ಶಹಾಪುರ: ಬಸವಣ್ಣನವರೆ ಇಷ್ಟಲಿಂಗ ಜನಕ ಎಂಬುದು ಈಗ ನಿರ್ವಿವಾದದ ಸಂಗತಿ. ವೈದಿಕ ವ್ಯವಸ್ಥೆ ರೂಪಿಸಿದ್ದ ಎಲ್ಲಾ ಕಟ್ಟು ಪಾಡುಗಳನ್ನು ಗಾಳಿಗೆ ತೂರಿ ಸಮಾನತೆಯ ಅನುಭವ ಮಂಟಪ ಕಟ್ಟಿದವರು ಬಸವಣ್ಣನವರು. ಮಹಿಳೆ ಮತ್ತು ತಳ ಸಮುದಾಯದ ಜನಗಳಿಗೆ ಯಾವುದೆ ಗುಡಿಯ ಪ್ರವೇಶವನ್ನು ಸನಾತನ ಪರಂಪರೆ ನಿಷೇದ ಹೇರಿದಾಗ ಬಸವಣ್ಣನವರು ಎನ್ನ ಕಾಲೆ ಕಂಬ ದೇಹವೆ ದೇಗುಲ ಎನ್ನುವ ಮೂಲಕ , ದೇಹವನ್ನೆ ದೇವಾಲಯ ಮಾಡಿದವರು ಎಂದು ಕಲಬುರ್ಗಿಯ ಬಸವ ತತ್ವ ಪ್ರಸಾರಕ ಸಿದ್ಧರಾಮ ಯಳವಂತಗಿ ನುಡಿದರು.
ಸ್ಥಳಿಯ ಬಸವಮಾರ್ಗ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಏರ್ಪಡಿಸಿದ್ದ , ಲಿಂಗಣ್ಣ ಸತ್ಯಂಪೇಟೆಯವರ ವೇದಿಕೆಯಲ್ಲಿ ನಡೆದ ತಿಂಗಳ ಬಸವ ಬೆಳಕು 119 ರ ಕಾರ್ಯಕ್ರಮದಲ್ಲಿ ಸಿದ್ಧಾರೂಡ ಮತ್ತು ಶ್ರವಣ ಆನೇಗುಂದಿಯವರ ಸ್ಮರಣೆಯ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಜನಕ ಬಸವಣ್ಣನವರು ಎಂಬ ವಿಷಯ ಕುರಿತು ಮಾತನಾಡಿದರು.
ಆದಿ ಅನಾದಿ ಇಲ್ಲದಂದು. ನಾದ ಬಿಂದು ಕಳೆಗಳಿಲ್ಲದಂದು ನೀನೆ ಜಂಗಮ. ಸುರಾಳ ನಿರಾಳವೆಂಬ ಶಬ್ಧ ಹುಟ್ಟುವ ಮುನ್ನ ನೀನೆ ಭಕ್ತ ಎಂಬ ಅಲ್ಲಮಪ್ರಭುಗಳ ವಚನವನ್ನು ಅರಿತುಕೊಂಡ ಮೇಲೆ ಬಸವಣ್ಣನವರೆ ನಿರಾಕಾರ ಲಿಂಗವನ್ನು ಸಾಕಾರಕ್ಕೆ ತಂದರು ಎಂಬುದು ಸ್ಪಷ್ಟವಾಗುತ್ತದೆ.
