ಊಹಾ ಪತ್ರಿಕೊದ್ಯಮದಿಂದ ಇನ್ನೊಬ್ಬರ ತೇಜೋವಧೆ; ನೈಜ ಪತ್ರಿಕೋದ್ಯಮದ ಕೆಲಸವಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

0
39

ಮುಖ್ಯಮಂತ್ರಿಗಳಿಂದ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ,ಟಿಎಸ್‍ಆರ್,ಮೊಹರೆ ಹಣಮಂತರಾಯ ಪ್ರಶಸ್ತಿಗಳ ಪ್ರದಾನ

ಬೆಂಗಳೂರು; ಊಹಾ ಪತ್ರಿಕೊದ್ಯಮದಿಂದ ಇನ್ನೊಬ್ಬರ ತೇಜೋವಧೆ ಮಾಡುವುದು ಪತ್ರಿಕೋದ್ಯಮದ ಕೆಲಸವಲ್ಲ. ನೈಜ ಸುದ್ದಿಗಳನ್ನು ಜನರಿಗೆ ತಲುಪಿಸಿ ವಸ್ತು ಸ್ಥಿತಿಯನ್ನು ಬಿತ್ತರಿಸಿ ಸಮಾಜದಲ್ಲಿ ಶಾಂತಿಯನ್ನು ಕಾಪಾಡುವಂತಹ ಕೆಲಸ ಮಾಡುವುದು ನಿಜವಾದ ಪತ್ರಿಕೋದ್ಯಮದ ಕೆಲಸ. ಊಹಾ ಪತ್ರಿಕೋದ್ಯಮಕ್ಕೆ ನಾವು ಅಸ್ಪದ ಕೊಡಬಾರದು. ಇಂತಹ ಪತ್ರಿಕೋದ್ಯಮದಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಇಂದು ವಾರ್ತಾಸೌಧದ ಸುಲೋಚನಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ – 2024, ಟೀಯೆಸ್ಸಾರ್ ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಇಂದಿನ ದಿನಗಳಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗಿವೆ. ಸುಳ್ಳು ಸುದ್ದಿಗಳ ಪ್ರಭಾವದಿಂದಾಗಿ ಸಮಾಜದಲ್ಲಿ ಅಶಾಂತಿ ತುಂಬಿದೆ. ಸುಳ್ಳು ಸುದ್ದಿಗಳಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಇಂತಹ ಸುದ್ದಿಗಳಿಗೆ ತಡೆ ಒಡ್ಡಬೇಕು. ಸುಳ್ಳು ಸುದ್ದಿಗಳ ವಿರುದ್ದ ನಾವೆಲ್ಲರೂ ಹೋರಾಡಬೇಕು. ಇಂದು ಗಂಡ ಹೆಂಡತಿಯ ಜಗಳವನ್ನೇ ಬಿತ್ತರಿಸುವ ಸುದ್ದಿಯೇ ನೈಜ ಪತ್ರಿಕೋದ್ಯಮ ಎಂದು ತಿಳಿದುಕೊಳ್ಳಲಾಗಿದೆ. ಅದರೆ ಇಂತಹ ಸುದ್ದಿಗಳಿಂದ ಸಮಾಜದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದರು.

