ಕಲಬುರಗಿ: ಕಸ ವಿಲೇವಾರಿ, ಸ್ವಚ್ಚತೆ ಮಾಡುವ ಕಾರ್ಯ ನಿರ್ವಹಿಸುತ್ತಿರುವ ಕಾಯಕ ಜೀವಿಗಳಾದ ಪೌರ ಕಾರ್ಮಿಕರು ಸ್ವಚ್ಚತೆಯ ರಾಯಭಾರಿಗಳು. ಅವರ ಸೇವೆ ಅನನ್ಯವಾಗಿದೆ. ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸುವುದು, ಸರ್ಕಾರಿ ಸೌಲಭ್ಯಗಳು ನೀಡಬೇಕು ಎಂದು ಕಾರ್ಮಿಕ ಮುಖಂಡ ಡಾ.ಸುನೀಲಕುಮಾರ ಎಚ್.ವಂಟಿ ಸರ್ಕಾರಕ್ಕೆ ಒತ್ತಾಯ ಮಾಡಿದರು.
ನಗರದ ಜಗತ್ ಬಡಾವಣೆಯ ಭೀಮ ನಗರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ಇವುಗಳ ವತಿಯಿಂದ ಸೋಮವಾರ ಸಂಜೆ ಏರ್ಪಡಿಸಲಾಗಿದ್ದ ‘ರಾಜ್ಯ ಪೌರ ಕಾರ್ಮಿಕರ ದಿನಾಚರಣೆ’ಲ್ಲಿ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರನ್ನು ಸತ್ಕರಿಸಿ ಅವರು ಮಾತನಾಡುತ್ತಿದ್ದರು.
ಪೌರ ಕಾರ್ಮಿಕರು ಬಡತನ ರೇಖೆಗಿಂತ ಕೆಳಗಿದ್ದಾರೆ. ಅವರಿಗೆ ಮನೆಗಳನ್ನು ನಿರ್ಮಾಣ ಮಾಡಿ ಒದಗಿಸುವಂತೆ ವಸತಿ ಸಚಿವರಿಗೆ ಮನವಿ ಸಲ್ಲಿಸಿಸಲಾಗಿದ್ದು, ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸಂಂದಿಸಿದ್ದಾರೆ. ಕಾರ್ಮಿಕರ ನ್ಯಾಯಯುತ ಬೇಡಿಕಗಳು ಈಡೇರಬೇಕು ಎಂದು ಹೇಳಿದರು.
ಬಳಗದ ಅಧ್ಯಕ್ಷ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ನಮಿಸುವ ಕೈಗಳಿಗಿಂತ, ದುಡಿಯುವ ಕೈಗಳು ಶ್ರೇಷ್ಟವಾಗಿವೆ. ದುಡಿಯುವ ವರ್ಗ ಕನಿಷ್ಟ ಮತ್ತು ದುಡಿಸಿಕೊಳ್ಳುವ ವರ್ಗ ಗರಿಷ್ಟ ಎಂಬ ಮನೋಭಾವನೆಯನ್ನು ತೆಗೆದು ಕಾಯಕಕ್ಕೆ ದೈವತ್ವದ ಸ್ಥಾನವನ್ನು ನೀಡಿದ ಬಸವಾದಿ ಶರಣರ ಕೊಡುಗೆ ಅನನ್ಯವಾಗಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಾರ್ಮಿಕರ ಹಿತರಕ್ಷಣೆಗಾಗಿ ಸಂವಿಧಾನದ ಮೂಲಕ ಕಾನೂನುಗಳನ್ನು ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಾದ ಗೌತಮ ವಂಟಿ, ಸುಜಾತಾ ಸರಡಗಿ, ತಾರಾಬಾಯಿ ವಂಟಿ, ಶಾಂತಾಬಾಯಿ ತೆಲ್ಲೂರ, ಗೋದಾವರಿ ಕೆರಮಗಿ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು.
ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅಶೋಕ ಕಾಳೆ, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಝಾಪೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ, ಪ್ರಮುಖರಾದ ಮಲ್ಲಮ್ಮ ವಂಟಿ, ಕಮಲಾಬಾಯಿ ಕೆರಮಗಿ, ಗೌತಮ ಸರಡಗಿ, ನಾಗಮ್ಮ ಸರಡಗಿ ಸೇರಿದಂತೆ ಇನ್ನಿತರರಿದ್ದರು.