ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 114ನೇ ಮನ್ ಕೀ ಬಾತ್ ಕಾರ್ಯಕ್ರಮವನ್ನು ಮುಖಂಡರು ವೀಕ್ಷಣೆ ಮಾಡಿದರು.
ಈ ವೇಳೆ ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ಮನ್ ಕಿ ಬಾತ್ ಕಾರ್ಯಕ್ರಮ ಅಕ್ಟೋಬರ್ 3, 2014 ರಂದು ಪ್ರಾರಂಭವಾಗಿ ಇಂದಿಗೆ 10ವರ್ಷದ ಮೈಲಿಗಲ್ಲು ದಾಟಿದೆ. ಪ್ರಧಾನಿ ಪ್ರತಿ ತಿಂಗಳು ರಾಷ್ಟ್ರವನ್ನು ಉದ್ದೇಶಿಸಿ ಭಾರತದ ಅಭಿವೃದ್ಧಿ,ಜನರ ಜೀವನ ಮಟ್ಟದ ಸುಧಾರಣೆ ಗಾಗಿ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತಿದ್ದಾರೆ. ಪ್ರತಿ ತಿಂಗಳು ವಿವಿಧ ಕ್ಷೇತ್ರದ ಸಾಧನೆಗಳು, ಕಹಿಘಟನೆ, ಸಂತೋಷ ಮತ್ತು ಹೆಮ್ಮೆಯ ಕ್ಷಣಗಳನ್ನು ಮತ್ತು ನವ ಭಾರತಕ್ಕಾಗಿ ಸಲಹೆಗಳನ್ನು ಈ ಕಾರ್ಯಕ್ರಮದ ಮೂಲಕ ಹಂಚಿಕೊಳ್ಳುತ್ತಿದ್ದಾರೆ.
22 ಭಾರತೀಯ ಭಾಷೆಗಳು ಮತ್ತು 29 ಉಪಭಾಷೆಗಳು ಸೇರಿದಂತೆ, ‘ಮನ್ ಕಿ ಬಾತ್’ ಅನ್ನು ಫ್ರೆಂಚ್, ಚೈನೀಸ್, ಇಂಡೋನೇಷಿಯನ್, ಟಿಬೆಟಿಯನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶ್ತು, ಪರ್ಷಿಯನ್, ಡಾರಿ ಮತ್ತು ಸ್ವಾಹಿಲಿ ಸೇರಿದಂತೆ 11 ವಿದೇಶಿ ಭಾಷೆಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಮನ್ ಕಿ ಬಾತ್ ಅನ್ನು ಆಲ್ ಇಂಡಿಯಾ ರೇಡಿಯೊದ 500 ಕ್ಕೂ ಹೆಚ್ಚು ಪ್ರಸಾರ ಕೇಂದ್ರಗಳು ಪ್ರಸಾರ ಮಾಡುತ್ತಿವೆ. ಆದ್ದರಿಂದ ಜಗತ್ತಿನ ಮಹತ್ವದ ಕಾರ್ಯಕ್ರಮಗಳಲ್ಲಿ ಈ ಮನ್ ಕಿ ಬಾತ್ ಕಾರ್ಯಕ್ರಮ ಒಂದಾಗಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ನಮ್ಮೆಲ್ಲ ಭಾರತೀಯರಿಗೆ ಸೇರಿದಂತೆ ಜಗತ್ತಿನ ನಾನಾ ಭಾಗದ ಜನರಿಗೆ ಜೀವನದ ಸ್ಫೂರ್ತಿಯಾಗಿ ಈ ಕಾರ್ಯಕ್ರಮ ರೂಪಗೊಂಡಿರುವುದು ವಿಶೇಷ ವಾಗಿದೆ ಎಂದು ಹೇಳಿದರು.
ಮುಖಂಡರಾದ ಬಸವರಾಜ ಪಂಚಾಳ ಮಾತನಾಡಿ ಇವತ್ತಿನ ಸಂಚಿಕೆಯಲ್ಲಿ,ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಶಾವಾದದ ವಿಷಯದ ಮೇಲೆ ಕೇಂದ್ರೀಕರಿಸಿದರು, ಉದ್ಯೋಗ ಸೃಷ್ಟಿ, ಸ್ಥಳೀಯ ಉತ್ಪನ್ನಗಳು ಮತ್ತು ಪರಿಸರ ಸಂರಕ್ಷಣೆಯಂತಹ ವಿವಿಧ ಸಮಸ್ಯೆಗಳನ್ನು ಚರ್ಚಿಸಿದರು. ಹೊಸ ವಲಯಗಳು ಹೊರಹೊಮ್ಮುವುದರ ಬಗ್ಗೆ ವಿಸ್ತೃತವಾಗಿ ಮಾತನಾಡಿ ನಮ್ಮೆಲ್ಲರಿಗೆ ದೇಶ ಉನ್ನತಿಗಾಗಿ ಶ್ರಮಿಸಲು ಪ್ರೇರೆಪಿಸಿದ್ದಾರೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಬಸವರಾಜ ಪಂಚಾಳ,ಗಿರಿಮಲ್ಲಪ್ಪ ಕಟ್ಟೀಮನಿ,ಭೀಮರಾವ ದೊರೆ, ಶಿವಶಂಕರ ಕಾಶೆಟ್ಟಿ,ರಮೇಶ ಜಾಧವ,ಶಂಕರ ರಾಯಚೂರಕರ್,ಆನಂದ ಶಿರವಾಳ ಸೇರಿದಂತೆ ಇತರರು ಪಾಲ್ಗೊಂಡಿದ್ದರು.