ಈಡಿಗ ಸಮಾಜ ಒಡೆಯಲು ಯತ್ನಿಸಿದ ಬೆಂಗಳೂರು ಸಮಾವೇಶಕ್ಕೆ ಆಕ್ರೋಶ

0
40

ಕಲಬುರಗಿ: ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಮಾಜದ ವತಿಯಿಂದ ಡಿ.  10 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಮಾವೇಶದಿಂದ ಸಮಾಜಕ್ಕೆ ಸಮಾಜಕ್ಕಾಗಿ ಯಾವುದೇ ಲಾಭವಾಗಲಿಲ್ಲ, ಕೇವಲ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಿದೆ ಎಂದು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ. ಗುತ್ತೇದಾರ್ ಮತ್ತು ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಾವೇಶ ನಡೆಸಿದರೂ  ಸಮಾಜಕ್ಕಾಗಿ ಯಾವುದೇ ಘೋಷಣೆಗಳಿಲ್ಲದೆ ಚಿಕ್ಕಾಸು ಕೂಡ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಸ್ವಾರ್ಥ ಕೂಟದ ನಾಯಕರಿಂದ ನಡೆದ ಈ ಸಮಾವೇಶವು ಸಮಾಜವನ್ನು ಇಬ್ಬಾಗ ಮಾಡಿ ಒಗ್ಗಟ್ಟನ್ನು ಮುರಿಯಲು ಮಾಡಿದ ಪ್ರಯತ್ನವೇ ಹೊರತು ಇದರಿಂದ ಸಮಾಜಕ್ಕೆ ಯಾವುದೇ ರೀತಿಯಲ್ಲೂ ಲಾಭವಾಗಿಲ್ಲ. ಪ್ರದೇಶ ಆರ್ಯ ಈಡಿಗ ಸಂಘಕ್ಕೆ  75 ವರ್ಷಗಳು ಸಂದ  ಸಂದರ್ಭದಲ್ಲಿ ಅಮೃತ ಮಹೋತ್ಸವವನ್ನು ಆಚರಿಸುವ ಬದಲು 79ನೇ ವರ್ಷದಲ್ಲಿ ಆಚರಿಸಲು ಮುಂದಾಗಿರುವುದು ನಿಜಕ್ಕೂ ಹಾಸ್ಯಾಸ್ಪದ. ಬೆಂಗಳೂರು ಕೇಂದ್ರಿತ ಈ ಸಂಘವು ಒಮ್ಮಿಂದೊಮ್ಮಲೆ ರಾಜ್ಯಕ್ಕೆ ವಿಸ್ತರಿಸಲು ಮನಸ್ಸು ಮಾಡಿರುವುದು ರಾಜಕೀಯ ದುರುದ್ದೇಶ ಹೊರತು ಬೇರೇನು ಕಾಣುವುದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಮುಖ್ಯಮಂತ್ರಿಗಳನ್ನು ತಪ್ಪು ಹಾದಿಗೆಳೆದ ನಾಯಕರು ; ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಮೃತ ಮಹೋತ್ಸವದ ಹೆಸರಿನಲ್ಲಿ ನಡೆದ ಈ ಸಮಾವೇಶದಿಂದ ಸಮಾಜದಲ್ಲಿ ಒಡಕು ಉಂಟುಮಾಡುವ ಪ್ರಯತ್ನ ನಡೆದಿದೆಯಲ್ಲದೆ ಸಮಾಜದ ಹಿರಿಯ ಮುಖಂಡರಾದ ಬಿ.ಕೆ ಹರಿಪ್ರಸಾದ್ ಅವರ ವಿರುದ್ಧ ನಡೆದ ಸಮಾವೇಶವಾಗಿ  ಮಾರ್ಪಡಿಸಲಾಗಿದೆ. ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸದಸ್ಯರು ಪಾಲ್ಗೊಂಡ ಈ ಸಮಾವೇಶದಲ್ಲಿ 26 ಪಂಗಡಗಳಿಗೆ ಕೇವಲ ಮಾತಿನ ಬೆಣ್ಣೆ ಹಚ್ಚಿ ಚಳ್ಳೆಹಣ್ಣು ತಿನ್ನಿಸಲಾಗಿದೆ. ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ಘೋಷಣೆಯನ್ನು ಮಾಡಲು ಬರುವುದಿಲ್ಲ ಎಂದು ಮೇಲ್ನೋಟಕ್ಕೆ ಕಣ್ಣಿಗೆ ಮಣ್ಣೆರೆಚುವ ಹೇಳಿಕೆ ನೀಡಿದರೂ ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಈಡಿಗ ನಿಗಮಕ್ಕೆ ಹಣ ಘೋಷಣೆ ಸೇರಿದಂತೆ ಇತರ ಸೌಲಭ್ಯಗಳನ್ನು ಪ್ರಕಟಿಸಲು ಸಾಧ್ಯವಿತ್ತು.

