- ಅರುಣ್ ಜೋಳದ ಕೂಡ್ಲಗಿ
ಗೆಳೆಯರೊಬ್ಬರು…
ನನ್ನ ಬಳಿ ಅಂಬೇಡ್ಕರ್ ಬಗ್ಗೆ
ಬಳಿ ತುಂಬಾ ಪುಸ್ತಕಗಳಿವೆ. ಹಾಗಾಗಿ ‘ಜೈ ಭೀಮ್ ‘ ಪುಸ್ತಕ ಅಂಥಹದ್ದೇ ಒಂದು ಪುಸ್ತಕ ಆಗಿರುತ್ತೆ ಅಂತ ತಗೊಂಡಿಲ್ಲ. ಆದರೆ ಈ ಪುಸ್ತಕ ಅಂಬೇಡ್ಕರ್ ಬಗೆಗಿನ ಬೇರೆ ಪುಸ್ತಕಗಳಿಗಿಂತ ಹೇಗೆ ಭಿನ್ನ? ಮತ್ತೆ ಏಕೆ ಓದಬೇಕು ಅಂತ ಸಂಕ್ಷಿಪ್ತವಾಗಿ ತಿಳಿಸಿ ತಗೊಂಡು ಓದ್ತಿನಿ ಅಂದರು.
ಈ ಅನಿರೀಕ್ಷಿತ ಪ್ರಶ್ನೆಗೆ ತಕ್ಷಣ ಏನು ಉತ್ತರಿಸುವುದು ಎಂದು ತಡಕಾಡಿದೆ. ಸ್ವಲ್ಪ ಸಮಯ ಬಿಟ್ಟು ಹೇಳುವೆ, ನಂತರ ತಿಳಿಸುವೆ ಎಂದು ತಕ್ಷಣದ ಅವಸರದ ಪ್ರತಿಕ್ರಿಯೆಯಿಂದ ತಪ್ಪಿಸಿಕೊಂಡೆ..ಚೂರು ನಿಧಾನಕ್ಕೆ ಆತನಿಗೆ ಹೀಗೆ ಬರೆದೆ..
ಅಂಬೇಡ್ಕರ್ ಅವರನ್ನು ಓದುವ ಕುತೂಹಲ ಮತ್ತು ಒಂದು ಪುಸ್ತಕವನ್ನು ಕೊಳ್ಳುವಾಗ ಅದರಲ್ಲಿ ಹೊಸದೇನಿದೆ ಎಂದು ಪರಿಶೀಲಿಸುವ ನಿಮ್ಮ ಪ್ರಬುದ್ಧತೆಗೆ ಶರಣು.
ಜೈಭೀಮ್ ಪುಸ್ತಕವನ್ನು ಏಕೆ ಓದಬೇಕು?ಎಂದು ಕೇಳಿದ ನಿಮ್ಮ ಪ್ರಶ್ನೆ ಸರಿಯಾಗೇ ಇದೆ. ಮೊದಲನೆಯದಾಗಿ ಇದು ನಾನು ಪೂರ್ತಿ ಬರೆದ ಪುಸ್ತಕವಲ್ಲ. ಅಂಬೇಡ್ಕರ್ ಅವರ ಬಗೆಗೆ ಹಲವರ ಹಲವು ನೆಲೆಯಿಂದ ಬರೆದ ಬರಹಗಳನ್ನು ಸಂಪಾದಿಸಿರುವೆ. 2020 ರ ಏಪ್ರಿಲ್ ಅಂಬೇಡ್ಕರ್ ವಿಶೇಷ ಸಂಚಿಕೆಗೆ ಅತಿಥಿ ಸಂಪಾದಕನಾಗಿ ಇದು ಅಂಬೇಡ್ಕರ್ ಬಗ್ಗೆ ಹೊಸ ಆಲೋಚನೆಗಳಿಗೆ ನೆರವಾಗುವಂತಿರಬೇಕು ಮತ್ತು ಹೊಸ ತಲೆಮಾರಿನ ಚಿಂತನೆ ಪ್ರಧಾನವಾಗಿರಬೇಕು ಎಂದು ನಿರ್ಧರಿಸಿ ಆಯ್ದ ಲೇಖಕರಿಂದ ಬರೆಸಿದೆ.
ಪ್ರೊ.ಬರಗೂರು ರಾಮಚಂದ್ರಪ್ಪ, ಪ್ರೊ.ಕೆ.ವಿ.ನಾರಾಯಣ, ಜಿ.ರಾಜಶೇಖರ್, ಕೆ.ಫಣಿರಾಜ್, ಪುರುಷೋತ್ತಮ ಬಿಳಿಮಲೆ, ಮೇಟಿ ಮಲ್ಲಿಕಾರ್ಜುನ, ಶ್ರೀಪಾದ ಭಟ್ ಅಂಬೇಡ್ಕರ್ ಕುರಿತು ಮರುಶೋಧಕ್ಕೆ ಬೇಕಾದ ಟಿಪ್ಪಣಿಗಳನ್ನು ಬರೆದರು.
