ಆಳಂದಕ್ಕೆ ವಿಶೇಷ ಅನುದಾನ ತರುವಲ್ಲಿ ಶಾಸಕ ಬಿ ಆರ್ ಪಾಟೀಲ ವಿಫಲ

0
54

ಆಳಂದ; ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ತಾಲೂಕಿನಲ್ಲಿ ಹೆಚ್ಚು ಮಳೆ ಬಂದಿರುವುದರಿಂದ ಮುಂಗಾರು ಬೆಳೆಗಳಾದ ಹೆಸರು, ಉದ್ದು, ತೊಗರಿ, ಸೋಯಾಬಿನ್ ಬೆಳೆಗಳು ಮಳೆಯಿಂದ ಹಾಳಾಗಿವೆ ಹಾಳಾದ ಬೆಳೆಗಳಿಗೆ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ಸುಭಾಷ್ ಗುತ್ತೇದಾರ ಒತ್ತಾಯಿಸಿದ್ದಾರೆ.

ಸೋಮವಾರ ಆಳಂದ ಪಟ್ಟಣದ ಸ್ವಗೃಹದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಉದ್ದು, ಹೆಸರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದರೂ ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ತೆಗೆದಿಲ್ಲ ಇದರಿಂದ ರೈತಾಪಿ ವರ್ಗಕ್ಕೆ ನಷ್ಟವಾಗುತ್ತಿದೆ. ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಸಮರ್ಪಕ ದರ ದೊರೆಯುತ್ತಿಲ್ಲ. ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸಿ ಪ್ರತಿ ರೈತರಿಂದ ಅನಿರ್ಭಂದಿತವಾಗಿ ಉದ್ದು, ಹೆಸರು ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ಹೆಚ್ಚು ಮಳೆ ಬಂದು ಬೆಳೆ ಕೆಲವು ಕಡೆ ಉದ್ದು, ತೊಗರಿ, ಸೋಯಾಬಿನ್ ಮತ್ತು ತೊಗರಿ ಬೆಳೆಗಳು ಹಾಳಾಗಿರುವುದರಿಂದ ಕಂದಾಯ ಮತ್ತು ಕೃಷಿ ಅಧಿಕಾರಿಗಳ ತಂಡದಿಂದ ಜಂಟಿ ಸಮೀಕ್ಷೆ ನಡೆಸಿ ಶಾಸಕ ಬಿ ಆರ್ ಪಾಟೀಲ ರೈತರಿಗೆ ಬೆಳೆ ವಿಮೆ ದೊರಕಿಸಿ ಕೊಡಲಿ ಎಂದು ಆಗ್ರಹಿಸಿದರು.

ಸೆ.17ರಂದು ಕಲಬುರಗಿಯಲ್ಲಿ ಜರುಗಿದ ರಾಜ್ಯ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆಯಿಂದ ಆಳಂದ ಮತಕ್ಷೇತ್ರಕ್ಕೆ ಯಾವುದೇ ಲಾಭವಾಗಿಲ್ಲ. ಮುಖ್ಯಮಂತ್ರಿಗಳ ಸಲಹೆಗಾರರಾಗಿರುವ ಆಳಂದ ಶಾಸಕ ಬಿ ಆರ್ ಪಾಟೀಲ ಮುಖ್ಯಮಂತ್ರಿಗಳ ಗಮನ ಸೆಳೆದು ಆಳಂದ ತಾಲೂಕಿನ ಮಹತ್ವದ ಕೆರೆ ತುಂಬಿಸುವ ಯೋಜನೆಗೆ ಅನುಮೋದನೆ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅಲ್ಲದೇ ತಾಲೂಕಿನ ಯಾವ ಯೋಜನೆಗಳೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬಾರದಿರುವುದು ದುರ್ದೈವ ಎಂದು ಹೇಳಿದರು.