ಪ್ರಶಸ್ತಿ ಪುರಸ್ಕøತರು ಇತರೇ ಪತ್ರಕರ್ತರಿಗೆ ಮಾದರಿಯಾಗಿ: ಪತ್ರಿಕೋದ್ಯಮದಲ್ಲಿ ಪ್ರಸಸ್ತಿಗಳನ್ನು ನೀಡುವ ವಿಚಾರ ಬಹಳ ಸ್ವಾಗತಾರ್ಹವಾಗಿದೆ. ಪ್ರಸಸ್ತಿಗಳನ್ನು ಸ್ವೀಕರಿಸಿರುವವರೆಲ್ಲರೂ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ ಮಹನೀಯರು. ತಾವೆಲ್ಲರೂ ಇತರೆ ಪತ್ರಕರ್ತರಿಗೆ ಮಾದರಿಯಾಗಬೇಕು. ಧ್ವನಿ ಇಲ್ಲದವರಿಗೆ ಧ್ವನಿಯಾಗಿ, ಕಟ್ಟಕಡೆಯ ವ್ಯಕ್ತಿಯನ್ನು ಮನುಷ್ಯರನ್ನಾಗಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಜನರಿಗೆ ವಸ್ತುಸ್ಥಿತಿ, ಸತ್ಯವಾದ ವಿಷಯವನ್ನು ತಿಳಿಸುವಂತ ಸುದ್ದಿಗಳು ಬಿತ್ತರವಾಗಬೇಕು. ಇದರಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟ ಸಿಎಂ ಸಿದ್ದರಾಮಯ್ಯ ಅವರು ನೈಜ ಸುದ್ದಿಗಳಿಂದ ಪರಿಹಾರ ಸೂಚಿಸಬಹುದು. ಅದು ನೈಜ ಪತ್ರಿಕೋದ್ಯಮದ ಕೆಲಸ. ಇಂದು ಪ್ರಶಸ್ತಿಗಳನ್ನು ಪಡೆದವರೆಲ್ಲರೂ ಇಂದಿನ ಪತ್ರಿಕೋದ್ಯಮಿಗಳಿಗೆ ಅದರ್ಶವಾಗಲಿ. ಪ್ರೇರಣೆಯಾಗಲಿ ಎಂದು ಆಶಿಸಿದರು.

ಇಂದು ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಜನ್ಮದಿನದ ಜೊತೆಗೆ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮದಿನ ದಿನವೂ ಹೌದು. ಈ ಇಬ್ಬರ ಮಹಾನ್ ನಾಯಕರ ಜನ್ಮದಿನವನ್ನು ಆಚರಣೆ ಮಾಡಿ ನಮನಗಳನ್ನು ಸಲ್ಲಿಸುತ್ತಿದ್ದೇವೆ. ಈ ಇಬ್ಬರು ನಾಯಕರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದರೆ ಅದೇ ಅವರಿಗೆ ನಾವು ಸಲ್ಲಿಸುವ ಗೌರವ ಎಂದು ತಿಳಿಸಿದರು.

ವಿಶ್ವ ಕಂಡ ನಾಯಕ ಮಹಾತ್ಮ ಗಾಂಧೀಜಿ: ಗಾಂಧೀಜಿಯವರು ದೇಶ ಕಂಡಂತಹ ಅಪರೂಪದ ನಾಯಕ. ಅದಕ್ಕೆ ಅಮೇರಿಕಾ ದೇಶದ ಮಾಜಿ ಅಧ್ಯಕ್ಷರಾದ ಒಬಾಮ ಅವರು ಮಹಾತ್ಮ ಗಾಂಧೀಜಿಯವರು ಭಾರತಕ್ಕೆ ಮಾತ್ರ ನಾಯಕರಲ್ಲ ಇಡೀ ಜಗತ್ತಿಗೆ ನಾಯಕರು ಎಂದು ಹೇಳಿದ್ದಾರೆ. ನಾವೆಲ್ಲರೂ ಕೂಡ ಹೆಮ್ಮೆ ಪಡುತ್ತೇವೆ. ಗಾಂಧೀಜಿಯವರು ಭಾರತದಲ್ಲಿ ಹುಟ್ಟಿದರೂ ಸಹ ವಿಶ್ವದ ನಾಯಕರಾಗಿದ್ದರು. ಅವರಿಂದ ಸ್ವಾತಂತ್ರ್ಯ ಬಂದಿತು. ಬ್ರಿಟೀಷರ ದಾಸ್ಯದಿಂದ ಹೊರಬಂದೆವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ವಿದೇಶದ ಗಣ್ಯರಾದ ಒಬಾಮ ಅವರೇ ಮಹಾತ್ಮ ಗಾಂಧೀಜಿ ಅವರನ್ನು ಜಗತ್ತಿನ ನಾಯಕರೆಂದು ಹೇಳಿದರೆ ಕೆಲವರು ಇಂದು ಗಾಂಧೀಜಿ ಅವರನ್ನು ಖಳ ನಾಯಕರನ್ನಾಗಿ ಮಾಡುತ್ತಿದ್ದಾರೆ. ಗೂಡ್ಸೆ ಅಂತವರನ್ನು ನಾಯಕರೆಂದು ಬಿಂಬಿಸುತ್ತಿದ್ದಾರೆ. ಇದನ್ನೆಲ್ಲ ನಾವು ಸಹಿಸಿಕೊಳ್ಳಬಾರದು. ಗಾಂಧೀಜಿ ಅವರ ಬಗ್ಗೆ ತುಚ್ಛವಾಗಿ, ಲಘುವಾಗಿ ಕೀಳು ಮಟ್ಟದಲ್ಲಿ ಮಾತನಾಡುವ ಶಕ್ತಿಗಳನ್ನು ನಾವು ಸೋಲಿಸಬೇಕು. ಅದೇ ನಾವು ಗಾಂಧೀಜಿ ಅವರಿಗೆ ಸಲ್ಲಿಸುವ ಗೌರವ ಎಂದು ಭಾವಿಸಿದ್ದೇನೆ ಎಂದರು.