ಭಾರತದ ಯುವ ಚಿಂತಕ, ಅಂಬೇಡ್ಕರ್ ಚಿಂತನೆಯನ್ನು ಜಾಗತಿಕ ನೆಲೆಯಲ್ಲಿ ಚರ್ಚಿಸುತ್ತಿರುವ ಸೂರಜ್ ಯಂಗ್ಡೆ ಮತ್ತೊಬ್ಬ ಯಂಗ್ ಅಂಬೇಡ್ಕರೈಟ್ ಆರ್ಟಿಸ್ಟ್ ಶ್ಯಾಮಸುಂದರ್ ಬಗ್ಗೆ ಬರೆದ ಲೇಖನವನ್ನು ಗೆಳೆಯ ಶ್ರೀನಿವಾಸ ದೊಡ್ಡೇರಿ ಅನುವಾದಿಸಿದ್ದಾರೆ. ಅಂತೆಯೇ ಸೂರಜ್ ಯಂಗ್ಡೆ ಅವರ ಬಹುಚರ್ಚಿತ ಪುಸ್ತಕ ‘ ಕಾಸ್ಟ್ ಮ್ಯಾಟರ್ಸ್’ ಬಗ್ಗೆ ಲೇಖಕಿ ಭಾರತೀದೇವಿ ವಿಮರ್ಶಾತ್ಮಕವಾಗಿ ಪರಿಚಯಿಸಿದ್ದಾರೆ.
ಹೊಸ ತಲೆಮಾರಿನ ಚಿಂತಕರಾದ ಶಶಿಕುಮಾರ್ ಅಂಬೇಡ್ಕರ್ ಅವರನ್ನು ಗ್ರಾಂಮ್ಷಿ ಚಿಂತನೆಗಳೊಂದಿಗೆ ಹೋಲಿಸಿ ಚರ್ಚಿಸಿದ್ದಾರೆ. ಇದು ಈ ಕೃತಿಯ ಮಹತ್ವದ ಲೇಖನಗಳಲ್ಲೊಂದು. ಅಂತೆಯೇ ಅಂಬೇಡ್ಕರ್ ಫ್ಯಾನನ್ ಗಾಂಧಿ ಕುರಿತ ಮನಶ್ ಫಿರಾಕ್ ಭಟ್ಟಾಚಾರ್ಜಿ ಬರೆದ ಲೇಖನವನ್ನು ಡಾ.ವೈ ರಮೇಶ್ ಅನುವಾದಿಸಿದ್ದಾರೆ. ಈ ಎರಡೂ ಲೇಖನಗಳು ಅಂಬೇಡ್ಕರ್ ಚಿಂತನೆಯನ್ನು ಜಾಗತಿಕ ಚಿಂತಕರ ಜತೆಗಿಟ್ಟು ನೋಡಿದ ಒಳನೋಟದ ಬರಹಗಳಿವು. ಪ್ರದೀಪ್ ಅತ್ರಿ ಬರೆದ ಹಂಗೇರಿಯಲ್ಲಿ ಅಂಬೇಡ್ಕರ್ ಹೇಗೆ ಬೇರುಬಿಟ್ಟಿದ್ದಾರೆ ಎನ್ನುವ ಬರಹವನ್ನು ಪರಿಮಳ ಕಮತರ ಅನುವಾದಿಸಿದ್ದಾರೆ.
ಸಲೀಮ್ ಯುಸೂಫಜಿ ಅವರ ಚರ್ಚಿತ ಕೃತಿ ‘Ambedkar: The attendant Details’ ಕೃತಿಯನ್ನು ಸುಭಾಷ್ ರಾಜಮಾನೆ ಪರಿಚಯಿಸಿದ್ದಾರೆ. ಭಾರತದ ಕೃಷಿಯ ಬಿಕ್ಕಟ್ಟನ್ನು ಅಂಬೇಡ್ಕರ್ ಅರ್ಥೈಸಿದ ಬಗೆಯನ್ನು ಅನುಸೂಯ ಕಾಂಬಳೆ ಕಟ್ಟಿಕೊಟ್ಟಿದ್ದಾರೆ. ಡಾ.ಎ.ಅನಿಲ್ ಕುಮಾರ್ ಪೌರತ್ವವನ್ನು ಆಧರಿಸಿ ದೀರ್ಘವಾದ ಚರ್ಚೆ ಮಾಡಿದ್ದಾರೆ.