ಕೇವಲ ಪ್ರಭಾವಿಗಳ ಮತಕ್ಷೇತ್ರಗಳಿಗೆ ಅನುದಾನ ನೀಡಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಹಣವನ್ನೇ ನೀಡಿದ್ದಾರೆ ಅದರಲ್ಲಿ ಅಂತಹ ವಿಶೇಷತೆ ಏನೂ ಇಲ್ಲ. ಶಾಸಕ ಬಿ ಆರ್ ಪಾಟೀಲ ಹೇಳಿಕೆಗೆ ಸ್ವಪಕ್ಷೀಯ ಮುಖಂಡರೇ ಖಂಡನೆ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟ ಸಭೆ ನಡೆಯುವ ಮೊದಲು ಒಂದೂ ಪತ್ರಿಕಾಗೋಷ್ಟಿ ನಡೆಸದ ಶಾಸಕ ಬಿ ಆರ್ ಪಾಟೀಲ ಸಭೆಯ ನಂತರ ಪತ್ರಿಕಾಗೋಷ್ಟಿ ಮಾಡಿ ಮಾತನಾಡಿರುವುದು ಅವರ ಇಬ್ಬಂದಿತನ ಎತ್ತಿ ತೋರಿಸುತ್ತದೆ ಎಂದರು.

ಶಾಸಕ ಬಿ ಆರ್ ಪಾಟೀಲರಿಂದ ಯಾವುದೇ ಹೊಸ ಕಾಮಗಾರಿಗಳು ಕ್ಷೇತ್ರಕ್ಕೆ ಬಂದಿಲ್ಲ. ಕೇವಲ ಚಲಾವಣೆಯಲ್ಲಿರಬೇಕು ಎಂಬ ಉದ್ದೇಶದಿಂದ ನಮ್ಮ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಬೇರೆ ಬೇರೆ ಹೆಸರು ಕೊಟ್ಟು ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಕೆಕೆಆರ್‍ಡಿಬಿಗೆ 5 ಸಾವಿರ ಕೋ. ರೂ ನೀಡುವ ತೀರ್ಮಾನ ಮಾಡಿದ್ದೆ ಬಿಜೆಪಿ ಸರ್ಕಾರ. ಸಚಿವಾಲಯ ಸ್ಥಾಪಿಸುವ ನಿರ್ಧಾರ ಉತ್ತಮವಾದುದ್ದು ಆದರೆ ಅದನ್ನು ಕಾಲಮಿತಿಯಲ್ಲಿ ಜಾರಿಗೊಳಿಸಬೇಕು. ಸಚಿವ ಸಂಪುಟ ಸಭೆ ನಡೆದಿರುವ ಬಗ್ಗೆ ಕಾಂಗ್ರೆಸ್ ಶಾಸಕರೇ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಕೆಕೆಆರ್‍ಡಿಬಿಯ ಯೋಜನೆಗಳನ್ನೇ ಪುನ: ಘೋಷಣೆ ಮಾಡಿದ್ದಾರೆ. ಈ ಭಾಗದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಆಗಿಲ್ಲ ಎಂದು ಹೇಳಿದರು.

ಕಲಬುರಗಿ ಸಂಪುಟ ಸಭೆ ಈ ಭಾಗದ ಕಾಂಗ್ರಸ್ ಶಾಸಕರಲ್ಲೇ ಅಸಮಾಧಾನ ಹುಟ್ಟು ಹಾಕಿದೆ. ಸ್ವತ: ಆಳಂದ ಶಾಸಕ ಬಿ ಆರ್ ಪಾಟೀಲ ಅಸಮಾಧಾನ ಹೊರ ಹಾಕಿದ್ದಾರೆ. ಸಚಿವ ಸಂಪುಟ ಸಭೆಯ 46 ನಿರ್ಣಯಗಳಲ್ಲಿ ಪ್ರಭಾವಿಗಳ ಕ್ಷೇತ್ರಕ್ಕೆ ಮಣೆ ಹಾಕಲಾಗಿದೆ. ಕಲಬುರಗಿ, ಸೇಡಂ, ಜೇವರ್ಗಿ ಕ್ಷೇತ್ರಗಳಿಗೆ ಅತ್ಯಧಿಕ ಅನುದಾನ ನೀಡಲಾಗಿದೆ ಇದರಿಂದ ಇದೊಂದು ವ್ಯರ್ಥ ಸಚಿವ ಸಂಪುಟ ಸಭೆ ಎಂದು ವ್ಯಾಖ್ಯಾನಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಮಲ್ಲಣ್ಣಾ ನಾಗೂರೆ, ಶರಣಬಸಪ್ಪ ಸಂಜವಾಡ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here