ಬೆಂಗಳೂರು; ಪಡಿತರ ವಿತರಕರಿಗೆ ಪ್ರತಿ ಕೆ.ಜಿ. ಅಕ್ಕಿಗೆ ಕಮಿಷನ್ ಮೊತ್ತ ಒಂದೂವರೆ ರೂಪಾಯಿ ಹೆಚ್ಚಳಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.
ಇಂದು ಅರಮನೆ ಮೈದಾನದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅನ್ನಭಾಗ್ಯ ದಶಮಾನೋತ್ಸವ ಹಸಿವು ಮುಕ್ತ ಕರ್ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು ಬಸವಣ್ಣನವರ ಕಾಯಕ ದಾಸೋಹದ ಪರಿಕಲ್ಪನೆ ಅನ್ನಭಾಗ್ಯಕ್ಕೆ ಪ್ರೇರಣೆಯಾಗಿತ್ತು. ಆಹಾರ ಉತ್ಪಾದನೆ ಮಾಡುವವರು ಕಾಯಕ ಜೀವಿಗಳು ಹಸಿವಿನಿಂದ ಮಲಗಬಾರದು. 5 ಕೆ.ಜಿ. ಅಕ್ಕಿಗೆ ಬದಲಾಗಿ ಪ್ರತಿ ಕೆ.ಜಿ.ಗೆ ರೂ. 34/- ರಂತೆ ಫಲಾನುಭವಿಗಳಿಗೆ ನೇರ ನಗದು ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳ ಉದ್ದೇಶ ರಾಜ್ಯವನ್ನು ಹಸಿವು, ಅನಾರೋಗ್ಯ, ಅನಕ್ಷರತೆ, ನಿರುದ್ಯೋಗ ಮುಕ್ತ ಮಾಡುವುದೇ ಆಗಿದೆ. ಸರ್ಕಾರದ ಯೋಜನೆಗಳಿಂದ ಸಂಪತ್ತು, ಅಧಿಕಾರ ಮತ್ತು ಅವಕಾಶಗಳ ಸಮಾನ ಹಂಚಿಕೆಯಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಗ್ರಾಹಕ ರಕ್ಷಕ ತಪಾಸಣೆ ವಾಹನಗಳಿಗೆ ಚಾಲನೆ ಹಾಗೂ ತೂಕ ಮತ್ತು ಅಳತೆಗಳ ಗ್ರಾಹಕರ ಜಾಗೃತಿ ಕೈಪಿಡಿ ಬಿಡುಗಡೆ ಮಾಡಲಾಯಿತು.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ. ಹೆಚ್. ಮುನಿಯಪ್ಪ ಅವರು ಮಾತನಾಡಿ ಎಲ್ಲ ದಾನಕ್ಕಿಂತ ಅನ್ನದಾನ ಶ್ರೇಷ್ಠ. ಸರ್ಕಾರದ ಉದ್ದೇಶವು ರಾಜ್ಯದ ಜನರು ಹಸಿವಿನಿಂದ ಬಳಲಬಾರದು. ಹಸಿವು ಮುಕ್ತ ಕರ್ನಾಟಕ ನಮ್ಮ ಧ್ಯೇಯ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರು ಹಾಗೂ ಹೊಸುದುರ್ಗ ಕ್ಷೇತ್ರದ ಶಾಸಕ ಬಿ.ಜಿ. ಗೋವಿಂದಪ್ಪ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಸೇರಿದಂತೆ ಹಿರಿಯ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.