ಇದ್ಯಾವುದನ್ನೂ ದನ್ನೂ ಮಾಡದೆ ಸಮಾಜಕ್ಕೆ ಮಂಕುಬೂದಿ ಎರಚಲಾಗಿದೆ. ರಾಜಕೀಯ ನಾಯಕರ ಓಲೈಕೆಗಾಗಿ ಸಮಾಜವನ್ನು ಬಲಿ ಕೊಡುವ ಸ್ವಾರ್ಥ  ಹಿತಾಸಕ್ತಿಯ ಸಮಾಜದ ನಾಯಕರಿಂದಾಗಿ  ಈ ಸಮಾಜಕ್ಕಾಗಿ ಹಗಲಿರುಳು ದುಡಿದು 780 ಕಿಲೋ ಮೀಟರ್ ಪಾದಯಾತ್ರೆ ಮಾಡಿದ ಡಾ. ಪ್ರಣವಾನಂದ ಶ್ರೀಗಳನ್ನು ಸಮಾವೇಶಕ್ಕೆ ಆಹ್ವಾನಿಸದ ಹಾಗೂ ಸಮುದಾಯದ ನಾಯಕರಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಹಿರಿಯ ಮುಖಂಡರಾದ ಬಿ.ಕೆ ಹರಿಪ್ರಸಾದ್ ಅವರನ್ನು ಮೂಲೆಗುಂಪಾಗಿಸಲು ಅಮೃತ ಮಹೋತ್ಸವದ ಹೆಸರಿನಲ್ಲಿ ಸಮ್ಮೇಳನ ನಡೆಸಿ ಸರಕಾರಿ ಕೃಪಾಪೋಷಿತ ಸಂಸ್ಥೆಯಾಗಿ ಕಟ್ಟಲು ಬಳಸಿಕೊಂಡಿರುವುದು ಖೇದಕರದ ವಿಷಯ.

ಈಗಾಗಲೇ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ  ಮಂಗಳೂರಿನಲ್ಲಿ ಪ್ರಾರಂಭವಾಗಿರುವ ಮತ್ತು ಅದರ ನೂತನ ಕಟ್ಟಡ ನಿರ್ಮಾಣಗೊಳ್ಳುವ ಹಂತದಲ್ಲಿದ್ದರೂ ಆ ಬಗ್ಗೆ ಅರಿವಿಲ್ಲದಂತೆ ಮಾತನಾಡಲು ಹಾಗೂ ಕೋಟಿ ಚೆನ್ನಯ ಥೀಮ್ ಪಾರ್ಕಿಗೆ 5 ಕೋಟಿ ನೀಡಿರುವುದಾಗಿ ಪುಕ್ಕಟೆ ಪ್ರಚಾರವನ್ನು ಮಾಡಲು ಮುಖ್ಯಮಂತ್ರಿಗಳಿಗೆ ತಪ್ಪು ಮಾಹಿತಿ ಹಾಗೂ ಸಲಹೆ ನೀಡಿದ ಸಮಾಜದ ನಾಯಕರ ಮೌಡ್ಯತೆಗೆ ಹಾಗೂ ಸ್ವತಹ ಮುಖ್ಯಮಂತ್ರಿಗಳು ಈ ಹೇಳಿಕೆ ನೀಡಿ ಹಾಸ್ಯಾಸ್ಪದಕ್ಕೆ ಗುರಿಯಾಗುವಂತೆ  ಮಾಡಿದ್ದು ಅವಮಾನಕಾರಿ ವಿಷಯವಾಗಿದೆ. ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಿರುವುದರಿಂದ ನಿಗಮಕ್ಕೆ 500 ಕೋಟಿ ಬಿಡುಗಡೆಯಾಗುವುದು ಮತ್ತು ಶೀಘ್ರದಲ್ಲೇ ನಿಗಮದ ರಚನೆಯಾಗುವುದೆಂಬ ಸಮಾಜ ಬಾಂಧವರ ನಿರೀಕ್ಷೆ ಕೂಡಾ ಸುಳ್ಳಾಯಿತು.