ಅಂಬೇಡ್ಕರ್ ವಕೀಲರಾಗಿ ಹೇಗೆ ವಕೀಲಕಿ ಮಾಡಿದರು ಎನ್ನುವ ಬಗ್ಗೆ ವಿಕಾಸ್ ಆರ್ ಮೌರ್ಯ ಅಂಬೇಡ್ಕರ್ ಹೇಗೆ ‘ಬಡವರ ಬ್ಯಾರಿಸ್ಟರ್’ ಆಗಿದ್ದರು ಎನ್ನುವುದನ್ನು ವಿಶ್ಲೇಷಿಸಿದ್ದಾರೆ. ಗೆಳೆಯ ರಮೇಶ್ ಅರೋಲಿ ಅಂಬೇಡ್ಕರ್ ರೂಪಿಸಿದ ಪತ್ರಿಕೆಗಳ ಕಣ್ಣೋಟದ ಮೂಲಕ ಅಂಬೇಡ್ಕರ್ ಅವರ ಪತ್ರಿಕಾ ವೃತ್ತಿಯ ನೈತಿಕತೆ ಬಗ್ಗೆ ಚರ್ಚಿಸಿದ್ದಾರೆ.
ಗೆಳೆಯರಾದ ರಂಗನಾಥ ಕಂಟನಕುಂಟೆ ವರ್ತಮಾನದಲ್ಲಿ ಅಂಬೇಡ್ಕರ್ ಅವರನ್ನು ಹೇಗೆ ಪರಿಭಾವಿಸಬೇಕು ಎಂದು ಬರೆದರೆ, ಮತ್ತೊಬ್ಬ ಗೆಳೆಯ ಪ್ರದೀಪ್ ಕೆಂಚನೂರ್ ಸಮಾಜವಾದದ ಪ್ರಸ್ತುತತೆ ಮತ್ತು ಅಂಬೇಡ್ಕರ್ ಕುರಿತು ಬರೆದಿದ್ದಾರೆ. ರಘೋತ್ತಮ ಹೋ.ಬ ಅವರು ಅಂಬೇಡ್ಕರ್ ಅವರ ಬಹುಚರ್ಚಿತ ಅಂಬೇಡ್ಕರ್ ಕೃತಿ ‘Pakistan or partition of India’ ಪಾಕಿಸ್ತಾನ ಅಥವಾ ಭಾರತದ ವಿಭಜನೆ ಕೃತಿ ಕುರಿತು ಚರ್ಚಿಸಿದ್ದಾರೆ.
ಹಿರಿಯರಾದ ನಟರಾಜ ಹುಳಿಯಾರ್ ಅವರ ‘ಬಾಬಾ ಸಾಹೇಬ್ ಮತ್ತು ಡಾಕ್ಟರ್ ಸಾಹೇಬ್’ ಎನ್ನುವ ಕವಿತೆಯಿದೆ. ನಾನು ಬರೆದ ಎರಡು ಲೇಖನಗಳಿವೆ. ಒಂದು ಪ್ಯಾಸಿಜಮ್ ಬಗ್ಗೆ ಅಂಬೇಡ್ಕರ್ ಕೊಟ್ಟ ಎಚ್ಚರಿಕೆಯ ಬಗ್ಗೆ ಮತ್ತು ‘ಕೊಂಡಗುಳಿಯ ದಲಿತರು ದೇವರುಗಳಿಗೆ ಬೆಂಕಿ ಹಚ್ಚಿ ಬೌದ್ಧ ಧರ್ಮ ಸ್ವೀಕರಿಸಲು ಬುದ್ಧ ಅಂಬೇಡ್ಕರ್ ಅವರ ಜನಪದ ಗೀತೆಗಳು ಹೇಗೆ ಪ್ರೇರಣೆಯಾದವು? ಎಂಬ ಸಮಕಾಲೀನವಾಗಿ ಜನರಲ್ಲಿ ಬೇರುಬಿಟ್ಟ ಬುದ್ಧ- ಅಂಬೇಡ್ಕರ್ ಬಗ್ಗೆ ವಿಮರ್ಶಾತ್ಮಕ ನೋಟದ ಟಿಪ್ಪಣಿ ಬರೆದಿರುವೆ. ಉಳಿದಂತೆ ಪಿ.ಮಹಮದ್ ಮತ್ತು ದಿನೇಶ್ ಕುಕ್ಕಜಡ್ಕ ಅವರ ಕಾರ್ಟೂನ್ ಗಳನ್ನು ಬಳಸಿಕೊಳ್ಳಲಾಗಿದೆ.
ಇದಿಷ್ಟನ್ನು ಕೃತಿ ಒಳಗೊಂಡಿದೆ. 190 ಪುಟಗಳ ಪುಸ್ತಕವಿದು.
