ಕಲಬುರಗಿ; ಅತ್ಯುತ್ತಮ ರಸ್ತೆ ಸುರಕ್ಷತಾ ಉಪಕ್ರಮಗಳನ್ನು ಅನುಷ್ಠಾನಗೊಳಿಸಿದ್ದಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ರಾಷ್ಟ್ರೀಯ ರಸ್ತೆ ಸಾರಿಗೆಗಳ ನಿಗಮದ ಒಕ್ಕೂಟವು (ASRTU) ಇತ್ತೀಚೆಗೆ ಬೆಸ್ಟ್ ರೊಡ್ ಸೇಫ್ಟಿ ಪ್ರಾಕ್ಟಿಸಸ್ ವಿಭಾಗದಡಿ 2022-23ನೇ ಸಾಲಿನ ರಾಷ್ಟ್ರೀಯ ಮಟ್ಟದ ವಿನ್ನರ್ ಪ್ರಶಸ್ತಿಯನ್ನು ಘೋಷಿಸಿದ್ದು, ಶುಕ್ರವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶುಕ್ರವಾರ ನವದೆಹಲಿಯಲ್ಲಿ ನಡೆದ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ 64ನೇ ವಾರ್ಷಿಕ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ಎ.ಎಸ್.ಆರ್.ಟಿ.ಯು ಸಂಸ್ಥೆಯ ಅಧ್ಯಕ್ಷರು ಮತ್ತು ಕೇಂದ್ರ ರಸ್ತೆ, ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಅನುರಾಗ್ ಜೈನ್ ಅವರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಅವರಿಗೆ ಸ್ಮರಣಿಕೆ ಒಳಗೊಂಡ ಪ್ರಶಸ್ತಿ ಪ್ರದಾನ ಮಾಡಿದರು. ಎ.ಎಸ್.ಆರ್.ಟಿ.ಸಿ ಉಪಾಧ್ಯಕ್ಷ ತಿರುಮಲರಾವ್, ಕೆ.ಕೆ.ಆರ್.ಟಿ.ಸಿ ನಿಗಮದ ಚೀಫ್ ಟ್ರಾಫಿಕ್ ಮ್ಯಾನೇಜರ್ ಸಂತೋಷಕುಮಾರ್ ಈ ಅಪೂರ್ವ ಗಳಿಗೆಗೆ ಸಾಕ್ಷಿಯಾದರು.
ಬೆಸ್ಟ್ ರೋಡ್ ಸೇಫ್ಟಿ ಪ್ರಾಕ್ಟೀಸ್ ವಿಭಾಗದಲ್ಲಿಯೇ ರನ್ನರ್ ಅಪ್ ಪ್ರಶಸ್ತಿಗೆ ಭಾಜನವಾದ ರಾಜ್ಯದ ನೈರುತ್ಯ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ವಿವಿಧ 19 ವಿಭಾಗದಲ್ಲಿ ರಸ್ತೆ ಸಾರಿಗೆ ನಿಗಮಗಳಿಗೆ 68 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ರಾಜ್ಯದ ಸಾರಿಗೆ ಮತ್ತು ಮುಜರಾಯಿ ಸಚಿವರು ಹಾಗೂ ನಿಗಮದ ಅಧ್ಯಕ್ಷರಾದ ರಾಮಲಿಂಗಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಪ್ರಯಾಣಿಕರಿಗೆ ವ್ಯವಸ್ಥಿತ ಮತ್ತು ಸುರಕ್ಷಿತ ಬಸ್ ಸೇವೆ ಒದಗಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.
2022-23ನೇ ಸಾಲಿನಲ್ಲಿ ಒಂದು ಹೈಟೆಕ್ ಮಾದರಿಯ ಸಂಚಾರಿ ತರಬೇತಿ ವಾಹನ ಸಿದ್ದಪಡಿಸಿ ನಿಗಮದ 9 ವಿಭಾಗಗಳ ವ್ಯಾಪ್ತಿಯ 52 ಘಟಕಗಳಿಗೆ ತೆಗೆದುಕೊಂಡು ಹೋಗಿ 6,583 ಚಾಲಕರಿಗೆ ತರಬೇತಿ ನೀಡಿದ ಪರಿಣಾಮ ನಿಗಮಕ್ಕೆ ಸರಾಸರಿ 2 ಕೋಟಿ ರೂ. ಗಳ ಉಳಿತಾಯವಾಗಿದೆ.