ಇಂದು ಗಾಂಧಿ ಜಯಂತಿ ಅಂಗವಾಗಿ ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ, ಟಿ.ಎಸ್.ಆರ್. ಪತ್ರಿಕೋದ್ಯಮ ಪ್ರಶಸ್ತಿ, ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಕೊಡುತ್ತಿದ್ದೇವೆ. ಇಂದು ಯಾರು ಯಾರು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೋ ಅವರೆಲ್ಲರಿಗೂ ಕೂಡ ನನ್ನ ಅಭಿನಂಧನೆಗಳು.

ಮಹಾತ್ಮ ಗಾಂಧೀಜಿಯವರ ವಿಚಾರಗಳನ್ನು ಮೈಗೂಡಿಸಿಕೊಂಡು ಜನಸೇವೆಯಲ್ಲಿ ತೊಡಗಿಕೊಂಡವರಿಗೆ ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿಗಳನ್ನು 2014ರಿಂದ ಕೊಡುತ್ತಾ ಬಂದಿದ್ದೇವೆ. ಇಂದು ಇಬ್ಬರಿಗೆ ಸೇವಾ ಪ್ರಶಸ್ತಿಯನ್ನು ನೀಡಿದ್ದೇವೆ. ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ ಮತ್ತು ತುಮಕೂರು ಜಿಲ್ಲೆ ತುರುವೆ ಕೆರೆ ತಾಲ್ಲೂಕಿನ ಗೊಟ್ಟಿಕೆರೆಯ ಜಿ.ಬಿ. ಶಿವರಾಜು ಅವರಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ.

ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯು ಗಾಂಧಿ ತತ್ವಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಮನುಷ್ಯರಾಗುವಂತೆ ಶಿಕ್ಷಣವನ್ನು ನೀಡುತ್ತಿದ್ದಾರೆ. ಕುವೆಂಪು ಅವರು ಹೇಳಿರುವಂತೆ “ಹುಟ್ಟುತ್ತಾ ವಿಶ್ವ ಮಾನವರು ಬೆಳೆಯುತ್ತಾ ಅಲ್ಪ ಮಾನವರು” ಅದಕ್ಕೆ ನಮ್ಮ ಶಿಕ್ಷಣ ಹೇಗಿರಬೇಕು ಎಂದರೆ ಮನುಷ್ಯರನ್ನು ರೂಪಿಸುವ ಶಿಕ್ಷಣವಾಗಬೇಕು ಜನಪರ ಕಾಳಜಿಯನ್ನು ಹೊಂದಿರುವಂತಹ ಶಿಕ್ಷಣವನ್ನು ನೀಡುವುದಾಗಿರಬೇಕು ಆಗ ಎಲ್ಲರೂ ಮನುಜರಾಗುತ್ತಾರೆ ಎಂದರು.

