ಬೆಂಗಳೂರು; ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ರಾಜ್ಯ ಸಮುದಾಯ ನೌಕರರ ಮುಷ್ಕರವೂ, ನಾಲ್ಕನೇ ದಿನವಾದ ಇಂದು ರಾಜ್ಯ ಸರ್ಕಾರವು, 6192 ನೌಕರರ ಬೇಡಿಕೆಗಳ ಪರಿಹಾರಕ್ಕೆ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂಪಡೆಯಲಾಗಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಎನ್ ಹೆಚ್ ಎಂ ಗುತ್ತಿಗೆ ನೌಕರರ ಸಂಘದ ಗೌರವಾಧ್ಯಕ್ಷ ಆರ್.ಮಾನಸಯ್ಯ ತಿಳಿಸಿದ್ದಾರೆ.
ಮುಷ್ಕರ ಆರಂಭವಾದ ಎರಡನೇ ದಿನಕ್ಕೆ ಸಚಿವ ದಿನೇಶ್ ಗುಂಡೂರಾವ್ ಹಾಗೂ ಹಿರಿಯ ಸಚಿವ ಸತೀಶ್ ಜಾರಕಿಹೊಳೆ ಮತ್ತು ಅಧಿಕಾರಿಗಳು ಮುಷ್ಕರದ ಬಿಡಾರಕ್ಕೆ ಬಂದು ನೌಕರರ ಬೇಡಿಕೆಗಳನ್ನು ಪರಿಶೀಲಿಸಿ ಈಡೇರಿಸುವುದಾಗಿ ಮಾತು ಕೊಟ್ಟಿದ್ದರು. ಆದರೆ ಈ ಬಾಯಿ ಮಾತಿನ ಭರವಸೆಯ ಬದಲು ಲಿಖಿತ ಭರವಸೆಗೆ ಆಗ್ರಹಿಸಿ ಮುಷ್ಕರ ಮುಂದುವರಿಸಲಾಗಿತ್ತು. ಕರ್ನಾಟಕದಲ್ಲಿ ಕಾರ್ಮಿಕ ಕಾನೂನು ಜಾರಿ ಇಲ್ಲ. ಕಾನೂನು ಬಾಹೀರ ಗುತ್ತಿಗೆ ಪದ್ಧತಿ ರಾರಾಜಿಸುತ್ತಿದೆ. ನೌಕರರನ್ನು ಗುಲಾಮರಂತೆ ದುಡಿಸಲಾಗುತ್ತಿದೆ. ಸೂಕ್ತ ವೇತನ ಸೌಲಭ್ಯಗಳಿಲ್ಲ. ಉದ್ಯೋಗ ಭದ್ರತೆ ಇಲ್ಲದ ದುಡಿಯೋದು ಹೇಗೆ? ಮುಂತಾದ ವಿಷಯಗಳನ್ನು ಎತ್ತಿ ಮುಷ್ಕರ ನಡೆಸಲಾಯಿತು. ಅಲ್ಲದೆ ಇಂದು ಫ್ರೀಡಂ ಪಾರ್ಕ್ ನಿಂದ ವಿಧಾನಸೌಧದ ವರೆಗೆ 6,000 ಜನರ ಕಾಲ್ನಡಿಗೆ ಜಾಥವನ್ನು ಘೋಷಿಸಲಾಗಿತ್ತು.
