ಮಾಧ್ಯಮ ಅಕಾಡೆಮಿಗಳು ಪತ್ರಕರ್ತರ ವೃತ್ತಿಪರ ಅಭಿವೃದ್ಧಿಗೆ ಶ್ರಮಿಸಬೇಕು ‘: ಶ್ರೀನಿವಾಸ ರೆಡ್ಡಿ ಅಭಿಪ್ರಾಯ
ಬೆಂಗಳೂರು: ಮಾಧ್ಯಮ ಅಕಾಡೆಮಿಗಳು ಕಾರ್ಯನಿರತ ಪತ್ರಕರ್ತರ ವೃತ್ತಿಪರ ಉನ್ನತಿ ಹಾಗೂ ಕೌಶಲ್ಯ ಅಭಿವೃದ್ಧಿಗೇ ಹೆಚ್ಚಿನ ಆದ್ಯತೆ ನೀಡಬೇಕೆಂದು ತೆಲಂಗಾಣ ಮಾಧ್ಯಮ ಆಕಾಡೆಮಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಅವರು ಅಭಿಪ್ರಾಯ ಪಟ್ಟರು.
ಅವರು ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರಿಗಾಗಿ ತೆಲಂಗಾಣ ಆಕಾಡೆಮಿ ಹಮ್ಮಿಕೊಳ್ಳುತ್ತಿರುವ ವಿವಿಧ ತರಬೇತಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಕರ್ನಾಟಕ ಮತ್ತು ಕೇರಳ ಮಾಧ್ಯಮ ಆಕಾಡೆಮಿಗಳಿಂದ ಪ್ರೇರಣೆ ಪಡೆದು ಅವಿಭಜಿತ ಆಂಧ್ರ ಪ್ರದೇಶದ ಮಾಧ್ಯಮ ಆಕಾಡೆಮಿ ಸ್ಥಾಪಿಸಲಾಯಿತು ಎಂದು ತಿಳಿಸಿದ ಅವರು, ತಾವು ಈ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಧ್ಯಮ ಆಕಾಡೆಮಿ ಅಧ್ಯಕ್ಷರಾದ ಆಯೇಶಾ ಖಾನಮ್ ಅವರು, ವಿವಿಧ ರಾಜ್ಯಗಳ ಆಕಾಡೆಮಿಗಳೊಂದಿಗೆ ಅತ್ಯುತ್ತಮ ಕಾರ್ಯನಿರ್ವಹಣೆಯ ಮಾದರಿಗಳು (best practices) ಕುರಿತು ಸಂವಾದ ನಡೆಸುವ ಮೂಲಕ ರಾಜ್ಯದ ಪತ್ರಕರ್ತರ ವೃತ್ತಿ ಕೌಶಲ್ಯ ಅಭಿವೃದ್ಧಿಗೆ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಲು ಕರ್ನಾಟಕ ಮಾಧ್ಯಮ ಅಕಾಡೆಮಿಯ ಉತ್ಸುಕವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತೆಲಂಗಾಣ ಪತ್ರಕರ್ತರ ಸಂಘದ ಅಧ್ಯಕ್ಷ ವಿರಾಹತ್ ಅಲಿ, ಆಕಾಡೆಮಿ ಸಸ್ಯರಾದ ಹೆಚ್.ವಿ. ಕಿರಣ್, ಕೆ. ವೆಂಕಟೇಶ್, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷೆ ನಿರ್ಮಲ ಯಲಿಗಾರ್, ಬೆಂಗಳೂರು ಪ್ರೆಸ್ ಕ್ಲಬ್ ಸಮಿತಿ ಸದಸ್ಯ ಯಾಸಿರ್ ಮುಷ್ತಾಕ್ ಮೊದಲಾದವರು ಉಪಸ್ಥಿತರಿದ್ದರು