ಕಲಬುರಗಿ, ಅ.10 – ಜಿಲ್ಲೆಯ ಸೇಡಂ ತಾಲೂಕಿನ ಇಬ್ಬರು ಕವಿಗಳಾದ ಮಹಿಪಾಲರೆಡ್ಡಿ ಮುನ್ನೂರ್ ಮತ್ತು ಪ್ರಭಾಕರ ಜೋಶಿ ಹಾಗೂ ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಮುಮ್ತಾಜ್ ಬೇಗಂ ಅವರನ್ನು ಈ ಬಾರಿಯ ಪ್ರಖ್ಯಾತ ಮೈಸೂರು ದಸರಾ ಕವಿಗೋಷ್ಟಿಗೆ ಆಯ್ಕೆ ಮಾಡಲಾಗಿದೆ.
ಅಕ್ಟೋಬರ್ 17 ರಂದು ಬೆಳಿಗ್ಗೆ 11.30 ಕ್ಕೆ ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ನಡೆಯುವ `ಕಾವ್ಯ ಸಂಭ್ರಮ’ ಶೀರ್ಷಿಕೆಯಡಿ ಕವಿಗೋಷ್ಠಿಯಲ್ಲಿ ಪತ್ರಕರ್ತ ಮತ್ತು ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ಭಾಗವಹಿಸುವರು. ಈ ಕವಿಗೋಷ್ಠಿಯನ್ನು ಪ್ರಸಿದ್ದ ಕವಿ ಜಯಂತ್ ಕಾಯ್ಕಿಣಿ ಉದ್ಘಾಟಿಸುವರು.
ಅಕ್ಟೊಬರ್ 21 ರಂದು ಬೆಳಿಗ್ಗೆ 11 ಕ್ಕೆ ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ನಡೆಯುವ ಪ್ರಧಾನ ಕವಿಗೋಷ್ಠಿಯಲ್ಲಿ ಪತ್ರಕರ್ತ ಮತ್ತು ಲೇಖಕ ಪ್ರಭಾಕರ ಜೋಶಿ ಅವರು ಭಾಗವಹಿಸುವರು. ಹಿರಿಯ ಕವಯಿತ್ರಿ ಶಶಿಕಲಾ ವಸ್ತ್ರದ ಅವರು ಕವಿಗೋಷ್ಠಿಯನ್ನು ಉದ್ಘಾಟಿಸುವರು ಎಂದು ದಸರಾ ಕವಿಗೋಷ್ಠಿ ವಿಭಾಗದ ಪ್ರಕಟಣೆ ತಿಳಿಸಿದೆ.