ಇಷ್ಟಲಿಂಗ ಅರಿವಿನ ಕುರುಹು. ಆಚಾರದ ಪ್ರತೀಕ. ಇಷ್ಟಲಿಂಗವನ್ನು ಧರಿಸುವುದೆಂದರೆ ಭಾವೈಕ್ಯತೆಯನ್ನು ಮರೆಯುವುದು ಎಂದರ್ಥ. ಪ್ರತಿಯೊಬ್ಬರು ತಮ್ಮೊಳಗೆ ತಾವು ಇಳಿದು ನೋಡುವ ಪ್ರಕ್ರಿಯೆ. ಶರಣರು ಬರುವುದಕ್ಕಿಂತ ಪೂರ್ವದಲ್ಲಿ ದೇವರುಗಳನ್ನು ಹೊರಗಡೆ ಹುಡುಕಾಡುತ್ತಿದ್ದರು. ಕಲ್ಲು ಮಣ್ಣು ಪಂಚಭೂತಗಳೆಲ್ಲವೂ ದೇವರಾಗಿದ್ದವು. ಬಸವಣ್ಣನವರು ಇಷ್ಟಲಿಂಗ ಕರುಣಿಸಿದ ಮೇಲೆ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಅಂತಃರಂಗ ಹಾಗೂ ಬಹಿರಂಗ ಪರಿಶುದ್ಧತೆಗೆ ಸಾಧ್ಯವಾಯಿತು ಎಂದು ಮಾರ್ಮಿಕವಾಗಿ ತಿಳಿಸಿದರು.
ಅವಿಭಕ್ತ ಕುಟುಂಬಗಳು ಇಂದು ಕಾಣೆಯಾಗುತ್ತಿವೆ. ದುರಾಶೆ ಸಣ್ಣ ಮನಸ್ಸುಗಳು ಕುಟುಂಬ ಒಡೆದು ಹೋಗಲು ಮುಖ್ಯ ಕಾರಣವಾಗುತ್ತಿವೆ. ಮನೆಯ ಹಿರಿಯ ಜೀವಗಳು ತಮ್ಮ ಕೊನೆಯ ದಿನಗಳಲ್ಲಿ ಹೈರಾಣಾಗುತ್ತಿವೆ. ಮಕ್ಕಳು ತಂದೆ ತಾಯಿಗಳನ್ನು ಹೊರತು ಪಡಿಸಿ ಇನ್ನಿತರರನ್ನು ನಂಬದ ಅಧೋಗತಿಗೆ ತಲುಪಿಸಲಾಗಿದೆ. ಇದು ಮನುಷ್ಯತ್ವ ಮರೆತು ಭ್ರಮೆಯ ಲೋಕದಲ್ಲಿ ವಿಹರಿಸುವ ಸಂದರ್ಭ. ಶರಣರ ಸಾಹಿತ್ಯದ ಓದು ಮಾತ್ರ ನಮ್ಮ ಅಧಃಪತನವನ್ನು ತಪ್ಪಿಸಬಲ್ಲವು. ಇಂದಿನ ಸಾಮಾಜಿಕರಣ ಜಾಗತಿಕರಣದ ಸಂದರ್ಭದಲ್ಲಿ ಬಸವ ತತ್ವವೊಂದೆ ನಮ್ಮೆಲ್ಲರ ಆಶಾ ಕಿರಣವಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯ ಸಾನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠದ ಪೂಜ್ಯ ಮಹಾಲಿಂಗ ಸ್ವಾಮಿಗಳು ಬಸವಕಲ್ಯಾಣದ ಪರಿಸರ ನೋಡುವುದೆ ಒಂದು ಸೊಬಗು. ಇಲ್ಲಿ ಸಮಾನತೆಯ ತತ್ವಗಳು ಉಸಿರಾಡಿವೆ. ಜಗತ್ತಿನಲ್ಲಿ ಹೆಣ್ಣಿಗೆ ಸ್ವಾತಂತ್ರ್ಯ ತಂದು ಕೊಟ್ಟ ಅಪರೂಪದ ಪರಿಸರ. ಬಸವಾದಿ ಶರಣರು ಮೆಟ್ಟಿದ ಧರೆಯನ್ನು ಸ್ಪರ್ಶಿಸುವುದೆ ಪಾವನ. ಮನುಷ್ಯತ್ವದೆಡೆಗೆ ತುಡಿವ ಜನಗಳೆಲ್ಲ ಬಸವಣ್ಣನವರ ಕಾರ್ಯಕ್ಷೇತ್ರ ಬಸವ ಕಲ್ಯಾಣಕ್ಕೆ ಭೇಟಿ ನೀಡಲೆಬೇಕೆಂದು ಸಭೆಗೆ ಮನವರಿಕೆ ಮಾಡಿಕೊಟ್ಟರು.
