ಕಾಸರಗೋಡು ಕನ್ನಡ ಮಕ್ಕಳ ಕೊರಗು ಮುಗಿಯದ ಗೋಳು : ಶಕುಂತಳಾ ಶೆಟ್ಟಿ

0
59

ಮಂಗಳೂರು: ಕರ್ನಾಟಕ ರಾಜ್ಯದ 69ನೇ ರಾಜ್ಯೋತ್ಸವದ ಸಂಭ್ರಮದ ನಡುವೆ ಕಾಸರಗೋಡಿನ ಕನ್ನಡಿಗರು ಇನ್ನು ಕೂಡ ಕೊರಗುತ್ತಿರುವುದು ವಿಷಾದನೀಯ ಸಂಗತಿ ಎಂದು ಮಾಜಿ ಶಾಸಕಿ ಹಾಗೂ ಕರಾವಳಿ ವಾಚಕಿಯರ ಮತ್ತು ಲೇಖಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಶಕುಂತಳಾ ಶೆಟ್ಟಿ ಹೇಳಿದರು.

ಮಂಗಳೂರಿನಲ್ಲಿ ನವೆಂಬರ್ ಒಂದರಂದು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶಾರದಾ ವಿದ್ಯಾಲಯದ ಸಭಾಭವನದಲ್ಲಿ ನಡೆದ “ರಾಜ್ಯೋತ್ಸವ ಸಂದೇಶ ಹಾಗೂ ಗೌರವ ಸನ್ಮಾನ” ದ ನಂತರ ನಡೆದ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಚ್ಚ ಕನ್ನಡದ ಪ್ರದೇಶ ಕಾಸರಗೋಡು ಎಲ್ಲ ರಂಗಗಳಲ್ಲಿಯೂ ಮುಂಚೂಣಿಯಲ್ಲಿದ್ದು ಕನ್ನಡವನ್ನೇ ಉಸಿರಾಡುತ್ತಿದ್ದರೂ ಇನ್ನೂ ಕೂಡ ಕನ್ನಡಾಂಬೆಯ ಮಡಿಲಿನಲ್ಲಿ ಸೇರಲಾಗದೆ ಗೋಳಾಡುತ್ತಿದೆ. ಕನ್ನಡ ನಾಡಿನ ಸಮಸ್ತ ಕನ್ನಡಿಗರು ಅತಂತ್ರ ಸ್ಥಿತಿಯಲ್ಲಿರುವ ಕಾಸರಗೋಡಿನ ಕನ್ನಡಿಗರನ್ನು ಕಣ್ಣೆತ್ತಿ ನೋಡಬೇಕಾಗಿದೆ ಎಂದರು.

Contact Your\'s Advertisement; 9902492681

ಕಾಸರಗೋಡು ಕರ್ನಾಟಕದಲ್ಲಿ ವಿಲೀನವಾಗಲು ಕಳ್ಳಿಗೆ, ಕುಣಿಕುಳ್ಳಾಯ, ಕಯ್ಯಾರ ಮುಂತಾದ ಅನೇಕ ಮಹನೀಯರು ಕಾಸರಗೋಡಿನಲ್ಲಿ ಹೋರಾಡಿದ್ದರು. ನಮ್ಮ ಮನೆಯ ಸ್ವತಃ ಅಣ್ಣನೇ ಜೈಲಿಗೆ ಹೋದದ್ದು ಈಗ ಇತಿಹಾಸವಾಗಿಯೇ ಉಳಿಯಿತು ವಿನಹ ಫಲ ದೊರೆಯಲಿಲ್ಲ. ಆದರೆ ಏಕೀಕರಣದ 69 ವರ್ಷ ಸಂದರೂ ಇನ್ನು ಕಾಸರಗೋಡಿನ ಕನ್ನಡಿಗರು ವಿಲಯನಕ್ಕಾಗಿ ಕಾಯುತ್ತಲೇ ಇದ್ದಾರೆ.ಕಾಸರಗೋಡಿನ ಕನ್ನಡಿಗರು ಕನ್ನಡವನ್ನೇ ಉಸಿರಾಡಿ ಹಲವು ಕ್ಷೇತ್ರಗಳಲ್ಲಿ ಸಾಧನೆಯನ್ನು ನಿರಂತರ ಮಾಡುತ್ತ ಜಗದಗಲ ಮಿಂಚುತ್ತಿದ್ದಾರೆ ಎಂದರು.

ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಡೆದ 69ನೆಯ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡ ಅನೇಕ ಸ್ಪರ್ಧೆಗಳಲ್ಲಿ ಕಾಸರಗೋಡಿನ ಪ್ರತಿಭೆಗಳು ಹಾಗೂ ಮಹಾರಾಷ್ಟ್ರದ ಪ್ರತಿಭಾವಂತರು ಬಹುಮಾನಗಳನ್ನು ಪಡೆದಿರುವುದು ಇದಕ್ಕೆ ಸಾಕ್ಷಿ ಎಂದು ಮನ ತುಂಬಿ ಹೇಳಿದರು.

