ಹಟ್ಟಿ: ಪಟ್ಟಣದ ಮಾಂಸ ಮಾರಾಟಗಾರರಿಗೆ 14 ರಂದು ರವಿವಾರ ಡಾ|| ಬಿ ಆರ್ ಅಂಬೇಡ್ಕರ್ ಜಯಂತಿ ನಿಮಿತ್ಯವಾಗಿ ಮಾಂಸ ಮಾರಾಟ ಮತ್ತು ಪ್ರಾಣಿ ವಧೆ ನಿಷೇಧಿಸಲಾಗಿದ್ದು, ಇದು ಅಂಬೇಡ್ಕರ್ ಅವರ ತಾತ್ವಿಕತೆಗೆ ವಿರುದ್ಧವಾಗಿದೆ. ತಳಸಮುದಾಯದ ಆಹಾರ ಸ್ವಾತಂತ್ರ್ಯವನ್ನು ಕಸಿಯುವ ಪ್ರಯತ್ನ. ಇದೊಂದು ಸಂವಿಧಾನ ಬಾಹಿರ ನಿಲುವಾಗಿದೆ ಎಂದು ಸಿಪಿಐ(ಎಂ) ಲಿಂಗಸ್ಗೂರು ತಾಲೂಕು ಸಮಿತಿಯ ರಮೇಶ ವೀರಾಪೂರು ದುರಿದ್ದಾರೆ.
ಧರ್ಮದ ಹೆಸರಿನಲ್ಲಿ ಎಲ್ಲ ಜನ್ಮದಿನಗಳನ್ನು ಬ್ರಾಹ್ಮಣೀಕರಣ ಮಾಡುತ್ತಿದ್ದಾರೆ. ರಾಷ್ಟ್ರ ನಾಯಕರ ದಿನಾಚರಣೆಗಳಂದು ಮಾಂಸ ಮಾರಾಟ ನಿಷೇಧ ಮಾಡಿರುವುದು ಜನ ಸಾಮಾನ್ಯರ ಆಹಾರ ಪದ್ದತಿಯ ಮೇಲೆ ಸವಾರಿ ಮಾಡಿದಂತೆಯೇ ಸರಿ. ಕೆಲಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಹಿಡನ್ ಅಜೆಂಡಾದ ಕಾರ್ಯ ಸಾಧನೆಗೋಸ್ಕರ ಇಂತಹ ಅವೈಜ್ಞಾನಿಕ ಪದ್ದತಿಗಳನ್ನು ಜನರ ಮೇಲೆ ಬಲವಂತವಾಗಿ ಹೇರಲು ಮುಂದಾಗುತ್ತಿದ್ದಾರೆ, ಇದು ಖಂಡನೀಯ. ಸ್ವಾತಂತ್ರ್ಯ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಆಹಾರದ ಹಕ್ಕನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಇದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಈಗಾಗಲೇ ಅಂಬೇಡ್ಕರ್ ಜಯಂತಿಯಂದೂ ಕೂಡ ಮಾಂಸ ಮಾರಾಟ ನಿಷೇಧ ಮಾಡಲು ಮುಂದಾಗಿರುವುದು ಸಂವಿಧಾನ ವಿರೋಧಿ ಮತ್ತು ಅಂಬೇಡ್ಕರ್ ಆಶಯಗಳಿಗೆ ವಿರುದ್ದವಾದುದು ಎಂದು ತಿಳಿಸಿದ್ದಾರೆ.
ಅಂಬೇಡ್ಕರ್ ಎಲ್ಲೂ ಕೂಡ ಅವರ ಬರಹ ಅಥವಾ ಭಾಷಣಗಳಲ್ಲಿ ಮಾಂಸ ಸೇವಿಬಾರದು ಎಂದು ಉಲ್ಲೇಖಿಸಿಲ್ಲ. ದಲಿತರ ಎಲ್ಲ ಆಚರಣೆಗಳಲ್ಲೂ ಮಾಂಸ ಆಹಾರ ಇರಬೇಕು. ಹೀಗಿದ್ದಾಗ ದಲಿತರ ಆಹಾರ ಪದ್ದತಿಯೂ ಪುರೋಹಿತಶಾಹಿ ವ್ಯವಸ್ಥೆಯಡಿ ತರಲು ಮುಂದಾಗಿರುವುದು ದಬ್ಬಾಳಿಕೆಯ ಪರಮಾವಧಿಯನ್ನು ತೋರಿಸುತ್ತದೆ. ಹೀಗಾಗಿ ಡಾ. ಅಂಬೇಡ್ಕರ್ ಅವರ ಮೇಲೆ ನಿಜವಾದ ಕಾಳಜಿ ಇದ್ದರೆ ಸಂಪೂರ್ಣ ಮದ್ಯಪಾನ ನಿಷೇಧ ಜಾರಿ ಮಾಡಲಿ ಎಂದು ವೀರಾಪೂರು ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.