ಪರಿಶಿಷ್ಟ ಜಾತಿಯಿಂದ ಲಂಬಾಣಿ, ಭೋವಿ, ವಡ್ಡರ್, ಕೊರವ, ಕೊರಚ ಸಮಾಜ ಬೇರ್ಪಡೆಗೆ ಆಗ್ರಹ

0
125

ಕಲಬುರಗಿ: ಪರಿಶಿಷ್ಟ ಜಾತಿ ಪಟ್ಟಿಯಿಂದ ಲಂಬಾಣಿ, ಭೋವಿ, ವಡ್ಡರ್, ಕೊರವ, ಕೊರಚ ಸಮಾಜಗಳನ್ನು ತೆಗೆದುಹಾಕಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಹಿರಿಯ ದಲಿತ ಮುಖಂಡ ಗುರುಶಾಂತ್ ಪಟ್ಟೇದಾರ್ ಅವರು ಇಲ್ಲಿ ಒತ್ತಾಯಿಸಿದರು.

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೭೬ರಲ್ಲಿ ಹಾವನೂರ್ ವರದಿಯ ಸಮಯದಲ್ಲಿ ದಿ. ದೇವರಾಜ್ ಅರಸು ಅವರು ಮುಖ್ಯಮಂತ್ರಿಗಳಾಗಿದ್ದಾಗ ಲಂಬಾಣಿ, ಭೋವಿ, ವಡ್ಡರ್, ಕೊರವ, ಕೊರಚ ಜನಾಂಗದವರನ್ನು ಪರಿಶಿಷ್ಟ ಜಾತಿಯಲ್ಲಿ ಸೇರಿಸಿ ಮೂಲ ಅಸ್ಪೃಶ್ಯರಿಗೆ ಬೀದಿ ಪಾಲು ಮಾಡಿದರು ಎಂದು ಆರೋಪಿಸಿದರು. ಈಗಾಗಲೇ ಕಳೆದ ಮೂರು ತಿಂಗಳು ಹಿಂದೆಯೇ ಕೇಂದ್ರ ಸರ್ಕಾರವು ಲಂಬಾಣಿ, ಭೋವಿ, ವಡ್ಡರ್, ಕೊರವ, ಕೊರಚ ಜನಾಂಗವನ್ನು ಹಿಂದುಳಿದ ಜನಾಂಗದಲ್ಲಿ ಸೇರಿಸಲು ಆದೇಶ ಮಾಡಿ ಎಲ್ಲ ರಾಜ್ಯ ಸರ್ಕಾರಗಳಿಗೂ ಕಳಿಸಿಕೊಟ್ಟಿದೆ. ಆದಾಗ್ಯೂ, ಕರ್ನಾಟಕದಲ್ಲಿನ ಸರ್ಕಾರವು ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Contact Your\'s Advertisement; 9902492681

ಕೂಡಲೇ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ್ ಅವರು ಕೇಂದ್ರದ ಆದೇಶ ಜಾರಿಗೊಳಿಸಿ ಲಂಬಾಣಿ, ಭೋವಿ, ವಡ್ಡರ್, ಕೊರವ, ಕೊರಚ ಜನಾಂಗದವರನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಎಂದು ಅವರು ಒತ್ತಾಯಿಸಿದರು. ನಿವೃತ್ತ ನ್ಯಾಯಾಧೀಶ ಎ.ಜೆ. ಸದಾಶಿವ್ ಆಯೋಗದ ವರದಿಯನ್ನು ಜಾರಿಗೆ ತರಲು ಸುಮಾರು ೨೦ ವರ್ಷಗಳಿಂದಲೂ ಹೋರಾಟಗಳು ಮುಂದುವರೆದಿವೆ. ಇಲ್ಲಿಯವರೆಗೂ ಯಾವುದೇ ಸರ್ಕಾರಗಳು ಕ್ರಮ ಕೈಗೊಂಡಿಲ್ಲ. ಆದ್ದರಿಂದ ಬಿಜೆಪಿ ಸರ್ಕಾರವು ಕೂಡಲೇ ಸದಾಶಿವ್ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ದಲಿತರು ಈಗ ಸುಮಾರು ೧.೨೦ ಕೋಟಿ ಜನರಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇರುವ ಜನರಿಗೆ ಶೇಕಡಾ ೨೫ರಷ್ಟು ಮೀಸಲಾತಿ ಕಲ್ಪಿಸುವಂತೆ ಹಾಗೂ ರಾಜ್ಯದ ಶೇಕಡಾ ೨೫ರಷ್ಟು ಜನರು ದಲಿತರಾಗಿರುವುದರಿಂದ ಸುಮಾರು ೭೫೦೦೦ ಕೋಟಿ ರೂ.ಗಳ ಅನುದಾನ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್ ಮದ್ರಿ, ಮಹಾದೇವ್ ನಾಗನಳ್ಳಿ, ದಿಗಂಬರ್ ಕಾಂಬಳೆ, ಶಿವಮೂರ್ತಿ ಪಾಟೀಲ್ ಓಕಳಿ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here