ಶುಲ್ಕ ನೆಪವೊಡ್ಡಿ ಎಸ್.ಸಿ-ಎಸ್.ಟಿ ಮಕ್ಕಳನ್ನು ಪ್ರವೇಶಾತಿ ನಿರಾಕರಿಸುವಂತಿಲ್ಲ: ಪಿ.ಎಂ.ನರೇಂದ್ರಸ್ವಾಮಿ

0
43

ವಿಧಾನಮಂಡಲದ ಎಸ್.ಸಿ.-ಎಸ್.ಟಿ ಕಲ್ಯಾಣ ಸಮಿತಿಯಿಂದ ಪ್ರಗತಿ ಪರಿಶೀಲನೆ

ಕಲಬುರಗಿ: ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ‌ ಮಕ್ಕಳಿಗೆ ಶುಲ್ಕ ನೆಪವೊಡ್ಡಿ ಪ್ರವೇಶ ನಿರಾಕರಿಸುವಂತಿಲ್ಲ. ಪ್ರವೇಶ ನಿರಾಕರಿಸಿದಲ್ಲಿ ಅಂತಹ ಸಂಸ್ಥೆ-ಶಾಲೆಗಳ ವಿರುದ್ದ ಅಟ್ರಾಸಿಟಿ ಪ್ರಕರಣಗಳು ದಾಖಲಿಸಬೇಕು ಎಂದು ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.

ಬುಧವಾರ ಇಲ್ಲಿನ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಕಲಬುರಗಿ ವಿಭಾಗದ ಕಲಬುರಗಿ, ಯಾದಗಿರಿ ಹಾಗೂ ಬೀದರ ಜಿಲ್ಲೆಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರ ಅಭಿವೃದ್ಧಿ, ಕಲ್ಯಾಣ, ಏಳಿಗೆಗೆ ವಿವಿಧ ಇಲಾಖೆಗಳು ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

Contact Your\'s Advertisement; 9902492681

ಸರ್ಕಾರಿ ಶಾಲೆ-ಕಾಲೇಜಿಗೆ ಬರುವರು ಎಸ್.ಸಿ-ಎಸ್.ಟಿ ಹಾಗೂ ಬಡ ಮಕ್ಕಳೆ‌ ಜಾಸ್ತಿ. ಹೀಗಾಗಿ ಇಂತಹ ಮಕ್ಕಳಿಗೆ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಎಸ್.ಡಿ.ಎಂ.ಸಿ ಸಮಿತಿಯನ್ನು ವಿಶ್ವಾಸಕ್ಕೆ ಪಡೆದು ಸರ್ಕಾರದ ಅನುದಾನ ಹೊರತಾಗಿ ಸ್ಥಳೀಯವಾಗಿ ಅನುದಾನ ಸಂಗ್ರಹಿಸಿ ಗುಣಮಟ್ಟದ ಶಿಕ್ಷಣ ನೀಡುವತ್ತ ಹೆಚ್ಚು ಮುತುವರ್ಜಿ ವಹಿಸಬೇಕು ಎಂದರು.

