ಬೆಂಗಳೂರು; 2022 ನೇ ಇಸವಿಯ ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಿನ ದೂರುದಾರ ಕಂಪನಿಯಾದ ಸೈಫರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‍ನಲ್ಲಿ(Cipher Technologies Pvt. Ltd) ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯು ಪಿರ್ಯಾದಿ ಕಂಪನಿಯ ವ್ಯವಹಾರಕ್ಕೆ ಉಪಯೋಗಿಸುತ್ತಿದ್ದ ಕ್ರಿಪ್ಟೋ ಪಾಸ್‍ವರ್ಡ್ ಅನ್ನು ಬದಲಾಯಿಸಿಕೊಂಡು ಕಂಪನಿಯ ಅಕೌಂಟ್‍ನಲ್ಲಿದ್ದ ಕ್ರಿಪ್ಟೋಕರೆನ್ಸಿಯನ್ನು ರೂಪಾಯಿಗೆ ಪರಿವರ್ತಿಸಿಕೊಂಡು ನಂತರ ತನ್ನ ಹಾಗೂ ಇತರೇ ಸ್ನೇಹಿತರ ಅಕೌಂಟ್‍ಗಳಿಗೆ ವರ್ಗಾವಣೆ ಮಾಡಿಕೊಂಡು ಪಿರ್ಯಾದಿ ಕಂಪನಿಗೆ ಸುಮಾರು ಕೋಟಿಗಟ್ಟಲೆ ನಷ್ಟವನ್ನುಂಟುಮಾಡಿ ಮೋಸ ಮಾಡಿರುವ ಬಗ್ಗೆ ಬೆಂಗಳೂರು ನಗರದ ಸುಬ್ರಮಣ್ಯನಗರ ಪೆÇಲೀಸ್ ಠಾಣೆಯಲ್ಲಿ ಮೊ.ಸಂ.48/2022 ಕಲಂ 66(ಸಿ), 66(ಡಿ), 66(ಇ) ಆಫ್ ಐ.ಟಿ. ಕಾಯ್ದೆ 2000 ಮತ್ತು ಕಲಂ 34, 120(ಬಿ), 403, 406, 408, 420 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಯ ಸಲುವಾಗಿ ಸಿಐಡಿ ಘಟಕದ ಸೈಬರ್ ಕ್ರೈಂ ವಿಭಾಗಕ್ಕೆ ವರ್ಗಾವಣೆಯಾಗಿರುತ್ತದೆ.
ತನಿಖಾ ಸಮಯದಲ್ಲಿ ಆರೋಪಿತನು ಪಿರ್ಯಾದಿ ಕಂಪನಿಗೆ ಸಂಬಂಧಿಸಿದ ಕ್ರಿಪ್ಟೋ ವಾಲೆಟ್‍ನಿಂದ ಪಿರ್ಯಾದಿ ಕಂಪನಿಯ ಗಮನಕ್ಕೆ ಬಾರದೇ ತನ್ನ, ತನ್ನ ಕುಟುಂಬ ಸದಸ್ಯರ ಹಾಗೂ ತನ್ನ ಸ್ನೇಹಿತರ ಕ್ರಿಪ್ಟೋ ವಾಲೆಟ್‍ಗಳಿಗೆ ಕ್ರಿಪ್ಟೋ ಕರೆನ್ಸಿಯನ್ನು ವರ್ಗಾವಣೆ ಮಾಡಿಕೊಂಡು ನಂತರ ಸದರಿ ಕ್ರಿಪ್ಟೋ ಕರೆನ್ಸಿಯನ್ನು ತನ್ನ ಸ್ನೇಹಿತರ ಹಾಗೂ ಇತರೇ ವ್ಯಕ್ತಿಗಳ ಬ್ಯಾಂಕ್‍ಗಳಿಗೆ ಕ್ರಿಪ್ಟೋ ಎಕ್ಸ್‍ಚೇಂಜ್‍ಗಳ ಮೂಲಕ ನಗದಾಗಿ ಪರಿವರ್ತಿಸಿಕೊಂಡು ವಂಚನೆ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿರುತ್ತದೆ.
ತನಿಖೆಯಲ್ಲಿ ಅನ್ವೇಷಿಸಿದ ಮಾಹಿತಿಯ ಆಧಾರದ ಮೇರೆಗೆ ತನಿಖಾಧಿಕಾರಿಯವರು ಆರೋಪಿತನಾದ ಶುಭಾಂಗ್ ಜೈನ್, 26 ವರ್ಷ ಈತನನ್ನು ಮುಂಬೈನಲ್ಲಿ ದಸ್ತಗಿರಿ ಮಾಡಿದ್ದು, ಆರೋಪಿತನಿಂದ 2 ಮೊಬೈಲ್‍ಗಳನ್ನು ಹಾಗೂ 2 ಲ್ಯಾಪ್‍ಟಾಪ್‍ಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದ್ದು, ವಂಚನೆಯ ಹಣವನ್ನು ಅಮಾನತ್ತು ಪಡಿಸಿಕೊಳ್ಳುವ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾದ ಶಿವಪ್ರಸಾದ್, ಡಿಟೆಕ್ಟಿವ್ ಪೆÇಲೀಸ್ ಇನ್ಸ್‍ಪೆಕ್ಟರ್ ಹಾಗೂ ವಿಶ್ವನಾಥ್, ಹೆಚ್.ಸಿ ಅವರುಗಳು ಮುಖ್ಯಪಾತ್ರ ವಹಿಸಿರುತ್ತಾರೆ ಎಂದು ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಸೂಪರಿಂಟೆಂಡೆಂಟ್ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.