ಸೆ. 9ರಂದು ಬಿ.ಕೆ ಹರಿಪ್ರಸಾದ್ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳ ಹಾಗೂ ಅತಿ ಹಿಂದುಳಿದವರ ಸಮಾವೇಶಕ್ಕೆ ಪರ್ಯಾಯವಾಗಿ ಈ ಸಮಾವೇಶವನ್ನು ಸಂಘಟಿಸಿ ಪ್ರತಿಕಾರವೆಸಗಲು ನಡೆಸಿದ ಕುಟಿಲ ಪ್ರಯತ್ನ ಮತ್ತು ಇದೊಂದು ವಿಫಲ ಸಮಾವೇಶವಾಗಿದೆ. ಬೆಂಗಳೂರಿನ ಸಮಾವೇಶಕ್ಕೆ ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ಉಮಾನಾಥ ಕೋಟ್ಯಾನ್, ಕುಮಾರ್ ಬಂಗಾರಪ್ಪ ಸೇರಿದಂತೆ ಅನೇಕ ನಾಯಕರು ಸಮಾವೇಶದತ್ತ ಸುಳಿಯದಿರುವುದು ಕೂಡ ಸಮಾಜದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ನಿದರ್ಶನವಾಗಿದೆ.ಕೆಲವೇ  ಸ್ವಾರ್ಥ ಪರ ನಾಯಕರ ಕುಟಿಲ ನೀತಿಯಿಂದಾಗಿ ರಾಜ್ಯದಲ್ಲಿ ಸಮಾಜದ ಶಕ್ತಿಯನ್ನು ಒಡೆಯಲು ಮಾಡಿದ ಹುನ್ನಾರ ಇದಾಗಿದೆ. ಇಂತಹ ನೀಚ ಬುದ್ಧಿಯ ನಾಯಕರ ಬಗ್ಗೆ ಜಾಗೃತರಾಗಿ ಇನ್ನಾದರೂ ಎಚ್ಚೆತ್ತುಕೊಂಡು ಸಮಾಜವನ್ನು ಒಗ್ಗಟ್ಟಿನಿಂದ ಮುನ್ನಡೆಸುವತ್ತ ಎಲ್ಲರೂ ಚಿತ್ತಹರಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.

ಡಾ. ಪ್ರಣವಾನಂದ ಶ್ರೀಗಳ ಹೋರಾಟಕ್ಕೆ ಪೂರ್ಣ ಬೆಂಬಲ: ಚಿತ್ತಾಪುರ ತಾಲೂಕು ಕರದಾಳು ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೂಜ್ಯ ಡಾ. ಪ್ರಣವಾನಂದ ಶ್ರೀಗಳು ಡಿ. 20 ರಿಂದ ಜ.20ರ ವರೆಗೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆಸುವ ಪ್ರತಿಭಟನಾ ಚಳವಳಿಗೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯು ಪೂರ್ಣ ಬೆಂಬಲ ನೀಡಲಿದೆ. ಜನವರಿ 20ರಂದು ಮೈಸೂರು, 21 ರಂದು ದಾವಣಗೆರೆ, 22ರಂದು ಚಿತ್ರದುರ್ಗದಲ್ಲಿ ಪ್ರತಿಭಟನಾ ಸತ್ಯಾಗ್ರಹ ನಡೆಯಲಿದೆ.

ಸರಕಾರವು ಬ್ರಹ್ಮ ಶ್ರೀ ನಾರಾಯಣ ಗುರು ನಿಗಮಕ್ಕೆ ಕೂಡಲೇ 500 ಕೋಟಿ ರೂಪಾಯಿ ಘೋಷಣೆ ಮಾಡಿ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ನೇಮಿಸಿ, ಈ ಸಮುದಾಯದ ಅಭಿವೃದ್ಧಿಗಾಗಿ ಕೂಡಲೇ ಶ್ರಮಿಸಬೇಕು. ಇಲ್ಲವಾದರೆ ಇನ್ನಷ್ಟು ಉಗ್ರ ಹೋರಾಟಗಳನ್ನು ನಡೆಸಲು ಕಾರ್ಯಕ್ರಮ ರೂಪಿಸಲಾಗುವುದು ಎಂದು  ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here