ಕಲಬುರಗಿ; ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ವಚನ ಪಿತಾಮಹರು, ಅವರು ಕಡುಬಡವರಾಗಿದ್ದರೂ ಸಹ ಶರಣರ ವಚನಗಳ ಶೋಧನೆಯಲ್ಲಿ ಸಿರಿವಂತರಾಗಿದ್ದರು, ಅದಕ್ಕೇ ಅವರ ಶೋಧನೆ, ಸಂಪಾದನೆಯಲ್ಲಿ ಶರಣರು ಕಟ್ಟಿಕೊಟ್ಟ ಬದುಕಿನ ಸಾರವಾಗಿರುವ ವಚನಗಳು ಇಂದು ನಮ್ಮ ಕೈ ಸೇರಿವೆ, ಇಲ್ಲದೆ ಹೋದರೆ ವಚನಗಳ ಬಗ್ಗೆ ಗೊತ್ತೇ ಆಗುತ್ತಿರಲಿಲ್ಲ ಎಂದು ಶರಣ ಚಿಂತಕಿ ಜಯಶ್ರೀ ಚಟ್ನಳ್ಳಿ ಹೇಳಿದರು.
ಕಸಾಪ ಕಲಬುರಗಿ ತಾಲೂಕು ಘಟಕದ ಬೆಳಕು ಸಪ್ತಾಹದ ಚಿಂತನೆಯ ಸರಣಿಯಲ್ಲಿ ವಚನ ಪಿತಾಮಹ ಹಳಕಟ್ಟಿವರ ಕುರಿತಾಗಿ ಇಲ್ಲಿನ ರಿಂಗ್ ರಸ್ತೆಯ ಜಾಗೃತಿ ಕಾಲೋನಿಯಲ್ಲಿರುವ ಚನ್ನಬಸವೇಶ್ವರ ಪ್ರೌಢಾಲೆಯಲ್ಲಿ ನಡೆದ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ತಮ್ಮ ಉಪನ್ಯಾಸದಲ್ಲಿ ಜಯಶ್ರೀಯವರು ಹಳಕಟ್ಟಿಯವರ ವಚನಗಳ ಸಂಶೋಧನೆ, ಪರಿಷ್ಕರಣೆ, ಮುದ್ರಣದ ಹಂತಗಳ ಪರಿಯನ್ನು ವಿವರಿಸುತ್ತ , ಬಡತನ, ಕಷ್ಟ ಸಂಕಷ್ಟಗಳನ್ನೆಲ್ಲ ಎದುರಿಸಿದ ಅವರ ನಿಲುವು ವಿವರಿಸುತ್ತ ಮಕ್ಕಳ ಮನ ಗೆದ್ದರು.
ಹಳಕಟ್ಟಿಯವರು ವಚನಗಳ ಮುದ್ರಣಕ್ಕೆ ಮನೆಯನ್ನೇ ಮಾರಿ ಹಿತಚಿಂತಕ ಮುದ್ರಣಾಲಯ ಶುರು ಮಾಡಿದ್ದ ಪ್ರಸಂಗ, ಹಳಕಟ್ಟಿವರ ವಿದೇಶದಲ್ಲಿದ್ದ ಪುತ್ರನ ಅಕಾಲಿಕ ನಿಧನ ವರ‍್ತೆ, ಅದರಿಂದ ನೊಂದರೂ ವಚನ ಸಂಗ್ರಹ, ಸಂಶೋಧನೆಯ ಕಾಯಕ ಬಿಡದ ಹಳಕಟ್ಟಿಯವರ ಛಲವನ್ನು ವಿವರಿಸುತ್ತ ಇಂದಿನ ಮಕ್ಕಳು ಕಾಯಕ ಜೀವನ, ಹೊಸತನ್ನು ಹುಡುಕುವ ಜಾಣತನ, ಸಮಾಜಕ್ಕೆ ಉತ್ತಮವಾದುದನ್ನು ಕೊಡುವ ತವಕಗಳನ್ನು ಹಳಕಟ್ಟಿಯವರ ಬದುಕಿನಿಂದ ಕಲಿಯಬೇಕು ಎಂದರು.
೧೨ ನೇ ಶತಮಾನದ ಶರಣರ ವಚನ ಚಳುವಳಿ ಮುಂದಿನ ೩೦೦ ರ‍್ಷ ಮೌನವಗಿತ್ತು. ಹಳಕಟ್ಟಿಯವರು ವಿಜಯಪುರ ಭಾಗದಲ್ಲಿ ಗೋಡೆ, ಮಾಡುಗಳಿಗೆ ಪೂಜಿಸುವ ಸಂಪ್ರದಾಯದ ಬೆನ್ನತ್ತಿ ಅಲ್ಲೇನಿದೆ ಪೂಜಿಸಲು ಎಂದು ಶೋಧಿಸಿದ್ದರ ಫಲವೇ ಇಂದು ವಚನ ಭಂಡಾರ ನಮಗೆಲ್ಲರಿಗೂ ದೊರಕಿತು. ವಚನಗಳನ್ನು ಕಂಠಪಾಠ ಮಾಡುವ ಮೂಲಕ ಹಳಕಟ್ಟಿಯವರಿಗೆ ಗೌರವಿಸುವಂತೆ ಮಕ್ಕಳಿಗೆ ಕರೆ ನೀಡಿದರು.