ಈ ವಿಶೇಷ ಸಂಚಿಕೆಯನ್ನು ಪಿಡಿಎಫ್ ವಿತರಿಸಿದಾಗ ಅನೇಕರು ಈ ಸಂಚಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದನ್ನು ನಟರಾಜ ಹುಳಿಯಾರ್, ಬಿಳಿಮಲೆ ಸರ್ ಇದನ್ನು ಪುಸ್ತಕ ರೂಪದಲ್ಲಿ ತನ್ನಿ ಎಂದು ಒತ್ತಾಯಿಸಿದ್ದರು. ಈ ಪ್ರೀತಿಯ ಒತ್ತಾಯವೇ ಈಗ ‘ಜೈಭೀಮ್’ ಪುಸ್ತಕವಾಗಿದೆ.
ಈ ಪುಸ್ತಕ ಸಂಪಾದಕ ಎನ್ನುವ ಅಭಿಮಾನದಿಂದ ಹೊರ ಬಂದು ಹೇಳುವುದಾದರೆ, ಇಡೀ ಪುಸ್ತಕದ ಓದು ಅಂಬೇಡ್ಕರ್ ಬಗೆಗೆ ನಮ್ಮ ತಿಳುವಳಿಕೆಯನ್ನು ಸ್ವಲ್ಪಮಟ್ಟಿಗಾದರೂ ಹೆಚ್ಚಿಸುತ್ತದೆ, ಅಂಬೇಡ್ಕರ್ ಬಗೆಗಿನ ತಿಳಿವಿನ ಎಲ್ಲೆಗಳನ್ನು ವಿಸ್ತರಿಸಿ ತಾಜಾ ಅನ್ನಿಸುತ್ತದೆ. ಖಂಡಿತಾ ಇಷ್ಟು ಭರವಸೆ ಕೊಡಬಲ್ಲೆ.
ಈ ಕಾರಣಕ್ಕಾಗಿ ‘ಜೈಭೀಮ್’ ಕನ್ನಡದಲ್ಲಿ ಬಂದ ಇತರೆ ಅಂಬೇಡ್ಕರ್ ಬಗೆಗಿನ ಕೃತಿಗಳಿಗಿಂತ ಭಿನ್ನವಾಗಿದೆ ಮತ್ತು ಹೊಸತಾಗಿದೆ. ಈ ಕಾರಣಕ್ಕಾಗಿ ನೀವು ‘ಜೈಭೀಮ್’ ಕೃತಿಯನ್ನು ಓದಬಹುದಾಗಿದೆ.ಎಂದು ಗೆಳೆಯರಿಗೆ ಉತ್ತರಿದೆ.ಅವರು ಖಂಡಿತಾ ಖರೀದಿಸಿ ಓದುವೆ ಧನ್ಯವಾದಗಳು ಎಂದರು..
(ಈಚೆಗೆ 9 ನೇ ತಾರೀಕು ಬೆಂಗಳೂರಿನಲ್ಲಿ ನಡೆದ ಭೀಮ ಸಂಕಲ್ಪ ಕಾರ್ಯಕ್ರಮದಲ್ಲಿ 50 ಜೈಭೀಮ್ ಕೃತಿಗಳನ್ನು ಕೊಂಡು ಕಾರ್ಯಕರ್ತರಿಗೆ ಕೊಟ್ಟಿದ್ದಾರೆ. ಒಂದು ಪ್ರತಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸರ್ ಗೂ ಕಾಣಿಕೆಯಾಗಿ ಕೊಡಲಾಗಿದೆ.)
ಈ ಪ್ರಶ್ನೆ ಅನೇಕರಲ್ಲಿ ಇರಬಹುದು ಎನ್ನುವ ಕಾರಣಕ್ಕೆ ಈ ಟಿಪ್ಪಣಿಯನ್ನು ನಿಮ್ಮೊಂದಿಗೆ ಹಂಚಿಕೊಂಡಿರುವೆ.
ಕೌದಿ ಪ್ರಕಾಶನ ಪ್ರಕಟಿಸಿದೆ, ಬೆಲೆ 250/- (ರಿಯಾಯಿತಿ ಬೆಲೆ 220/- ಅಂಚೆವೆಚ್ಚ ಸೇರಿ.
ಒಂದು ಪ್ರತಿ ಕೊಂಡರೆ- 10%
ಹತ್ತಕ್ಕಿಂತ ಹೆಚ್ಚು ಪ್ರತಿ – 25%
ಐವತ್ತಕ್ಕಿಂತ ಹೆಚ್ಚು 40%)
ಪುಸ್ತಕದ ಪ್ರತಿಗಳಿಗೆ ಸಂಪರ್ಕಿಸಿ
ಡಾ. ಮಮತಾ ಕೆ. ಎನ್
ಫೋನ್ : 9008660371