ಕಲಬುರಗಿ; ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಕಲಬುರಗಿ ನಗರದಲ್ಲಿನ ಗುಲಬರ್ಗಾ ಉತ್ತರ ಮತ್ತು ಗುಲಬರ್ಗಾ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತಗಟ್ಟೆಯಲ್ಲಿನ ಮೂಲಸೌಕರ್ಯ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.
ಪ್ರತಿ ಮತಗಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆ, ನೆರಳಿನ ವ್ಯವಸ್ಥೆ, ವಿಶೇಷಚೇನರಿಗೆ ಅನುಕೂಲವಾಗಲು ರ‌್ಯಾಂಪ್ ವ್ಯವಸ್ಥೆ ಮಾಡಬೇಕು. ಒಟ್ಟಿನಲ್ಲಿ ಮತದಾರರ ಸ್ನೇಹಿಯಾಗಿ ಮತಗಟ್ಟೆ ನಿರ್ಮಿಸಬೇಕೆಂದರು.
ಕಲಬುರಗಿ ಉತ್ತರ ಕ್ಷೇತ್ರದ ಮಸ್ಟರಿಂಗ್, ಡೀ-ಮಸ್ಟರಿಂಗ್ ಕೇಂದ್ರವಾಗಿರುವ ಅಪ್ಪಾ ಕಿಡ್ಸ್ ವರ್ಲ್ಡ್ ಶಾಲೆಗೆ, ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದರು. ನಂತರ ಆಳಂದ ಚೆಕ್ ಪೋಸ್ಟ್ ವೀಕ್ಷಿಸಿದ ಅವರು, ಪ್ರತಿಯೊಂದು ವಾಹನ ತಪಾಸಣೆಗೆ ಒಳಪಡಿಸಿ ಎಂದು ತನಿಖಾ ಸಿಬ್ಬಂದಿಗೆ ಸೂಚಿಸಿದರು. ಮಾರ್ಗ ಮದ್ಯೆ ಆಳಂದ ಕಾಲೋನಿಯ ಮಿಲೇನಿಯಮ್ ಶಾಲೆ ಮತಗಟ್ಟೆ ಸಹ ವೀಕ್ಷಿಸಿದರು. ನಂತರ ರೋಜಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆ.ಸಿ.ಇ.ಟಿ ಮತಗಟ್ಟೆ ಸಹ ವೀಕ್ಷಿಸಿದರು.
ಅದೇ ರೀತಿ ಕಲಬುರಗಿ ದಕ್ಷಿಣ ಕ್ಷೇತ್ರದ ಮಸ್ಟ್ರಿಂಗ್-ಡೀ ಮಸ್ಟ್ರಿಂಗ್, ಸ್ಟ್ರಾಂಗ್ ರೂಂ ಆಗಿರುವ ಎ.ಸಿ.ಟಿ. ಎನ್.ವಿ. ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಪಕ್ಕದಲ್ಲಿಯೇ ಇದ್ದ ಎನ್.ವಿ. ಕನ್ಯಾ ಪ್ರೌಢ ಶಾಲೆ, ಬಾಲಕರ ಪ್ರೌಢ ಶಾಲೆಗೆ ಭೇಟಿ ನೀಡಿ ಮತಗಟ್ಟೆ ಸಂಖ್ಯೆ.135 ರಿಂದ 138 ವೀಕ್ಷಣೆ ಮಾಡಿದರು. ನಂತರ ಬೋರಾಬಾಯಿ ನಗರ ಮತಗಟ್ಟೆ ಸಂಖ್ಯೆ 117 ಹಾಗೂ ಹೀರಾಪೂರ ಚೆಕ್ ಪೊಸ್ಟ್ ಗೂ ಭೇಟಿ ನೀಡಿದರು.
ಪಾಲಿಕೆ ಕಚೇರಿಗೂ ಭೇಟಿ: ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಮಹಾನಗರ ಪಾಲಿಕೆ ಕೇಂದ್ರ ಕಚೇರಿಯ ಚುನಾವಣಾ ಶಾಖೆಗೂ ಭೇಟಿ ಚುನಾವಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳ ಕೆಲಸ ಕಾರ್ಯಗಳನ್ನು ವೀಕ್ಷಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಉಪ ಆಯುಕ್ತ ಮಾಧವ ಗಿತ್ತೆ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು