಕೂಡ ಹಾಗೆ ಆಗುತ್ತಿದೆ, ಈ ಬಿಜೆಪಿಗರು ನಮ್ಮ ಅನ್ನ ಕಿತ್ತುಕೊಳ್ಳುತ್ತಿದ್ದಾರೆ, ಅದಕ್ಕೆ ನಮ್ಮ ಕೆಲವು ಸಹೋದರರೆ ಅತ್ಯಂತ ಸಂತಸದಿಂದ ಅವರಿಗೆ ಸಹಕರಿಸುತ್ತಿದ್ದಾರೆ, ಇದು ಅತ್ಯಂತ ಖೇದದ ಸಂಗತಿ.

ಬಾಬಾಸಾಹೇಬರಿಗೆ ದ್ರೋಹವೆಸಗುವ ಈ ಕಾರ್ಯದಿಂದ ನಮ್ಮ ಸಹೋದರರು ಒಂದು ಹೆಜ್ಜೆ ಹಿಂದಕ್ಕೆ ಸರಿದರೆ ಸಾಕು, ದೇಶ ಉಳಿಯುತ್ತದೆ, ನಮ್ಮ ಸಮಾಜ ಗಟ್ಟಿಯಾಗುತ್ತದೆ, ಎಲ್ಲಕ್ಕೂ ಹೆಚ್ಚಾಗಿ ಭವಿಷ್ಯದಲ್ಲಿ ನಮ್ಮ ಮಕ್ಕಳು ನೆಮ್ಮದಿಯಿಂದ ಬದುಕುತ್ತಾರೆ. ಈ ದುರಿತ ಸಮಯದಲ್ಲಿ ನಾವಿಡುವ ಒಂದೇ ಒಂದು ತಪ್ಪು ಹೆಜ್ಜೆ ಅಂದು ಬಾಬಾಸಾಹೇಬರು ಸುರಿಸಿದ ಬೆವರನ್ನು ಇಂದು ಅವರ ಚೇತನದ ಕಣ್ಣೀರನ್ನಾಗಿ ಮಾರ್ಪಡಿಸುವ ಅಪಾಯವಿದೆ.

ಬಂದುಗಳೇ, 

ಮಾತಾಡುವುದು ತುಂಬಾ ಇರುವುದರಿಂದ, ಮುಖತಃ ಭೇಟಿಯಾದಾಗ ಆತ್ಮಸಾಕ್ಷಿಯ ಕೆಲ ಮಾತುಗಳು, ಎದೆಯೊಳಗಿನ ಒಂದಿಷ್ಟು ನೋವು ಹಂಚಿಕೊಳ್ಳುವದಿದೆ. ಇಲ್ಲಿ ಇಷ್ಟು ಮಾತ್ರ ಹೇಳಲು ಸಾಧ್ಯವಾಗುತ್ತಿದೆ. ಅದಾಗಿ, ಬಾಬಾಸಾಹೇಬರು ಉಸಿರಾಡಿದ ಬುದ್ಧನ ಕಾರುಣ್ಯ, ಪ್ರೀತಿ ಮತ್ತು ಅರಿವು ನಮ್ಮೆಲ್ಲರಿಗೂ ಕರುಣಿಸಲಿ ಎಂದು ಸೃಷ್ಟಿಯಲ್ಲಿ ಕೇಳುತ್ತ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು, ಬಾಬಾಸಾಹೇಬರ ಸಂವಿಧಾನ ರಕ್ಷಣೆಯ ಈ ಕಾರ್ಯದಲ್ಲಿ ತಾವೂ ನಮ್ಮ ಜೊತೆಗಿರಿ ಎಂದು ಕೇಳುತ್ತ ಭಾರ ಹೊತ್ತ ಹೃದಯದಿಂದ ತಮ್ಮಲ್ಲಿ ವಿನಮ್ರವಾಗಿ ಪ್ರಾರ್ಥಿಸುತ್ತೇನೆ.

ಕೊನೆಯದಾಗಿ ಬಾಬಾಸಾಹೇಬರ ಒಂದು ಮಾತು; ನನ್ನ ಈ ಹೋರಾಟದಲ್ಲಿ ನನ್ನ ಸಮಾಜದ ಬಂಧುಗಳೆ ನನ್ನ ಶತ್ರುಗಳ ಜೊತೆಗೆ ಸೇರಿಕೊಂಡರೂ ಚಿಂತೆಯಿಲ್ಲ, ನಾನು ಮಾತ್ರ ಬದುಕಿರುವವರೆಗೂ ಅವರ ಉದ್ಧಾರಕ್ಕಾಗಿ ಹೋರಾಡುತ್ತಲೇ ಇರುತ್ತೇನೆ.

ದತ್ತಾತ್ರೇಯ ಇಕ್ಕಳಕಿ
ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here