ಶಿಕ್ಷಣವೆಂಬುದು ಮೌಲ್ಯಗಳನ್ನು ರೂಪಿಸಿಕೊಳ್ಳುವ ಶಿಕ್ಷಣವಾಗಬೇಕು ದಾರಿ ತಪ್ಪಿಸುವಂತಹ ಶಿಕ್ಷಣವಾಗಬಾರದು. ಗಾಂಧೀಜಿಯವರ ಸಂದೇಶವೇನೆಂದರೆ “ನನ್ನ ಜೀವನವೇ ಸಂದೇಶ” ಗಾಂಧೀಜಿ ಅವರು ಸತ್ಯ ಅಹಿಂಸೆ ಮಾರ್ಗದಲ್ಲಿ ನಡೆದವರು. ಅವರು ಬದಕಿನುದ್ದಕ್ಕೂ ಸಮಾಜಸೇವೆ, ನಾಡಿನ ಸೇವೆ, ದೇಶದ ಸೇವೆ ಮಾಡಿ ಇಡೀ ಜೀವನವನ್ನೇ ದೇಶ ಸೇವೆಗಾಗಿ ಮುಡುಪಾಗಿಟ್ಟಂತ ಮಹಾನ್ ಚೇತನ. ಇಂದು ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದೇವೆ. ಅವರನ್ನು ಗೌರವಿಸುತ್ತಿದ್ದೇವೆ. ಅವರ ವಿಚಾರಧಾರೆಗಳು ಎಂದೆಂದಿಗೂ ಪ್ರಸ್ತುತ ಎಂದು ಹೇಳಿದರು.

ವ್ಯಕ್ತಿಯನ್ನು ಕೊಲ್ಲಬಹುದು ಅದರೆ ಅವರ ವಿಚಾರಧಾರೆಗಳನ್ನು ಕೊಲ್ಲಲು ಸಾಧ್ಯವಿಲ್ಲ. ಗಾಂಧಿ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ನಾವು ಗಾಂಧೀಜಿ ಕಂಡಂತಹ ಕನಸನ್ನು ನನಸು ಮಾಡಿ ಭಾರತವನ್ನು ಕಟ್ಟುವಂತಹ ಕೆಲಸ ಮಾಡಬೇಕು ಎಂದರು.

ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಬೆಳಗಾವಿಯಲ್ಲಿ 1924ರ ಡಿಸೆಂಬರ್ 24ರಿಂದ 26ರವರೆಗೆ ಮೂರು ದಿನಗಳ ಕಾಲ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧೀಜಿ ಅವರು ವಹಿಸಿದ್ದರು. ಗಾಂಧೀಜಿ ಅವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ ಇದಾಗಿದೆ. ಈಗ ಈ ಅಧಿವೇಶನಕ್ಕೆ 100 ವರ್ಷಗಳು ತುಂಬಲಿದ್ದು, ರಾಜ್ಯ ಸರಕಾರವು ಸದರಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮವನ್ನು ಇದೇ ಡಿಸೆಂಬರ್ ತಿಂಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಇನ್ಮುಂದೆ ಪ್ರಶಸ್ತಿಗಳನ್ನು ಆಯಾ ವರ್ಷವೇ ಪ್ರದಾನ ಮಾಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ನೆರೆದಿದ್ದ ಜನರಿಗೆ ಅಶ್ವಾಸನೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿವಾಜಿನಗರದ ಶಾಸÀಕರಾದ ರಿಜ್ವಾನ್ ಅರ್ಷದ್ ಅವರು ಮಾತನಾಡಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಅದ್ಬುತ ವಿಚಾರಧಾರೆಗಳು ಸರ್ವಕಾಲಕ್ಕೂ ಸಲ್ಲುವಂತದ್ದು. ಅವರು ಸತ್ಯ, ಅಹಿಂಸೆ, ಕೋಮುಸೌಹಾರ್ದತೆ, ಸಹಬಾಳ್ವೆ ಮಾರ್ಗಗಳನ್ನು ಸಮಾಜಕ್ಕೆ ತಿಳಿಸಿಕೊಟ್ಟವರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನಾಯಕತ್ವ ವಹಿಸಿ ನಮ್ಮನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಮಾಡಿದರು. ಗಾಂಧೀಜಿಯವರು ಗತಿಸಿ ಶತಮಾನಗಳು ಕಳೆದರು ದೇಶ ವಿದೇಶದಲ್ಲಿ ಅವರ ಚಿಂತನೆ, ವಿಚಾರಗಳು ಸದಾ ಪ್ರಸ್ತುತವಾಗಿದೆ. ಗಾಂಧೀಜಿಯವರು ನೀಡಿದ ಸಂದೇಶ ಸಮಾಜಕ್ಕೆ ಗಟ್ಟಿ ಅಡಿಪಾಯವಾಗಿದೆ. ಅವರ ಜೀವನವೇ ಜನತೆಗೆ ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದರು.