ನಾಟ್ಯ ವಿಶಾರದೆ ಕಮಲಾ ಭಟ್ ನೃತ್ಯ ಸಾಧನೆಗೆ ರಾಜ್ಯೋತ್ಸವ ಗೌರವ ಪ್ರಶಸ್ತಿ ನೀಡುವುದರ ಮೂಲಕ ಪ್ರತಿಷ್ಠಾನ ಉತ್ತಮ ಕೆಲಸ ಮಾಡಿದೆ ಎಂದು ಶುಭ ಹಾರೈಸಿದರು. ಖ್ಯಾತ ವೈದ್ಯರು ಹಾಗು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಶಾಂತರಾಮ ಶೆಟ್ಟಿ ರಾಜ್ಯೋತ್ಸವ ಸಂದೇಶದಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕ ಕುರಿತಾಗಿ ಮಾರ್ಮಿಕವಾದ ವಿಷಯಗಳನ್ನು ಪ್ರತಿಪಾದಿಸಿದರು.

ಶಾಸಕರಾದ ವೇದವ್ಯಾಸ ಕಾಮತ್, ತುಳು ಅಕಾಡೆಮಿ ಮಾಜಿ ಅಧ್ಯಕ್ಷರಾದ ಎ.ಸಿ ಭಂಡಾರಿ ಮತ್ತಿತರರು ಸೇರಿ ಖ್ಯಾತ ಕಲಾವಿದರಾದ ಸ್ಯಾಕ್ಸೋಫೋನ್ ವಾದಕರಾದ ವಿದ್ವಾನ್ ನಾಗೇಶ್ ಎ. ಬಪ್ಪನಾಡು ಹಾಗೂ ಹರಿದಾಸ ಜಯಾನಂದ ಹೊಸದುರ್ಗ ಕಾಸರಗೋಡು ಇವರನ್ನು ಹಾಗೂ ನಾಟ್ಯ ವಿದುಷಿ ಕಮಲಾ ಭಟ್ಟ ಅವರನ್ನು ಶಾಲು, ಸ್ಮರಣಿಕೆ ಹಾಗೂ ಫಲಕಾಣಿಕೆ ನೀಡಿ ಸನ್ಮಾನಿಸಲಾಯಿತು. ಮೇಯರ್ ಮನೋಜ್ ಕುಮಾರ್ ಕನ್ನಡ ಧ್ವಜಾರೋಹಣ ಮಾಡಿ ಗೌರವ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಶಾರದಾ ಸಮೂಹ ವಿದ್ಯಾಲಯದ ಅಧ್ಯಕ್ಷರಾದ ಎಂ ಬಿ ಪುರಾಣಿಕ್, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ. ಪಿ ಶ್ರೀನಾಥ್, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರವಿ ನಾಯ್ಕಾಪು, ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಎಚ್ ವಿ . ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನ ನಿಕಟ ಪೂರ್ವ ಅಧ್ಯಕ್ಷರಾದ ಪ್ರದೀಪ್ ಪ್ಲಿಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಜಿ.ಕೆ ಭಟ್ ಸೇರಾಜೆ ನಿತ್ಯಾನಂದ ಪೊಳಲಿ, ಪತ್ರಕರ್ತರಾದ ರಮೇಶ ಪೆರ್ಲ, , ಉಮೇಶ್ ಕೆ. ಆರ್ ಪೂರ್ಣಿಮಾ ಪೇಜಾವರ ಮತ್ತಿತರರು ಇದ್ದರು. ಹರಿದಾಸ ಜಯಾನಂದ ಹೊಸದುರ್ಗ ಉಗಾಭೋಗ ಹಾಡಿದರು. ಜನಾರ್ದನ ಹಂದೆಯವರು ರಾಜ್ಯೋತ್ಸವ ಕುರಿತಾದ ಸ್ವರಚಿತ ಕವನವನ್ನು ವಾಚಿಸಿದರು.

ಕವಿಗೋಷ್ಠಿಯಲ್ಲಿ ಯಶೋಧಾ ಮೋಹನ್, ಅಕ್ಷಯಾ ಆರ್‌. ಶೆಟ್ಟಿ, ಅಕ್ಷತಾ ರಾಜ್ ಪೆರ್ಲ ಅವರು ನಾಡು ನುಡಿ ಸಂಸ್ಕೃತಿ ಕುರಿತಾದ ಕವನಗಳನ್ನು ವಾಚಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸುಮಾರು 75ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸುಧಾಕರ ಪೇಜಾವರ ಸ್ವಾಗತಿಸಿದರು. ಮತ್ತು ಶಾರದಾ ಕಾಲೇಜಿನ ಆಡಳಿತಾಧಿಕಾರಿ ದಯಾನಂದ ಕಟೀಲು ಧನ್ಯವಾದವಿತ್ತರು. ಮಂಜುಳಾ ಶೆಟ್ಟಿ, ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here