- ಕರುಣೇಶ.ಜಿ. ಪಾಟೀಲ್
ಶಹಾಬಾದ : ಹೂ ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಅದರಲ್ಲೂ ಹೆಂಗಸರಿಗೆ ತಲೆಗೆ ಮುಡಿಸಿಕೊಳ್ಳಲು, ಪೂಜೆ ಪುನಸ್ಕಾರಕ್ಕೆ, ಮದುವೆಗೆ ಹಾಗೂ ಅಲಂಕಾರಕ್ಕೆ ಸೀಮಿತವಾದದ್ದು ಎಂದು ತಿಳಿದ ವಿಷಯ. ಆದರೆ ಕೆಲವು ಹೂಗಳು ಬಳಕೆಗೆ ಅನರ್ಹವಾದರೂ ಪ್ರಕೃತಿಯ ಸೊಬಗನ್ನು ಇಮ್ಮಡಿಗೊಳಸುತ್ತಿವೆ. ಅಂಥಹ ಪಟ್ಟಿಯಲ್ಲಿ ಕಕ್ಕೆ ಮರ ಹೂ ಒಂದು. ಇವು ಹೆಚ್ಚಾಗಿ ಎಲ್ಲಾ ಪ್ರದೇಶಗಳಲ್ಲಿ ಬೆಳೆಯುವಂಥ ಮರಗಳು. ಪಟ್ಟಣದ ಜಿಇ ಕಾಲೋನಿಯಲ್ಲಿ ಎಲ್ಲೆಂದರಲ್ಲಿ ಹೂಗಳು ರಾರಾಜಿಸುತ್ತಿದ್ದು, ನಿತ್ಯ ಕಾರ್ಖಾನೆಗೆ ಹಾಗೂ ವಾಯು ವಿಹಾರಕ್ಕೆ ಹೋಗುವ ಜನರಿಗೆ ಈ ಹೂವಿನ ಸೌಂದರ್ಯ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಬೇಸಿಗೆಯಲ್ಲೇ ಅರಳುವ ಹೂವು, ನವಿಲಿನ ಪುಚ್ಛದಂತೆ ಜೋತು ಬಿದ್ದು ಎಲ್ಲರನ್ನು ಕೈಬಿಸಿ ಕರೆದಂತೆ ಕಾಣುತ್ತಿದೆ. ಮೇ-ಜೂನ್ ತಿಂಗಳಲ್ಲಿ ಅರಳುವ ಹಳದಿ ಬಣ್ಣದ ಪರಿಮಳ ಸೂಸುತ್ತಾ ನಗೆ ಚೆಲ್ಲಿ ನಿಲ್ಲುವ ಪರಿ ಚಿತ್ತಾಕರ್ಷಕ ಹಾಗೂ ವರ್ಣಾತೀತ.
ಬೇಸಿಗೆಯ ಬಿರು ಬಿಸಿಲಿಗೆ ಎಲೆಗಳು ಉದುರಿ ಹೋಗಿ ಬಟಾಬಯಲಾಗಿ ಒಣಗಿದಂತೆ ಕಾಣುವ ಈ ಮರ, ಹಳದಿ ಬಣ್ಣದ ಹೂಗೊಂಚಲಗಳಿಂದ ಮೈದುಂಬಿಕೊಂಡು ಕಂಗೊಳಿಸುವುದರಿಂದ ನೋಡುಗರ ಕಣ್ಮನ್ ಸೆಳೆಯುತ್ತದೆ. ಪುಷ್ಪ ಮಂಜರಿ ಎಂದು ಕರೆಯುವ ಗೊಂಚಲಗಳಲ್ಲಿ ಮೊಗ್ಗುಗಳು ಕೈಲಾಸದಿಂದ ಧರೆಗಿಳಿದು ಬಂದಂತೆ ಭ್ರಾಸವಾಗುತ್ತದೆ. ಅಲ್ಲದೇ ಒಂದಕ್ಕೊಂದು ಸರಪಣಿ ರಚನೆಯ ಮಣಿಗಳ ಹಾಗೇ ಮರದಲ್ಲಿ ಜೋತು ಬಿದ್ದಿರುವ ದೃಶ್ಯ ಮನಮೋಹಕವಾಗಿದ್ದು, ಒಗ್ಗಟ್ಟಿನ ಪ್ರದರ್ಶನ ಕೂಡ ತೋರುತ್ತಿದೆ. ಎತ್ತ ನೋಡಿದರೂ ಹಳದಿ ಬಣ್ಣ ರಾಚುತ್ತಾ ನಿಂತು ಪರಿಸರದ ಮೇಲೆ ಪ್ರಭುತ್ವ ಸಾಧಿಸಿ, ಮರಕ್ಕೂ ಪರಿಸರಕ್ಕೂ ಕಳೆ ತರುತ್ತಿದೆ.