2023ನೇ ಸಾಲಿನ ಟೀಯೆಸ್ಸಾರ್ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕøತರಾದ ಡಾ. ಸರಜೂ ಕಾಟ್ಕರ್ ಅವರು ಮಾತನಾಡಿದರು.

ಪ್ರಶಸ್ತಿ ಪುರಸ್ಕøತರ ವಿವರ: ಟೀಯೆಸ್ಸಾರ್ ಪತ್ರಿಕೋದ್ಯಮ ಪ್ರಶಸ್ತಿಗಳನ್ನು 2019 ನೇ ಸಾಲಿಗೆ ಶಿವಾಜಿ ಗಣೇಶನ್, 2020 ನೇ ಸಾಲಿಗೆ ಶ್ರೀಕಾಂತಾಚಾರ್ಯ ಮಣೂರ, 2021ನೇ ಸಾಲಿಗೆ ಡಾ. ಆರ್.ಪೂರ್ಣಿಮಾ, 2022ನೇ ಸಾಲಿಗೆ ಡಾ. ಪದ್ಮರಾಜ ದಂಡಾವತಿ ಹಾಗೂ 2023ನೇ ಸಾಲಿಗೆ ಡಾ.ಸರಜೂ ಕಾಟ್ಕರ್ ಅವರುಗಳಿಗೆ ಹಾಗೂ ಶ್ರೀ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು, 2019 ನೇ ಸಾಲಿಗೆ ರಾಜೀವ ಕಿದಿಯೂರ, 2020ನೇ ಸಾಲಿಗೆ ಇಂದೂಧರ ಹೊನ್ನಾಪುರ, 2021 ನೇ ಸಾಲಿಗೆ ಎನ್.ಮಂಜುನಾಥ, 2022ನೇ ಸಾಲಿಗೆ ಚಂದ್ರಶೇಖರ್ ಪಾಲೆತ್ತಾಡಿ, 2023ನೇ ಸಾಲಿಗೆ ಶ್ರೀ ಶಿವಲಿಂಗಪ್ಪ ದೊಡ್ಡಮನಿ ಅವರುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡಿದರು.

ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ ಮತ್ತು ತುಮಕೂರು ಜಿಲ್ಲೆ ತುರುವೆ ಕೆರೆ ತಾಲ್ಲೂಕಿನ ಗೊಟ್ಟಿಕೆರೆಯ ಜಿ.ಬಿ. ಶಿವರಾಜು ಅವರಿಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಮಹಾತ್ಮ ಗಾಂಧೀಜಿ (ಬಾಪೂಜಿ) ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ ವಿಭಾಗ, ಪದವಿ ಪೂರ್ವ ವಿಭಾಗ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಡಾ.ಕೆ.ವಿ.ತ್ರಿಲೋಕಚಂದ್ರ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರು ವಂದಿಸಿದರು.

ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸಾಧುಕೋಕಿಲ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯಿಷಾ ಖಾನಂ, ಕಂಠೀರವ ಸ್ಟುಡಿಯೋ ಅಧ್ಯಕ್ಷರಾದ ಮೆಹಬೂಬ್ ಪಾಷ, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here