ಸರ್ಕಾರಿ ಶಾಲೆಯಲ್ಲಿ ನೀಡಲಾಗುವ ಸೌಲಭ್ಯದಿಂದ ಖಾಸಗಿ ಶಾಲೆಗಳ ಮಕ್ಕಳೊಂದಿಗೆ ಎಸ್.ಸಿ-ಎಸ್.ಟಿ ಮಕ್ಕಳು ಸ್ಪರ್ಧೆ ಮಾಡುವುದು ತುಂಬಾ ಕಠಿಣವಾಗಿದೆ. ಇಂತಹ ಮಕ್ಕಳಿಗೆ ಮೂಲಸೌಕರ್ಯ, ಕೊರತೆ ಶಿಕ್ಷಕರನ್ನು ಅತಿಥಿ ಶಿಕ್ಷಕರ ರೂಪದಲ್ಲಿ ಒದಗಿಸುವ ಮೂಲಕ ಬೋಧನೆಯ ಕೊರತೆ ನೀಗಿಸಬೇಕಿದೆ. ಶಿಕ್ಷಣದ‌ ಮುಕ್ತ ಅವಕಾಶ ತಳ ಸಮುದಾಯದ ಮಕ್ಕಳಿಗೆ ದೊರೆಯದಿದ್ದಲ್ಲಿ ಮುಂದೆ ಅದು ದೊಡ್ಡ ಸಾಮಾಜಿಕ ಪಿಡುಗಾಗಿ ಪರಿಣಮಿಸಬಹುದು. ನಿರುದ್ಯೋಗದಂತಹ ಸಮಸ್ಯೆ ತಲೆದೋರಬಹುದು. ಹೀಗಾಗಿ ಸರ್ಕಾರಿ-ಖಾಸಗಿ ಮಕ್ಕಳ ನಡುವೆ ಇರುವ ಅಂತರ ನಿವಾರಿಸಬೇಕೆಂದ ಅವರು, ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸಿ.ಎಸ್.ಆರ್, ಡಿ.ಎಂ.ಎಫ್‌ ಅನುದಾನ ಬಳಸಬೇಕು ಎಂದು ಡಿ.ಸಿ.ಗೆ ಪಿ.ಎಂ.ನರೇಂದ್ರಸ್ವಾಮಿ ನಿರ್ದೇಶನ ನೀಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಜನಸಂಖ್ಯೆ ಅನುಗುಣವಾಗಿ ಕಾರ್ಯಕ್ರಮ ರೂಪಿಸಬೇಕು. ಎಸ್.ಸಿ. ಎಸ್.‌ಟಿ ಕಾಲೋನಿ ಪ್ರದೇಶದಲ್ಲಿ ನರೇಗಾ ಕಾಮಗಾರಿ ತೆಗೆದುಕೊಳ್ಳಲಾಗಿದಿಯೇ ಎಂದು ಪ್ರಶ್ನಿಸಿದ ಸಮಿತಿ ಅಧ್ಯಕ್ಷರು, ಪ್ರಸಕ್ತ ಸಾಲಿನ ಅಯವ್ಯಯದಲ್ಲಿ ಈ ಸಮುದಾಯದ ಒಳಿತಿಗೆ 36 ಸಾವಿರ ಕೋಟಿ ರೂ. ಹಣ ಮೀಸಲಿಡಲಾಗಿದೆ. ಇದನ್ನು ಸಮರ್ಪಕವಾಗಿ ಬಳಸಿ ಸಮುದಾಯದ ಜನರ ಬದುಕಿಗೆ ಬೆಳಕಾಗಬೇಕು ಎಂದ ಅವರು, ಪ್ರತಿ ಹಳ್ಳಿಯ ಪರಿಶಿಷ್ಟ ಕಾಲೋನಿಗಳ ಪ್ರತಿ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಬೇಕು ಎಂದರು.

ದೇವದಾಸಿ ಪದ್ಧತಿ ನಿರ್ಮೂಲನೆಗೆ ಜಾಗೃತಿ ಕಾರ್ಯಕ್ರಮಗಳು ತೀವ್ರಗೊಳಿಸಬೇಕು. ವಸತಿ ರಹಿತರಿಗೆ ವಸತಿ ಯೋಜನೆಯಡಿ ಮನೆ‌ ನೀಡಬೇಕು.‌ನಿವೇಶನ ಇಲ್ಲದಿದ್ದಲ್ಲಿ ಸರ್ಕಾರವೇ ಖರೀದಿಸಿ ಮಾಜಿ ದೇವದಾಸಿಯರಿಗೆ ನೀಡಬೇಕು. ಮಾಜಿ ದೇವದಾಸಿಯರ ಕುರಿತು ಸಮಾಜ ಬೇರೆ ದೃಷ್ಟಿಯಿಂದಲೇ ನೋಡುತ್ತದೆ. ಹೀಗಾಗಿ ಇವರ ನೆರವಿಗೆ ಬರಬೇಕಾಗಿರುವುದು ಸರ್ಕಾರ. ಹೀಗಾಗಿ ಅಧಿಕಾರಿಗಳು ಸಾಮಾಜಿಕ‌ ನ್ಯಾಯ ದೊರಕಿಸುವ ಕೆಲಸ‌ ಮಾಡಬೇಕೆಂದರು.

