ವಾಡಿ: ಪಟ್ಟಣದಲ್ಲಿ ತಾಪಮಾನ ಹೆಚ್ಚಾಗಿದ್ದು, ರಣಬಿಸಿಲಿಗೆ ಜನರು ತತ್ತರಿಸಿ ಹೋಗಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ನೆರಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‍ಯುಸಿಐ) ಕಮ್ಯೂನಿಸ್ಟ್ ಪಕ್ಷ ಆಗ್ರಹಿಸಿದೆ.
ಈ ಕುರಿತು ಸೋಮವಾರ ಸ್ಥಳೀಯ ಪುರಸಭೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿರುವ ಎಸ್‍ಯುಸಿಐ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ, ಬಿಸಿಲಿನ ಆರ್ಭಟ ಆರಂಭವಾಗಿ ತಿಂಗಳು ಕಳೆದಿದೆ. ಸಹಜವಾಗಿ ಬೇಸಿಗೆ ತಿಂಗಳಲ್ಲಿ ತಾಪಮಾನ ಹೆಚ್ಚಾಗುತ್ತದೆ ಎಂಬುದು ಅಧಿಕಾರಿಗಳಿಗೆ ತಿಳಿದಿರುವ ಸಂಗತಿ.
ಈ ವರ್ಷ ತಾಮನಾದಲ್ಲಿ ಗರಿಷ್ಠ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಜನರು ಮನೆಯಿಂದ ಹೊರ ಬರಲಾಗದಷ್ಟು ಭಯಂಕರ ಬಿಸಿಲು ಕಂಡುಬಂದಿದೆ. ವಾಡಿ ಪಟ್ಟಣದ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಪುರಸಭೆ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಕೆಂಡದಂತಹ ರಸ್ತೆಗಳಿಗೆ ನೀರು ಸಿಂಪರಣೆ ಮಾಡಿಲ್ಲ. ಪ್ರಯಾಣಿಕರು ಸುಡು ಬಿಸಿಲಿನಲ್ಲಿ ನಿಂತು ಬಸ್‍ಗಳಿಗಾಗಿ ಕಾಯಬೇಕಾದ ದುಸ್ಥಿತಿ ಸೃಷ್ಠಿಯಾಗಿದೆ. ನೆರಳಿನ ವ್ಯವಸ್ಥೆ ಎಂಬುದು ಯಾವೂದೇ ವೃತ್ತದಲ್ಲಿ ಕಂಡುಬರುತ್ತಿಲ್ಲ ಎಂದು ದೂರಿದ್ದಾರೆ.
ಪುರಸಭೆ ಅಧಿಕಾರಿಗಳು ಹೊಣೆಗಾರಿಕೆ ಮರೆತು ವರ್ತಿಸುತ್ತಿದ್ದಾರೆ. ಜನರಿಗೆ ತೊಂದರೆಯಾಗುತ್ತಿದ್ದರೂ ಬೇಸಿಗೆಯ ಮುಂಜಾಗೃತ ಕ್ರಮಗಳನ್ನು ಅನುಸರಿಸಿಲ್ಲ. ಪುರಸಭೆಯ ಚುನಾಯಿತ ಜನಪ್ರತಿನಿಧಿಗಳ ಅಧಿಕಾರಾವದಿ ಮುಗಿದ್ದಿದ್ದರಿಂದ ಅಧಿಕಾರಿಗಳಿಗೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ವೀರಭದ್ರಪ್ಪ ಆರ್.ಕೆ, ಪಟ್ಟಣದ ಬಸ್ ನಿಲ್ದಾಣ ಪ್ರದೇಶದಲ್ಲಿ ನೀರು ನೆರಳಿನ ವ್ಯವಸ್ಥೆ ಕಲ್ಪಿಸಲು ಮೊದಲ ಆಧ್ಯತೆ ನೀಡಬೇಕು.
ಇನ್ನುಳಿದ ಪ್ರಮುಖ ವೃತ್ತಗಳಲ್ಲಿ ಕುಡಿಯುವ ನೀರಿನ ಅರವಟ್ಟಿಗೆ ವ್ಯವಸ್ಥೆ ಮಾಡಬೇಕು. ಕಾದು ಕೆಂಡವಾಗಿರುವ ಕಾಂಕ್ರೀಟ್ ರಸ್ತೆಗಳಿಗೆ ಸತತವಾಗಿ ನೀರು ಸಿಂಪರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಎಸ್‍ಯುಸಿಐ ಪಕ್ಷದ ಮುಖಂಡರಾದ ಗುಂಡಣ್ಣ ಕುಂಬಾರ, ಶರಣು ಹೇರೂರ, ಈರಣ್ಣ ಇಸಬಾ, ಗೌತಮ ಪರ್ತೂರಕರ, ದತ್ತು ಹುಡೇಕರ ಇದ್ದರು.