ನಗರದ ಜಿಇ (ಎಬಿಎಲ್) ಕಾಲೋನಿಯಲ್ಲಿ ಹೋದರೆ ಗಿಡಮರಗಳಿಂದ ಕೂಡಿದ ಕಾಡಿನಂತೆ ಗೋಚರಿಸುತ್ತದೆ.ಹಚ್ಚ ಹಸುರಿನಿಂದ ಕೂಡಿದ ಈ ಭಾಗದ ಮಲೆನಾಡೆಂದು ಹೆಸರುವಾಸಿಯಾದ ಕಾಲೋನಿಯಲ್ಲಿ ಬೇಸಿಗೆಯಲ್ಲಿ ಕಕ್ಕೆ ಮರ ಹಾಗೂ ಗುಲ್ ಮೋಹರ್ ಮರದ ಹೂಗಳನ್ನು ನೋಡಿ ಆನಂದಿಸುತ್ತೆವೆ.ಆದರೆ ಇಲ್ಲಿನ ಕಾರ್ಖಾನೆ ಮುಚ್ಚಿಹೋಗಿ ಗಿಡ ಮರಗಳ ನಿರ್ವಹಣೆಯಿಲ್ಲದಿರುವುದು ಮಾತ್ರ ಬೇಸರ- ಕಿರಣಕುಮಾರ ಚವ್ಹಾಣ
ಕಾಲೋನಿಯಲ್ಲಿ ಹೇರಳವಾದ ಸಸ್ಯ ಸಂಪತ್ತಿದೆ.ಈ ಹಿಂದೆ ಎಬಿಎಲ್ ಕಾರ್ಖಾನೆ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಸಾಕಷ್ಟು ಗಿಡಮರಗಳನ್ನು, ಹೂಗಿಡಗಳನ್ನು ರಸ್ತೆಯ ಬದಿಯಲ್ಲಿ ಬೆಳೆಸುತ್ತಿದ್ದರು.ಅಲ್ಲದೇ ಕಾರ್ಮಿಕರಿಗೆ ಗಿಡಮರಗಳ ರಕ್ಷಣೆ, ಹೂವಿನ ಸಸಿಗಳನ್ನು ಕೊಟ್ಟು ಮನೆಯ ಅಂಗಳದಲ್ಲಿ ಬೆಳೆಸಲು ಪ್ರೋತ್ಸಾಹಿಸುತ್ತಿದ್ದರು.ಅಲ್ಲದೇ ಉತ್ತಮವಾಗಿ ಬೆಳೆದವರಿಗೆ ಬಹುಮಾನ ನೀಡುತ್ತಿದ್ದರು.ಆ ಸಂದರ್ಭದಲ್ಲಿ ಕಾಲೋನಿಯಲ್ಲಿ ಎಲ್ಲಿ ನೋಡಿದರಲ್ಲಿ ಹೂಗಳೇ ಕಾಣ ಸಿಗುತ್ತಿದ್ದವು.ಆದರೆ ಆ ಕಳೆ ಈಗಿಲ್ಲ ಎಂಬುದೆ ನೋವು- ನಿಂಗಣ್ಣ ಹುಳಗೋಳಕರ್ ಸ್ಥಳೀಯ ನಿವಾಸಿ.
ಇದರ ವೈಜ್ಞಾನಿಕ ಹೆಸರು ಕ್ಯಾಲ್ಸಿಯಾ ಫಿಸ್ಟುಲೆ ಎಂದು. ಫ್ಯಾಬಿಯೆಸಿ ಕುಟುಂಬಕ್ಕೆ ಸೇರಿರುವ ಈ ಮರ ಔಷಧಿಯ ಗುಣಗಳನ್ನು ಹೊಂದಿದೆ. ಮರದ ಬೇರನ್ನು ಸುಟ್ಟು ಅದರ ಹೊಗೆಯನ್ನು ತೆಗೆದು ಕೊಂಡರೆ ನೆಗಡಿ ಉಪಶಮನವಾಗುತ್ತದೆ. ಬೇರಿನ ಕಷಾಯ ಕುಡಿದರೆ ಜ್ವರ ಮತ್ತು ಕರುಳಿಗೆ ಸಂಬಂಧಿಸಿದ ಕಾಯಿಲೆಗಳು ವಾಸಿಯಾಗುತ್ತಲ್ಲದೇ, ಇದರ ಎಲೆಗಳು, ಕಾಯಿಗಳು ಕಾಲೊಡೆದರೆ, ಗಜಕರ್ಣ, ಬಾವು, ನೋವು ಹಾಗೂ ಮುಖಕ್ಕೆ ಸಂಬಂಧಿಸಿದ ಪಾಶ್ರ್ವವಾಯು ರೋಗಕ್ಕೂ ರಾಮಬಾಣವಾಗಿದೆ. ಇಂದಿಗೂ ನಾಟಿ ವೈದ್ಯರು ಇದನ್ನು ಬಳಸುತ್ತಾರೆ ಎಂದು ತೋಟಗಾರಿಕೆ ತಜ್ಞರಾದ ಆರ್.ಎ. ಮಹೀಂದ್ರಕರರವರು ತಿಳಿಸುತ್ತಾರೆÉ.
ಮರದ ತುಂಬೆಲ್ಲಾ ಹೂಗಳೇ ಹರಡಿಕೊಂಡು ಎಲೆಗಳನ್ನು ಗುರುತಿಸುವುದು ಅಸಾಧ್ಯವಾದ ರೀತಿಯಲ್ಲಿ ಮದುವೆಗೆ ಶೃಂಗಾರಗೊಂಡ ಮದುವಣಗಿತ್ತಿಯಂತೆ ನೋಡುಗರ ಹೃದಯಕ್ಕೆ ಮುದ ನೀಡುತ್ತದೆ. ಅದಕ್ಕೆ “ಹೂವು ಚೆಲುವೆಲ್ಲಾ ನನೆಂದಿತು” ಎಂಬುದು ಅಕ್ಷರಃ ಸಹ ಸತ್ಯವಾದರೂ ಹೂವಿಗೆ ಹೂಗಳೇ ಸರಿಸಾಟಿ. ಇಂತಹ ಅದೆಷ್ಟೋ ಹೂಗಳು ಪ್ರಕೃತಿಯ ಮಡಿ¯ಲ್ಲಿ ಅಡಗಿವೆಯೋ ?