ಕಲಬುರಗಿ: ಲೋಕಸಭಾ ಕ್ಷೇತ್ರದಲ್ಲಿ ಗುರು ಹಿರಿಯರ ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ ದೊಡ್ಡ ಶಕ್ತಿ ಲಭಿಸಿದೆ.ಗುರು ಬಲದಿಂದ ಈಗ ಗೆಲುವಿನ ಬಲ ಕೂಡ ಹೆಚ್ಚಾಗಿದೆ ಎಂದು ಲೋಕಸಭಾ ಚುನಾವಣೆಯ ನಿಯೋಜಿತ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಹೇಳಿದ್ದಾರೆ.
ಭಾನುವಾರ ಹುಟ್ಟು ಹಬ್ಬದ ಪ್ರಯುಕ್ತ ನಗರದ ಶ್ರೀ ಶರಣಬಸವೇಶ್ವರ ಸಂಸ್ಥಾನ ಹಾರಕೂಡದ ಶ್ರೀ ಚೆನ್ನಬಸವೇಶ್ವರ ಸಂಸ್ಥಾನ ಹಿರೇಮಠ, ರೇವಗ್ಗಿ (ರಟಕಲ್) ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ, ಸುಲಫಲ ಮಠ ಹಾಗೂ ಬಬಲಾದಿ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಧಾರ್ಮಿಕ ನಂಬಿಕೆ ಮತ್ತು ಆಚರಣೆ ಮನುಷ್ಯನ ಬಾಳಿಗೆ ಸಂಜೀವಿನಿ ಇದ್ದಂತೆ. ಗುರುಗಳ ಆಶೀರ್ವಾದದಿಂದ ನವ ಚೈತನ್ಯ ದೊರೆತು ಸಾರ್ವಜನಿಕ ಸೇವೆಗೆ ಉತ್ಸಾಹ ಬಂದಿದೆ. ಗುರುಬಲವಿದ್ದರೆ ಸರ್ವಶಕ್ತಿ ಕೂಡಾ ಪ್ರಾಪ್ತವಾಗುತ್ತದೆ. ಗುರುಬಲದಿಂದ ಜಯದ ಬಲವು ಕೂಡ ಈಗ ಹೆಚ್ಚಾಗಿದೆ ಎಂದು ತಿಳಿಸಿದರು.
ಕಲ್ಬುರ್ಗಿಯಲ್ಲಿ ಶ್ರೀ ಶರಣಬಸವೇಶ್ವರ ಸಂಸ್ಥಾನದಲ್ಲಿ ಶ್ರೀ ಶರಣಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ನಂತರ ಸುಲಫಲ ಮಠದ ಶ್ರೀ ಸಾರಂಗಧರ ಮಹಾಂತ ಶಿವಾಚಾರ್ಯರನ್ನು ಭೇಟಿ ಮಾಡಿದರು. ಬಳಿಕ ಬಸವಕಲ್ಯಾಣದ ಹಾರಕೂಡ ಮಠದ ಡಾ. ಚನ್ನವೀರ ಶಿವಾಚಾರ್ಯರನ್ನು, ರೇವಗ್ಗಿ(ರಟಕಲ್) ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಮತ್ತು ಬಬಲಾದಿ ಮಠದ ಷಡಕ್ಷರಿ ಶ್ರೀ ಗುರುಪಾದಲಿಂಗ ಶಿವಯೋಗಿಗಳ ದರ್ಶನವನ್ನೂ ಪಡೆದು ಗದ್ದಿಗೆ ವಿಶೇಷ ಪೂಜೆ ಸಲ್ಲಿಸಿ ಗುರುವರ್ಯಯರಿಂದ ಆಶೀರ್ವಾದ ಮತ್ತು ಶ್ರೀರಕ್ಷೆಯನ್ನು ಪಡೆದರು.
ಧಾರ್ಮಿಕ ಶ್ರದ್ಧೆ ಮತ್ತು ನಂಬಿಕೆಯಿಂದ ಉತ್ತಮ ಜೀವನ ನಡೆಸಿ ಸಾರ್ವಜನಿಕ ಸೇವೆ ಮಾಡಲು ಗುರು ಹಿರಿಯರ ಆಶೀರ್ವಾದ ಸದಾ ಇರಲಿ ಎಂದು ಎಲ್ಲ ಪೂಜ್ಯರು ಹಾರೈಸಿ ಸನ್ಮಾನಿಸಿ ಬೀಳ್ಕೊಟ್ಟರು.
ಲೋಕಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಪ್ರವಾಸ ಮುಂದುವರಿದಿದ್ದು ಮತದಾರರನ್ನು ಹಾಗೂ ಗುರುಹಿರಿಯನ್ನು ಭೇಟಿ ಮಾಡಿ ಅವರ ಪ್ರೀತಿಯನ್ನು ಪಡೆಯಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಖಚಿತ. ಕಾರ್ಯಕರ್ತರು ಮತ್ತು ಮತದಾರರು ಕುಂಕುಮ ಹಚ್ಚಿ ಮನೆಗೆ ಸ್ವಾಗತಿಸಿ ಬೆಂಬಲಿಸುತ್ತಿರುವುದನ್ನು ನೋಡಿ ಸಂತಸ ಉಂಟಾಗಿದೆ ಎಂದು ಈ ಸಂದರ್ಭದಲ್ಲಿ ಡಾ. ಜಾಧವ್ ಹೇಳಿದರು.