- ಎಂ.ಡಿ ಮಶಾಖ ಚಿತ್ತಾಪುರ
ಚಿತ್ತಾಪುರ: ಅರಣ್ಯ ಪ್ರದೇಶದಲ್ಲಿ ಕಾಡು ಹಂದಿಯನ್ನು ಬೇಟೆಯಾಡಿದ ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನವರು ಎನ್ನಲಾದ ಸೋಮೇಶ್ ತಂದೆ ಅಯ್ಯಪ್ಪಾ ಮತ್ತು ಅಂಬರೀಷ್ ತಂದೆ ಮಣಮಪ್ಪ ಎಂಬುವವರು ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮುಡಬೂಳ್ ಗ್ರಾಮದ ಹತ್ತಿರ ಕಾಡು ಹಂದಿಯ ಭೇಟೆಯಾಡಿ ಬುಲೇರೋ ವಾಹನದಲ್ಲಿ ರಾಯಚೂರು ಕಡೆಗೆ ತೆಗೆದುಕೊಂಡು ಹೋಗುತ್ತಿರುವಾಗ ಕರ್ತವ್ಯ ನಿರತರಾಗಿದ್ದ ಬೀಟ್ ಪೊಲೀಸ್ ಪೇದೆ ಒಬ್ಬರು ತಪಾಸಣೆ ನಡೆಸಿ ಠಾಣೆಗೆ ಕರೆತಂದಾಗ ಪಿಎಸ್’ಐ ಶ್ರೀಶೈಲ್ ಅಂಬಾಟಿ ಅವರು ವಿಚಾರಣೆ ನಡೆಸಿದ ನಂತರ ವಲಯ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಅರಣ್ಯ ಇಲಾಖೆಯ ಡಿಸಿಎಫ್ ಸುಮಿತ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಎಂ.ಡಿ ಮುನೀರ್ ಅಹಮದ, ಆರ್‌ಎಫ್‌ಒ ವಿಜಯಕುಮಾರ್ ಅವರು ಕಾರ್ಯಾಚರಣೆ ನಡೆಸಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜೆಎಂಎಫ್‌ಸಿ ನ್ಯಾಯಾಧೀಶರು ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಈ ಸಂದರ್ಭದಲ್ಲಿ ಡಿಆರ್‌ಎಫ್‌ಒ ಅನಿಲಕುಮಾರ, ಮಂಜುನಾಥ ಹಂದ್ರಾಳ್, ಸಂತೋಷ ಟೆಂಗಳಿ, ಜಟ್ಟೆಪ್ಪ ನಾವಿ, ಪೀರಪ್ಪ ಕತ್ತಿ, ಬೀಟ್ ಫಾರೆಸ್ಟರ್ ರಮೇಶ ಹಾದಿಮನಿ, ಚಂದ್ರಕಾಂತ್, ಜಾಫರ್, ಮಲ್ಲಪ್ಪ, ಮಹದೇವ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಇದ್ದರು.