ಜಾತಿ ನಿಂದನೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ವೇಳೆಯಲ್ಲಿ ಆರೋಪಿತನಿಗೆ ಶಿಕ್ಷೆಯಾಗುವ ರೀತಿಯಲ್ಲಿ ಸರಿಯಾದ ಸೆಕ್ಷನ್ ಹಾಕದ ಕಾರಣ ರಾಜ್ಯದಲ್ಲಿ ಶಿಕ್ಷೆ ಪ್ರಮಾಣ ಡಬಲ್ ಡಿಜಿಟ್ ದಾಟುತ್ತಿಲ್ಲ. ಇದೇ ವಿಷಯದಲ್ಲಿ ಯು.ಪಿ, ಬಿಹಾರನಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿದೆ. ಪೊಲೀಸ್ ಅಧಿಕಾರಿಗಳು ಚಾರ್ಜ್ ಶೀಟ್ ಹಾಕುವಾಗ ನೊಂದ ಸಂತ್ರಸ್ತರಿಗೆ ನ್ಯಾಯ ನೀಡುವ ನಿಟ್ಟಿನಲ್ಲಿ ಸೆಕ್ಷನ್ ಹಾಕಬೇಕು ಎಂದು ಎಸ್.ಪಿ. ಅಡ್ಡೂರು ಶ್ರೀನಿವಾಸಲು ಮತ್ತು ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಅವರಿಗೆ ಸಮಿತಿ ಅಧ್ಯಕ್ಷರು ಸೂಚನೆ‌ ನೀಡಿದರು.

ಎಸ್.ಸಿ-ಎಸ್.ಟಿ ಕಾಲೋನಿಗಳಲ್ಲಿ ವಿದ್ಯುತ್ ಪೂರೈಕೆ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಸಮಾಜ‌ ಕಲ್ಯಾಣ ಇಲಾಖೆಯ ತಾಲೂಕಾ ಹಂತದ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಕೂಡದೆ ಎಲ್ಲಾ ಇಲಾಖೆಗಳಲ್ಲಿ ಎಸ್.ಸಿ.ಪಿ-ಟಿ.ಎಸ್.ಪಿ ಕಾರ್ಯಕ್ರಮಗಳ ಮೆಲ್ವಿಚಾರಣೆ ಮಾಡುವದಲ್ಲದೆ‌ ಸಮಗ್ರ ಮಾಹಿತಿ ಸಂಗ್ರಹಿಸಿಕೊಂಡಿರಬೇಕು ಎಂದು ಖಡಕ್ ಸೂಚನೆ ನೀಡಿದರು.

ಗುತ್ತಿಗೆಯಲ್ಲಿ ಮೀಸಲಾತಿ ಕೊಡಿ: ಲೋಕೋಪಯೋಗಿ, ನೀರಾವರಿ, ಜೆಸ್ಕಾಂ, ಪಿ.ಆರ್.ಇ.ಡಿ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ವಿವಿಧ‌ ಇಲಾಖೆಗಳ ಮೂಲಕ ಕೈಗೊಳ್ಳುವ ಸಿವಿಲ್, ಮೂಲಸೌಕರ್ಯ ಕಾಮಗಾರಿಗಳ ಪೈಕಿ 1 ಕೋಟಿ ರೂ. ವರೆಗಿನ ಕಾಮಗಾರಿಗಳಿಗೆ ಎಸ್.ಸಿ. ಗುತ್ತಿಗೆದಾರರಿಗೆ ಶೇ.17.5 ಮತ್ತು ಎಸ್.ಟಿ. ವರ್ಗದ ಗುತ್ತಿಗೆದಾರರಿಗೆ ಶೇ.7.5 ರಂತೆ‌ ಮೀಸಲಾತಿ‌ ಅನ್ವಯ ಗುತ್ತಿಗೆ ನೀಡಲು ಸರ್ಕಾರದ ಸ್ಪಷ್ಟ ನಿರ್ದೇಶನವಿದ್ದರು ವಿವಿಧ ಕಾಮಗಾರಿಗಳನ್ನು ಕ್ಲಬ್ ಮಾಡಿ ಪ್ಯಾಕೇಜ್ ಆಧಾರದ ಮೇಲೆ ಟೆಂಡರ್ ಕರೆಯುತ್ತಿರುವುದಿರಂದ ಈ ವರ್ಗದ ಗುತ್ತಿಗೆದಾರರಿಗೆ ಮೀಸಲಾತಿಯಿಂದ ವಂಚಿಸಲಾಗುತ್ತಿದೆ. ಕೂಡಲೆ ಇದನ್ನು ಸರಿಪಡಿಸಿ ಸಮಪರ್ಕವಾಗಿ ಅನುಷ್ಠಾನಗೊಳಿಸಬೇಕು ಎಂದು ಎಲ್ಲಾ ಅನುಷ್ಟಾನಾಧಿಕಾರಿಗಳಿಗೆ ಸೂಚನೆ ನೀಡಿದರು.

