ಸುರಪುರ: ಇಂದು ಬಪ್ಪರಗಿ ಗ್ರಾಮದಲ್ಲಿ ಬಹಿಷ್ಕಾರಕ್ಕೊಳಗಾಗಿರುವ ದಲಿತ ಕುಟುಂಬಗಳಿಗೆ ಸರಕಾರ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಬಂದ್ ಆಚರಿಸಿದ್ದೇವೆ ಒಂದು ವೇಳೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ತಿಳಿಸಿದರು.
ನಗರದಲ್ಲಿ ಸಂಘಟನೆಯಿಂದ ನಡೆದ ಸುರಪುರ ಬಂದ್ ಅಂಗವಾಗಿ ಮಹಾತ್ಮ ಗಾಂಧಿ ವೃತ್ತದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ,ಹುಣಸಗಿ ತಾಲೂಕಿನ ಗ್ರಾಮ ಒಂದರಲ್ಲಿ ದಲಿತ ಸಮುದಾಯದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಲಾಗಿದೆ,ಇದಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಬೇಕು ಮತ್ತು ಅಪ್ರಾಪ್ತ ಬಾಲಕಿಗೆ ಸರಕಾರ ನಾಲ್ಕು ಎಕರೆ ಭೂಮಿ ನೀಡಬೇಕು,ಸರಕಾರಿ ನೌಕರಿ ನೀಡಬೇಕು.ಅದರಂತೆ ಮತ್ತೊಂದು ಗ್ರಾಮದಲ್ಲಿ ಅಪ್ರಾಪ್ತ ವಿಕಲಚೇತನ ಬಾಲಕಿ ಮೇಲೆ ಮೂರು ಜನರು ಅತ್ಯಾಚಾರಕ್ಕೆ ಯತ್ನಿಸಿದ್ದು ಅವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಬಪ್ಪರಗಿ ಗ್ರಾಮದಲ್ಲಿ ದಲಿತರಿಗೆ ಬಹಿಷ್ಕಾರ ಹಾಕಿದವರನ್ನು ಬಂಧಿಸಲಾಗಿದೆ ಎಂದು ಗೊತ್ತಾಗಿದೆ,ಆದರೆ ಬಹಿಷ್ಕಾರಕ್ಕೊಳಗಾದ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ಮೂರು ಎಕರೆ ಜಮೀನು ನೀಡಬೇಕು ಹಾಗೂ ವ್ಯಾಪರ ಮಾಡಲು ಅಂಬೇಡ್ಕರ್ ಅಭಿವೃಧ್ಧಿ ನಿಗಮ ದಿಂದ ಸಾಲ ಮಂಜೂರಿ ಮಾಡಬೇಕು ಎಂದು ಒತ್ತಾಯಿಸಿದರು.
ಕೋನಾಳ ಗ್ರಾಮದ ದಲಿತ ಹೋರಾಟಗಾರ ಶೇಖಪ್ಪ ಭಂಡಾರಿ ಮೇಲೆ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು.ಶಹಾಪುರ ತಾಲ್ಲೂಕಿನ ಚೆನ್ನೂರ ಗ್ರಾಮದಲ್ಲಿ ಅಂಬೇಡ್ಕರ ನಾಮಫಲಕಕ್ಕೆ ಅವಮಾನಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿನ ಅಕ್ಟೋಬರ್ 30 ರಂದು ಸಮಾಜ ಕಲ್ಯಾಣ ಇಲಾಖೆ ಸಚಿವರ ಮೆನೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಇದೇ ಸಂದರ್ಭದಲ್ಲಿ ಮುಖಂಡರಾದ ನಿಂಗಣ್ಣ ಗೋನಾಲ,ಮೂರ್ತಿ ಬೊಮ್ಮನಹಳ್ಳಿ ಸೇರಿದಂತೆ ಅನೇಕರು ಮಾತನಾಡಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಸಿಲ್ದಾರ್ ಹುಸೇನಸಾಬ್ ಎ.ಸರಕಾವಸ್ ಮೂಲಕ ಸಲ್ಲಿಸಿದರು.ಇದಕ್ಕು ಮುನ್ನ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ಬಂದ್ ಅಂಗವಾಗಿ ಮಧ್ಯಾಹ್ನದ ವರೆಗೆ ಕೆಲ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟು ಬಂದ್ ಮಾಡಿ ಹೋರಾಟಕ್ಕೆ ಬೆಂಬಲಿಸಿದರು.ಮನವಿ ಸಲ್ಲಿಸುತ್ತಿದ್ದಂತೆ ಮತ್ತೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ತೆಗೆದು ವ್ಯಾಪಾರ ವಹಿವಾಟು ನಡೆಸಲಾಯಿತು.
ಪ್ರತಿಭಟನೆಯಲ್ಲಿ ಅಜೀಜ್‍ಸಾಬ್ ಐಕೂರ,ನಿಂಗಣ್ಣ ಗೋನಾಲ,ಬಸವರಾಜ ದೊಡ್ಮನಿ ಶೆಳ್ಳಗಿ,ಮಲ್ಲಿಕಾರ್ಜುನ ಶಾಖಾನವರ,ಶೇಖರ ಜೀವಣಗಿ,ಮಹಾದೇವಪ್ಪ ಬಿಜಾಸಪುರ,ಜಟ್ಟೆಪ್ಪ ನಾಗರಾಳ,ದೇವಿಂದ್ರಪ್ಪ ಬಾದ್ಯಾಪುರ,ಹಣಮಂತ ಬಾಂಬೆ,ಚಂದ್ರಕಾಂತ ಹಂಪಿನ್,ಬಸಪ್ಪ ಚಲುವಾದಿ,ಮಹೇಶ ಸುಂಗಲಕರ್,ಬಸವರಾಜ ಬಡಿಗೇರ,ರಮೇಶ ಅರಕೇರಿ,ರಾಮಣ್ಣ ಶೆಳ್ಳಗಿ,ಮಾನಪ್ಪ ಶೆಳ್ಳಗಿ,ಖಾಜಾಹುಸೇನ್ ಗುಡಗುಂಟಿ ಸೇರಿದಂತೆ ಅನೇಕ ಜನ ಮಹಿಳೆಯರು ನೂರಾರು ಜನರು ಭಾಗವಹಿಸಿದ್ದರು.