ಬಿಜೆಪಿ ವಿರುದ್ಧ ಕಾಂಗ್ರೆಸ್ ಹಿರಿಯ ಮುಖಂಡ ಶರಣಪ್ಪ ಸಲಾದಪುರ ಕಿಡಿ
ಕಲಬುರಗಿ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ ಹಾಗೂ ಬಿಜೆಪಿಯವರು ಪ್ರಧಾನಿ ಮೋದಿ ನೋಡಿ ತಮಗೆ ಮತಹಾಕಿ ಎಂದು ಮನವಿ ಮಾಡಿಕೊಳುತ್ತಿದ್ದಾರೆ. ಬಿಜೆಪಿಯವರು ಹೇಳುವುದನ್ನು ನೋಡಿದರೆ ಮಗನನ್ನು ನೋಡಿ ಹೆಣ್ಣು ಕೊಡಬೇಕೋ? ತಂದೆಯನ್ನು ನೋಡಿ ಹೆಣ್ಣು ಕೊಡಬೇಕೋ ಎನ್ನುವಂತಿದೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಶರಣಪ್ಪ ಸಲಾದಪುರ ವ್ಯಂಗ್ಯವಾಡಿದರು.
ಜೇವರ್ಗಿ ತಾಲೂಕಿನ ಆಂದೋಲ, ಕೊಡಚಿ, ಗಂವ್ವಾರ, ನೇರಡಗಿ, ಮುಂತಾದ ಕಡೆ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಪ್ರಧಾನಿ ಮೋದಿ ಅವರು ಐದು ವರ್ಷದ ತಮ್ಮ ಅಧಿಕಾರಾವಧಿಯಲ್ಲಿ ಏನೊಂದು ಜನೋಪಯೋಗಿ ಕಾರ್ಯಮಾಡದೆ, ದೇಶ, ಭಾಷೆ, ಗಡಿ, ಸೈನಿಕ, ಮುಂತಾದ ಭಾವನಾತ್ಮಕ ವಿಷಯಗಳನ್ನೇ ಚುನಾವಣಾ ಅಸ್ತ್ರ ಮಾಡಿಕೊಂಡು ಹೊರಟಿದ್ದಾರೆ ಎಂದು ಗೇಲಿ ಮಾಡಿದರು.
ರೈತರ ಸಾಲ ಮನ್ನ ಮಾಡದೆ, ಸುಮಾರು ಮೂರು ಸಾವಿರ ಕೋಟಿ ರೂಪಾಯಿ 14 ಜನ ಕಾರ್ಪೂರೆಟ್ ಗಳ ಸಾಲ ಮನ್ನ ಮಾಡಿ ರೈತ ಸಮುಹಕ್ಕೆ ದ್ರೋಹ ಬಗೆದಿದ್ದಾರೆ. ತಾವು ಮುನ್ನಡೆಸುವ ಸರಕಾರದ ಅಧಿವೇಶನದಲ್ಲೂ ಹೆಚ್ಚು ಕಾಲ ಕುಳಿತುಕೊಳ್ಳದೆ, ವಿದೇಶ ಪ್ರವಾಸದಲ್ಲೇ ಕಾಲಹರಣ ಮಾಡಿದ್ದಾರೆ ಎಂದು ಟೀಕಿಸಿದರು.
ಆದರೆ ಪ್ರತಿಪಕ್ಷದ ನಾಯಕರಾಗಿದ್ದ, ಮಲ್ಲಿಕಾರ್ಜುನ ಖರ್ಗೆ ಅವರು, ಅಭಿವೃದ್ಧಿಯ ಕೆಲಸದ ಜೊತೆಗೆ ಒಬ್ಬ ಸಮರ್ಥ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಖರ್ಗೆ ಅವರಿಗೆ ಮತ ಹಾಕುವ ಮೂಲಕ ಅವರನ್ನು ಗೆಲ್ಲಿಸಿ ಕಳುಹಿಸಬೇಕೆಂದು ಅವರು ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.