ವೇದಿಕೆಯಲ್ಲಿ ಶೋಭಾ ಬಸವರಾಜ ಆನೇಗುಂದಿ, ಶರಣಮ್ಮ ಸಿದ್ಧಾರೂಢ ಆನೇಗುಂದಿ , ಬಸವ ತತ್ವಾಭಿಮಾನಿ ಅಯ್ಯಣ್ಣ ನಂದಿ ಮೊದಲಾದವರು ಇದ್ದರು.
ಇದೆ ಸಂದರ್ಭದಲ್ಲಿ ಅಖಿಲ ಭಾರತ ಲಿಂಗಾಯತ-ವೀರಶೈವ ಮಹಾಸಭೆಯ ತಾಲೂಕು ಅಧ್ಯಕ್ಷ ಸಿದ್ದಣ್ಣ ಆರಬೋಳ , ಕ.ಸಾ.ಪ. ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ. ಸಿದ್ಧರಾಮ ಹೊನ್ಕಲ್, ಮೀನಾಕ್ಷಿ ಆರ್. ಹೊಸ್ಮನಿ, ಮತ್ತು ಸಂಗೀತಾ ದೇಸಾಯಿಯವರನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಿದ್ಧಲಿಂಗಪ್ಪ ಆನೇಗುಂದಿ ವಹಿಸಿದ್ದರು. ಸೂಗಮ್ಮ ಹಿರೇಮಠ ವಚನ ಪ್ರಾರ್ಥನೆ ಮಾಡಿದರು. ಸಭೆಯಲ್ಲಿ ಶಿವಯೋಗಪ್ಪ ಮುಡಬೂಳ, ಷಣ್ಮುಖ ಅಣಬಿ, ಹೊನ್ನರೆಡ್ಡಿ ವಕೀಲರು, ಶಂಭುಲಿಂಗ ದೇಸಾಯಿ, ತಿಪ್ಪಣ್ಣ ಜಮಾದಾರ, ಕಮಲಮ್ಮ ಸತ್ಯಂಪೇಟೆ, ತಿಪ್ಪಣ್ಣ ಜಮಾದಾರ, ಅಡಿವೆಪ್ಪ ಜಾಕಾ, ಬಸವರಾಜ ಅರುಣಿ, ಲಕ್ಷ್ಮಣ ಲಾಳಸೇರಿ, ಕವಿತಾ ಗುಡಗುಂಟಿ, ಜ್ಯೋತಿ ವಾಗಾ, ಕವಿತಾ ಗುಡಗುಂಟಿ, ಪಂಪಣ್ಣಗೌಡ ಮಳಗ, ಮಲ್ಲು ಗುಡಿ, ಶಂಕ್ರಪ್ಪ ಪೋಸ್ಟ ಮಾಸ್ಟರ್, ಕಾಮಣ್ಣ, ಹಣಮಂತ ಕೊಂಗಂಡಿ, ವಿಶ್ವನಾಥ ಬುಂಕಲದೊಡ್ಡಿ, ಸಿದ್ದು ಕೇರವಂಟಿಗಿ,ಭೀಮನಗೌಡ,ಬಸವರಾಜ ಹುಣಸಗಿ,ಭೀಮಣ್ಣ ಪಾಡಮುಖಿ, ರಾಜು ಕುಂಬಾರ, ಶಿವರುದ್ರ ಉಳ್ಳಿ, ಗುಂಡಪ್ಪ ಕೋರಿ, ಉಮೇಶ ಗೋಗಿ ಮೊದಲಾದವರು ಭಾಗವಹಿಸಿದ್ದರು.