ಕಲಬುರಗಿ; ಪ್ರಾದೇಶಿಕ ಅಸಮಾನತೆ, ಬದಲಾವಣೆ, ಪರಿಣಾಮಗಳ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರ ರಚಿಸಿರುವ ಪಗೋವಿಂದರಾವ ನೇತೃತ್ವದ ಅಧ್ಯಯನ ಸಮೀತಿಯು ಸದರಿ ವಿಷಯದ ಆಳ ಅಧ್ಯಯನ ನಡೆಸಿ ಸರಕಾರಕ್ಕೆ ಸವಿಸ್ತಾರವಾದ ವರದಿ ನೀಡಲಿದೆ. ಈ ವರದಿಯನ್ನಾಧರಿಸಿ ಬರುವ ದಿನಗಳಲ್ಲಿ ಹೊಸ ಅಭಿವೃದ್ಧಿ ಸೂಚ್ಯಂಕಗಳನ್ನು ತಯಾರಿಸಲಾಗುವುದು, ಇದರೊಂದಿಗೆ ಅಭಿವೃದ್ಧಿ ಯೋಜನೆಗಳು ಹೊಸರೂಪ ಪಡೆಯಲಿವೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ.
ಈ ಕುರಿತಂತೆ ಹೇಳಿಕೆ ನೀಡಿರುವ ಕೆಕೆಆರ್‌ಡಿಬಿ ದ್ಯಕ್ಷರು, ಜೇವರ್ಗಿ ಶಾಸಕರಾಗಿರುವ ಡಾ. ಡಾ. ಅಜಯ್ ಧರ್ಮಸಿಂಗ್ ಅವರು, ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸಭೆಯಲ್ಲಿ ಭಾಗವಹಿಸಿ, ಸಮಿತಿಯ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಲಾಯಿತು ಎಂದು ಹೇಳಿದ್ದಾರೆ.
ಡಾ. ಡಿ.ಎಂ.ನಂಜುಂಡಪ್ಪ ವರದಿಯು ಸುಮಾರು 22 ವರ್ಷಗಳಷ್ಟು ಹಳೆಯದಾಗಿದ್ದು, ಆ ನಂತರ ತಾಲೂಕುಗಳ ಸಂಖ್ಯೆಯು ಗಣನೀಯ ಏರಿಕೆಯಾಗಿದೆ. ಮುಖ್ಯವಾಗಿ, ಹೊಸ ತಾಲೂಕುಗಳ ಹಿಂದುಳಿದಿರುವಿಕೆಯನ್ನು ಗುರುತಿಸಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರವು ಈ ಸಮಿತಿಯನ್ನು ರಚಿಸಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಪ್ರದೇಶಿಕ ಅಸಮಾನತೆಯಲ್ಲಿ ಆಗಿರುವ ಬದಲಾವಣೆಗಳು ಮತ್ತು ಪರಿಣಾಮಗಳನ್ನು ಅಧ್ಯಯನ ಮಾಡಲು ಪ್ರಸಕ್ತ ಸಾಲಿನಲ್ಲಿ ಪ್ರೊ. ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ಮೂಲಕ ಪ್ರಸ್ತುತ ರಾಜ್ಯದಲ್ಲಿನ ಆರ್ಥಿಕ ಮತ್ತು ಪ್ರಾದೇಶಿಕ ಅಸಮಾನತೆಯ ಆಧಾರದ ಮೇಲೆ ಜಿಲ್ಲೆ ಮತ್ತು ತಾಲ್ಲೂಕುಗಳನ್ನು ವರ್ಗೀಕರಿಸಿ ಹೊಸ ಅಭಿವೃದ್ಧಿ ಸೂಚ್ಯಂಕಗಳನ್ನು ತಯಾರಿಸಲಾಗುವುದು ಎಂದೂ ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ.
ಪ್ರಾದೇಶಿಕ ಅಸಮಾನತೆ ನಿವಾರಣೆ ನಿಟ್ಟಿನಲ್ಲಿ ನಿಜಾಮನ ಆಳ್ವಿಕೆಯಲ್ಲಿದ್ದ ಕಲಬುರಗಿ, ಬೀದರ್ ಹಾಗೂ ರಾಯಚೂರು, ಹಾಗೂ ಮದ್ರಾಸ್ ಪ್ರಾಂತ್ಯದಲ್ಲಿದ ಬಳ್ಳಾರಿ ಜಿಲ್ಲೆ ಒಳಗೊಂಡಂತೆ ಧರ್ಮಸಿಂಗ್ ವರದಿಯನ್ವಯ 1990 ರಲ್ಲಿ ಹೈದ್ರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗಿತ್ತು. ಆ ಮೂಲಕ ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ರಾಜ್ಯ ಸರ್ಕಾರ ವಿಶೇಷ ಒತ್ತು ನೀಡಿದ್ದನ್ನು ಡಾ. ಅಜಯ್ ಸಿಂಗ್ ಮೆಲಕು ಹಾಕಿದ್ದಾರೆ.