ಅರಣ್ಯ ರಕ್ಷಾ‌ ಸಮಿತಿ ಸ್ಥಾಪಿಸಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ, ಶೇರಿಭೀಕನಳ್ಳಿ ಅರಣ್ಯ ವಾಸಿಗಳಿಗೆ ಸಂಬಂಧಪಟ್ಟಂತೆ ಪುನರ್ವಸತಿ ಯೋಜನೆಯಡಿ ರಚಿಸಬೇಕಾಗಿದ್ದ ರಕ್ಷಣಾ‌ ಸಮಿತಿ ರಚಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪಿ.ಎಂ.ನರೇಂದ್ರಸ್ವಾಮಿ ಅವರು, ಸಮಿತಿ ರಚಿಸದೆ ಹೋದರೆ ಅವರಿಗೆ ಹೇಗೆ ಸೌಲಭ್ಯ ನೀಡುವುದು ಎಂದು ಪ್ರಶ್ನಿಸಿ ಕೂಡಲೆ ಅರಣ್ಯ ಇಲಾಖೆ ಸಮಿತಿ ರಚಿಸಿ ಮೂರು ದಿನದಲ್ಲಿ ಸಮಿತಿಗೆ ವರದಿ ಸಲ್ಲಿಸಬೇಕೆಂದು ತಿಳಿಸಿದರು. ಅಲ್ಲದೆ ಅರಣ್ಯದಲ್ಲಿನ ಪಟ್ಟಾ ಜಮೀನಿಗೆ ಸಂಬಂಧಿಸಿದಂತೆ ಪ್ರಕರಣಗಳ ಕುರಿತು ಅರಣ್ಯ ಹಕ್ಕು ಸಮಿತಿಯಲ್ಲಿ ಮತ್ತೊಮ್ಮೆ ಪರಿಶೀಲಿಸಬೇಕು ಎಂದರು.

ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ ಜಿಲ್ಲೆಯಲ್ಲಿ ಯಾವುದೇ ಕಾನೂನು ಮತ್ತು ಸುವ್ಯಸ್ಥೆಗೆ ಸಂಬಂಧಪಟ್ಟಂತೆ ಸಮಸ್ಯೆ ಇಲ್ಲ. ಅಟ್ರಾಸಿಟಿ ಪ್ರಕರಣದಲ್ಲಿ 60 ದಿನದಲ್ಲಿಯೆ ಚಾರ್ಜ್ ಶೀಟ್ ಸಲ್ಲಿಸಲಾಗುತ್ತಿದೆ. ಸಂತ್ರಸ್ತರಿಗೆ ಪರಿಹಾರ ಸಹ ಕೊಡಲಾಗುತ್ತಿದೆ. 26 ಕಡೆ ಸ್ಮಶಾನ ಭೂಮಿಗೆ ಎಸ್.ಸಿ.-ಎಸ್.ಟಿ ವರ್ಗದವರಿಂದ ಅರ್ಜಿ ಬಂದಿದ್ದು, ಈಗಾಗಲೆ 7ಕ್ಕೆ ಅನುಮೋದನೆ ನೀಡಲಾಗಿದ್ದು, ಬಾಕಿ ಅರ್ಜಿ ಪರಿಶೀಲನಾ ಹಂತದಲ್ಲಿವೆ. ಇನ್ನು ಕಂದಾಯ ನ್ಯಾಯಾಲಯದಲ್ಲಿ ಒಂದು ವರ್ಷ ಮೀರಿದ ಯಾವುದೇ ಪ್ರಕರಣ ಬಾಕಿ ಇಲ್ಲ ಎಂದು ಸಮಿತಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ‌ ಸಮಿತಿ ಸದಸ್ಯರಾದ ಬಸನಗೌಡ ದದ್ದಲ, ಬಸವರಾಜ್ ಮತ್ತಿಮೂಡ್, ಕೃಷ್ಣ ನಾಯಕ, ಶಾಂತರಾಮ್ ಬುಡ್ನ ಸಿದ್ದಿ, ಜಗದೇವ್ ಗುತ್ತೇದಾರ್, ಸಮಿತಿ ಕಾರ್ಯದರ್ಶಿ ಶ್ರೀನಿವಾಸ್, ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಸೇರಿದಂತೆ ಜಿಲ್ಲೆಯ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು. ನಂತರ ಯಾದಗಿರಿ, ಬೀದರ ಜಿಲ್ಲೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here