ಬೆಂಗಳೂರು: ಸರಣಿ ಸಂಧಾನಗಳು ವಿಫಲಗೊಂಡದರ ಪರಿಣಾಮವಾಗಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಸಮುದಾಯ ಆರೋಗ್ಯ ನೌಕರರ ಮುಷ್ಕರ 2ನೇ ದಿನಕ್ಕೆ ಮಂದುವರೆದಿದೆ. ರಾಜ್ಯದ 28 ಜಿಲ್ಲೆಗಳಿಂದ ಸಾವಿರಾರು ನೌಕರರು ಪಾಲ್ಗೊಂಡಿದ್ದ 2ನೇ ದಿನದ ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದ ಟಿಯುಸಿಐನ ಪ್ರಧಾನ ಕಾರ್ಯದರ್ಶಿ ಹಾಗೂ ನೌಕರರ ಸಂಘದ ಗೌರವಾಧ್ಯಕ್ಷ ಆರ್ ಮಾನಸಯ್ಯ ಮಾತನಾಡಿ, ರಾಜ್ಯ ಸರ್ಕಾರ ಮಲತಾಯಿ ಧೋರಣೆ ಕೈಬಿಟ್ಟು 6192 ಸಿಎಚ್ ಓ ನೌಕರರ ಖಾಯಂಗಿಳಿಸಲು ಒತ್ತಾಯಿಸಿದರು.
ಆರೋಗ್ಯ ಇಲಾಖೆ ಇತರೆ ಸಿಬ್ಬಂದಿಗೆ ಚಿಕ್ಕ ವೇತನ ಹೆಚ್ಚಳ ಸಿಎಚ್ಒ ಗಳಿಗೆ ಸಿಗದಾಗಿದೆ. 15% ವೇತನ ಹೆಚ್ಚಳ ಘೋಷಿಸಲು ಒತ್ತಾಯಿಸಿದರು. ಸುಪ್ರೀಂ ಕೋರ್ಟ್ ತೀರ್ಮಾನ ಉಲ್ಲಂಘಿಸಿ ಗುತ್ತಿಗೆ ಪದ್ಧತಿಯನ್ನು ಸರಕಾರವೇ ಮುಂದುವರಿಸಿರುವುದು ಘೋರ ಅನ್ಯಾಯ ಎಂದು ಖಂಡಿಸಿದರು. ಜೀವ ರಕ್ಷಕ ಕರ್ತವ್ಯದಲ್ಲಿರುವ ನಮ್ಮ ನೌಕರರ ಜೀವನದ ಬಗ್ಗೆ ಕನಿಷ್ಠ ಕಾಳಜಿ ತೋರಿಸದ ಸರಕಾರಕ್ಕೆ ಧಿಕ್ಕಾರ ಮೊಳ ಗಿಸಿದರು.
ಟಿಯುಸಿಐ ರಾಜ್ಯ ಉಪಾಧ್ಯಕ್ಷ ಎಮ್ ಗಂಗಾಧರ, ಮಾತನಾಡಿ, ಲಕ್ಷ ರೂಪಾಯಿ ಕೊಟ್ಟರೂ ಖಾಸಗೀ ವೈದ್ಯರು ಬರುವುದಿಲ್ಲ, ನಮ್ಮ ಸಮುದಾಯ ಆರೋಗ್ಯ ಅಧಿಕಾರಿಗಳು ರಾತ್ರಿ 12 ಗಂಟೆಗೆ ಬರುತ್ತಾರೆ. ಖಾಯಂ ಕೆಲಸಕ್ಕೆ ಅಧಿಕಾರಿಗಳನ್ನು ರಾಜ್ಯ ಸರಕಾರ ಖಾಯಂ ಮಾಡಲೇಬೇಕು, ಟಿಯುಸಿಐ ಕರ್ನಾಟಕ ರಾಜ್ಯ ಸಮಿತಿ ನೌಕರರ ಮುಷ್ಕರಕ್ಕೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತದೆಂದು ಹೇಳಿದರು. ಸಂಘದ ಅಧ್ಯಕ್ಷ ಮಮಿತ್ ಗಾಯಕ್ವಾಡ, ಉಪಾಧ್ಯಕ್ಷ ಬಸವಾನಂದ, ಪ್ರಧಾನ ಕಾರ್ಯದರ್ಶಿ ಚೆನ್ನಪ್ಪ ನಾಯಕ, ರಾಜ್ಯ ಮುಖಂಡ ಸಂಜೀವ್ ಗಾಂಧಿ, 28 ಜಿಲ್ಲೆಗಳ ಅಧ್ಯಕ್ಷರು ಕಾರ್ಯದರ್ಶಿಗಳು ಮುಷ್ಕರದ ನೇತೃತ್ವ ವಹಿಸಿ ಮಾತನಾಡಿದರು.
ಕಾರ್ಮಿಕ ಕಾಯ್ದೆ ಪ್ರಕಾರ ಮುಂಗಡ ನೋಟಿಸ್ ನೀಡಿಯೇ ಇಂದಿನಿಂದ ಅನಿರ್ದಿಷ್ಟ ಮುಷ್ಕರ ಆರಂಭ ಆಗಿರುವುದರಿಂದ ರಾಜ್ಯದ 6,192 ಆರೋಗ್ಯ ಹಾಗೂ ಕ್ಷೇಮ ಕೇಂದ್ರಗಳು ಸ್ಥಗಿತಗೊಂಡಿವೆ. ಮುಖ್ಯವಾದ ಸಮಸ್ಯೆಗಳಿಗೆ ಪರಿಹಾರ ಸಿಗುವ ತನಕ ಮುಷ್ಕರ ಮುಂದುವರಿಸುವ ನಿರ್ಧಾರ ಮೊಳಗಿಸಲಾಗಿದೆ. ಇಲಾಖೆಯಲ್ಲಿ ನೌಕರರ ಮೇಲೆ ನಡೆಯುತ್ತಿರುವ ಚಿತ್ರ ಹಿಂಸೆ ಕಿರುಕುಳ ಲಂಚಗುಳಿತನ ಮುಂತಾದ ವಿಷಯಗಳು ಮುಷ್ಕರದಲ್ಲಿ ಪ್ರಸ್ತಾಪವಾಗಿವೆ. ಈ ಮುಷ್ಕರ ಕುರಿತು ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ ಅನಿರ್ದಿಷ್ಟ ಮುಷ್ಕರ ಮುಂದುವರೆಯಲಿದೆ ಎಂದು ಹೇಳಿದರು.
ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘ ಅಧ್ಯಕ್ಷ ಮಮಿತ ಗಾಯಕ್ವಾಡ, ಪ್ರಧಾನ ಕಾರ್ಯದರ್ಶಿ ಚನ್ನಪ್ಪ ನಾಯ್ಕ ಬಣಕಾರ ಸೇರಿದಂತೆ ರಾಜ್ಯದ 28 ಜಿಲ್ಲೆಗಳಿಂದ ಹೋರಾಟಕ್ಕೆ ಸಾವಿರಾರು ಸಮುದಾಯ ಆರೋಗ್ಯ ಅಧಿಕಾರಿಗಳು ಭಾಗವಹಿಸಿದ್ದರು.