ಬೆಂಗಳೂರು: ಯಾವುದೇ ಉತ್ಪ್ರೇಕ್ಷೆಗಳಿಲ್ಲದೆ ಮತ್ತು ಯಾವುದೇ ತರಹದ ರಂಜನೆಗಳಿಲ್ಲದೇ ತುಂಬ ನಿಷ್ಠೆಯಿಂದ ಪ್ರಾದೇಶಿಕ ಜನ ಜೀವನ ಸೆರೆ ಹಿಡಿಯುವಲ್ಲಿ `ಆಲಿಂಡಿಯಾ ರೇಡಿಯೋ’ ಸಿನಿಮಾ ಯಶಸ್ವಿಯಾಗಿದೆ ಎಂದು ಚಲನಚಿತ್ರ ರಂಗದ ಹಿರಿಯ ನಿರ್ದೇಶಕ ಗಿರೀಶ ಕಾಸರವಳ್ಳಿ ಹೇಳಿದರು.
ಬೆಂಗಳೂರು ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‍ನಲ್ಲಿ ಅತ್ಯುತ್ತಮ ಮೂರನೇ ಚಿತ್ರವೆಂದು ಪ್ರಶಸ್ತಿ ಪಡೆದ `ಆಲಿಂಡಿಯಾ ರೇಡಿಯೋ’ ಸಿನಿಮಾವನ್ನು ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಪ್ರದರ್ಶನ ನಂತರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಕತೆಗಾರ ಅಮರೇಶ ನುಗಡೋಣಿ ಅವರ ಕಥೆಯನ್ನಾಧರಿಸಿ, ಚಾಮರಾಜನಗರದ ನೆಲದ ಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡು, ನಿರ್ದೇಶಕ ರಂಗಸ್ವಾಮಿ ಎಸ್. ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಸಂವಾದದಲ್ಲಿ ಭಾಗವಹಿಸಿದ್ದ ಇನ್ನೋರ್ವ ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ, ಬಹುದಿನಗಳವರೆಗೆ ಕಾಡುವ ಸಿನಿಮಾ ಇದು. ಈ ಚಿತ್ರಕ್ಕೆ ಇಬ್ಬರು ಹಿರೋಗಳಿದ್ದಾರೆ. ಒಬ್ಬರು ಪಿಚ್ಚಳ್ಳಿ ಶ್ರೀನಿವಾಸ ಮತ್ತು ಇನ್ನೊಬ್ಬರು ನಿರ್ದೇಶಕ ರಂಗಸ್ವಾಮಿ. ಮಂಟೇಸ್ವಾಮಿಯ ಜಾನಪದ ಕಾವ್ಯದ ಸೊಗಡು, ಪ್ರಾದೇಶಿಕ ಭಾಷೆಯ ಬಳಕೆ ಅನನ್ಯವಾಗಿದೆ. ಈ ಮಣ್ಣಿನಿಂದ ಎದ್ದುಬಂದವರಂತೆ ನಟವರ್ಗದವರು ಕಾಣುತ್ತಾರೆ. ಸಂಗೀತ ಚಿತ್ರದುದ್ದಕ್ಕೂ ನದಿಯಾಗಿ ಹರಿಯುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ನಿರ್ದೇಶಕ ಕೇಸರಿ ಹರವೂ, ರಂಗ ತಜ್ಞರಾದ ಸಿ.ಕೆ. ಗುಂಡಣ್ಣ, ಶ್ರೀನಿವಾಸ ಜಿ.ಕಪ್ಪಣ್ಣ, ಮತ್ತು ನಟ, ಪತ್ರಕರ್ತ, ಸಾಹಿತಿಗಳಾದ ಕಲಬುರಗಿಯ ಮಹಿಪಾಲರೆಡ್ಡಿ ಸೇಡಂ ಮಾತನಾಡಿದರು. ಕಥೆಗಾರ ಅಮರೇಶ ನುಗಡೋಣಿ ತಮ್ಮ ಎರಡು ಕತೆಗಳನ್ನು ಬಳಸಿಕೊಂಡಿರುವ ಬಗ್ಗೆ ಕೃತಜ್ಞತೆ ಸಲ್ಲಿಸಿದರು.
ನಿರ್ದೇಶಕ ರಂಗಸ್ವಾಮಿ ಮಾತನಾಡಿ, ಸಂವಾದದಲ್ಲಿ ಪಾಲ್ಗೊಂಡಿದ್ದರು. ರಂಗ ಕಲಾವಿದ ಮಲ್ಲಿಕಾರ್ಜುನ ಮಹಾಮನೆ ಅವರು ಕಾರ್ಯಕ್ರಮ ನಡೆಸಿಕೊಟ್ಟರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಾಜಿ ನಿರ್ದೇಶಕ ವಿಶುಕುಮಾರ, ಡಾ.ಬಸವರಾಜ ಸಾದರ, ಲೇಖಕರಾದ ಅಗ್ರಹಾರ ಕೃಷ್ಣಮೂರ್ತಿ, ಎಚ್.ಆರ್.ಸುಜಾತಾ, ಸವಿತಾ ನುಗಡೋಣಿ, ಆರ್.ಜಿ.ಹಳ್ಳಿ ನಾಗರಾಜ್, ಮಂಜು ಪಾಂಡವಪುರ, ಜೀವನ್ಮುಖಿ ಸುರೇಶ, ಡಾ.ಕಲ್ಯಾಣರಾವ ಪಾಟೀಲ, ಪ್ರೊ.ಚಂದ್ರಶೇಖರ ಬಿರಾದಾರ ಭಾಲ್ಕಿ ಇತರರಿದ್ದರು. ನಟ ಗೌತಮ್ ಮೈಸೂರು, ನಿರ್ಮಾಪಕ ಯೋಗಿ ದೇವಗಂಗೆ, ಛಾಯಾಗ್ರಹಣ ಮಾಡಿದ ಅಚ್ಚು ಸುರೇಶ ಸೇರಿದಂತೆ ಅನೇಕರಿದ್ದರು. ಇದಕ್ಕೂ ಮುನ್ನ `ಆಲಿಂಡಿಯಾ ರೇಡಿಯೋ’ ಸಿನಿಮಾ ಪ್ರದರ್ಶಿಸಲಾಯಿತು.
ತುಂಬ ಒಳ್ಳೆಯ ಸಿನಿಮಾ. ಪ್ರಾದೇಶಿಕ ಭಾಷೆಯನ್ನು ಚೆನ್ನಾಗಿ ದುಡಿಸಿಕೊಳ್ಳಲಾಗಿದೆ. ಸಾಂಸ್ಕøತಿಕ ಆವರಣದಲ್ಲಿ ಜನ ಮತ್ತು ಕುಟುಂಬದ ಬದುಕು ಹೆಣೆದುಕೊಂಡ ರೀತಿ, ಗೋಜಲು, ದುರಂತ ಎಲ್ಲವೂ ಎಚ್ಚರಿಕೆಯಿಂದ ಕಟ್ಟಿಕೊಡಲಾಗಿದೆ.
– ಅಗ್ರಹಾರ ಕೃಷ್ಣಮೂರ್ತಿ