ಬೆಳಗ್ಗೆಯಿಂದಲೇ ಫ್ರೀಡಂ ಪಾರ್ಕ್ ನಲ್ಲಿ ಬಾರಿ ಪೊಲೀಸ್ ಬಲ ಜಮಾವಣೆಯಾಗಿತ್ತು. ಮುಷ್ಕರದ ಧರಣಿ ಸುತ್ತ ಬ್ಯಾರಿಕೆಡ್ ನಿರ್ಮಿಸಲಾಗಿತ್ತು. 25ಕ್ಕೂ ಹೆಚ್ಚು ಬಸ್ಸುಗಳನ್ನು ಬಂಧನ ಕಾರ್ಯಕ್ಕಾಗಿ ಸಂಯೋಜಿಸಲಾಗಿತ್ತು. ಯಾವುದಕ್ಕೂ ಹೆದರದೆ ನಡೆದ ಮುಷ್ಕರದ ಹಿನ್ನೆಲೆಯಲ್ಲಿ ಮತ್ತೆ ಮಾತುಕತೆ ನಡೆದು, ಸಂಜೆ 5:30 ಸುಮಾರಿಗೆ ಆರೋಗ್ಯಸೌಧಕ್ಕೆ ಕರೆದು ಲಿಖಿತ ಭರವಸೆ ಪತ್ರ ನೀಡಲಾಯಿತು. ಈ ಪತ್ರದ ಪ್ರಕಾರ ಆರೋಗ್ಯ ಇಲಾಖೆಯು ನೌಕರರ ಖಾಯಂ ಮಾಡಲು ಪ್ರಸ್ತಾವನೆ ಸಲ್ಲಿಸಬೇಕು. ವಾರ್ಷಿಕ 5% ವೇತನ ಹೆಚ್ಚಳ ಜಾರಿ ಮಾಡಬೇಕು. ಮಾಸಿಕ 8,000 ಬದಲು ಹದಿನೈದು ಸಾವಿರ ಪ್ರೋತ್ಸಾಹ ಧನ ನೀಡಬೇಕು. ಉಳಿದ ಸಮಸ್ಯೆಗಳ ಪರಿಹಾರಕ್ಕೆ ಶೀಘ್ರಗತಿಯಲ್ಲಿ ಸಂಘದೊಂದಿಗೆ ಸಭೆ ನಡೆಸುವ ಭರವಸೆ ನೀಡಲಾಗಿದೆ ಎಂದು ಅಧ್ಯಕ್ಷ ಮಮಿತ ಗಾಯಕ್ವಾಡ್ ತಿಳಿಸಿದ್ದಾರೆ.
ಮುಷ್ಕರದಲ್ಲಿ ಪ್ರಧಾನ ಕಾರ್ಯದರ್ಶಿ ಚೆನ್ನಪ್ಪ ನಾಯ್ಕ, ಯುಸಿಐ ಕರ್ನಾಟಕ ರಾಜ್ಯ ಸಮಿತಿ ಉಪಾಧ್ಯಕ್ಷ ಎಂ ಗಂಗಾಧರ್, ಕಾರ್ಮಿಕ ಮುಖಂಡ ಹಾಗೂ ಖ್ಯಾತ ವಕೀಲರಾದ, ಎಸ್.ಬಾಲನ್, ಟಿಯುಸಿಐ ಮುಖಂಡ ಅಜೀಜ್ ಜಾಗೀರದಾರ್, ಟಿಯುಸಿಐ ಆಕ್ಟಿವಿಸ್ಟ್ ಎಂ.ನಿಸರ್ಗ, ತುಂಗಭದ್ರ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಜಿ. ಅಡವಿರಾವ್, ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ ಸತೀಶ್, ಸಮುದಾಯ ನೌಕರ ಸಂಘದ ರಾಜ್ಯಾಧ್ಯಕ್ಷ ಮಮಿತ್ ಗಾಯಕ್ವಾಡ್, ರಾಜ್ಯ ಉಪಾಧ್ಯಕ್ಷ ಬಸವಾನಂದ, ಪ್ರಧಾನ ಕಾರ್ಯದರ್ಶಿ ಚೆನ್ನಪ್ಪ ನಾಯಕ, ಸಂಘಟನಾ ಕಾರ್ಯದರ್ಶಿ ಜಾವಿದ್ ಹವಾಲ್ದಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ್ ನೂಲ್ಕರ್, ರಾಜ್ಯ ಮುಖಂಡ ಸಂಜಯ್ ಗಾಂಧಿ, ಕ್ಲಿಸ್ಟೋಫರ್, ಮಂಜುನಾಥ್ ಶಿವಮೊಗ್ಗ, ಪ್ರಕಾಶ್ ಕೋಲಾರ, ಆಶಿಶ್ ಉಡುಪಿ, ಮುಂತಾದ ಪ್ರಮುಖ ಮುಂದಾಳಲ್ಲಿ ಈ ಮುಷ್ಕರದ ನಡೆಯಿತು.