ಆರ್ಟಿಕಲ್ 371 ರೂವಾರಿ ವೈಜನಾಥ ಪಾಟೀಲ ಮತ್ತು ನಾನು

0
246
  • ಶಿವರಂಜನ ಸತ್ಯಂಪೇಟೆ

ಅದು ೧೯೯೪-೬೫ನೇ ಇಸ್ವಿ.‌ ಅದೇ ಆಗ ತಾನೇ ಗುಲ್ಬರ್ಗ ವಿಶ್ವವಿದ್ಯಾಲಯಲ್ಲಿ ಎಂ.ಎ (ಕನ್ನಡ) ಓದಲು ಕಲಬುರಗಿಗೆ ಬಂದಿದ್ದೆ.

ಕಲಬುರಗಿಯ ವೈಜನಾಥ ಪಾಟೀಲ, ಯಾದಗಿರಿಯ ವಿಶ್ವನಾಥ ರೆಡ್ಡಿ ಮುದ್ನಾಳ, ವಿದ್ಯಾಧರ ಗುರೂಜಿ ಮುಂತಾದವರು ಸೇರಿಕೊಂಡು ಕಪ್ಪು ಬಟ್ಟೆ ಧರಿಸಿ ಪ್ರತಿ ರಾಜ್ಯೋತ್ಸವ ದಿನ ಆಚರಿಸುವ ಮೂಲಕ ಈ ಭಾಗದ ಅಭಿವೃದ್ಧಿ ಗಾಗಿ ಆಗ್ರಹಿಸುತ್ತಿದ್ದರು ಮಾತ್ರವಲ್ಲ, ಪ್ರತ್ಯೇಕ ರಾಜ್ಯದ ಕೂಗು ಸಹ ಹಾಕುತ್ತಿದ್ದರು. ಪ್ರತ್ಯೇಕ ರಾಜ್ಯದ ಈ ಕೂಗು ಕೇಳಿ ಬಂದಾಕ್ಷಣವೇ ಹುಬ್ಬಳ್ಳಿ ಯಿಂದ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರು ಪತ್ರಿಕಾ ಹೇಳಿಕೆ ನೀಡುವ ಮೂಲಕ ವೈಜನಾಥ ಪಾಟೀಲರನ್ನು ಹಿಗ್ಗಾ ಮುಗ್ಗು ತರಾಟೆಗೆ ತೆಗೆದುಕೊಂಡರು.

Contact Your\'s Advertisement; 9902492681

ಆಗ ವೈಜನಾಥ ಪಾಟೀಲರು ಸಹ ನಮ್ಮ ಭಾಗಕ್ಕೆ ಮಲತಾಯಿ ತೋರಿಸುತ್ತ ಬರಲಾಗುತ್ತಿದ್ದು, ಪ್ರತ್ಯೇಕ ರಾಜ್ಯ ಕೇಳದೆ ಇನ್ನೇನು ಮಾಡಬೇಕು ಎಂದು ದಿಟ್ಟ ಉತ್ತರ ನೀಡಿದರು.

ಈ ವಿಷಯದ ಬೆಳವಣಿಗೆ ಗಮನಿಸಿದ ನಾನು ಆಗ ಪ್ರಜಾವಾಣಿ ಪತ್ರಿಕೆಯ ವಾಚಕರ ವಾಣಿ ವಿಭಾಗದಲ್ಲಿ ಅಖಂಡ ಕರ್ನಾಟಕ ಉಳಿಯಬೇಕು ನಿಜ. ಆದರೆ ಮೂಗು ಒತ್ತಿ ಹಿಡಿದರೆ ಬಾಯಿ ತನ್ನಿಂದ ತಾನೆ ತೆರೆಯುತ್ತದೆ ಎಂದು ಪತ್ರ ಬರೆದಿದ್ದೆ. ಇದನ್ನು ಓದಿದ ಪಾಪು, ನನಗೆ ಫೋನಾಯಿಸಿ ಆ ವೈಜನಾಥ ಪಾಟೀಲರಿಗೆ ತಲೆ ಕೆಟ್ಟಿದೆ ಎಂದರೆ ನಿನಗೂ… ಎಂದು ಅವಾಜ್ ಹಾಕಿದ್ದರಲ್ಲದೆ ಕರ್ನಾಟಕ ಏಕೀಕರಣದ ಕಥನವನ್ನು ಬಿಚ್ಚಿಟ್ಟಿದ್ದರು.

ವೈಜನಾಥ ಪಾಟೀಲರ ಈ ಹೋರಾಟ ನೋಡಿ ನನ್ನನ್ನು ಒಳಗೊಂಡಂತೆ ಇವರಿಗೆ ಹುಚ್ಚು ಹಿಡಿದಿದೆ ಎಂದು ಮಾತನಾಡುವ ಕಾಲ ಅದಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಅವರ ಆ ಹೋರಾಟದ ಕಾವು ತೀವ್ರ ಸ್ವರೂಪ ಪಡೆಯಿತು ಮಾತ್ರವಲ್ಲ. ಈ ಭಾಗದ ಜನರ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ಸಂವಿಧಾನದ ಆರ್ಟಿಕಲ್ ೩೭೧(ಜೆ) ತಿದ್ದುಪಡಿ ಮಾಡಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನ ಮಾನ ನೀಡಿರುವುದನ್ನು ಯಾರೂ ಮರೆಯುವಂತಿಲ್ಲ.

ಈ ಹೋರಾಟಕ್ಕೆ ಲೋಕಸಭೆಯ ಮಾಜಿ ಸದಸ್ಯರು ಹಾಗೂ ಕೇಂದ್ರ ಮಂತ್ರಿಗಳಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಸಂಸದ ದಿ. ಎನ್. ಧರ್ಮಸಿಂಗ್ ಮತ್ತಿತರರು ಕೈ ಜೋಡಿಸಿ ಈ ಕೆಲಸವನ್ನು ಆಗು ಮಾಡುವಲ್ಲಿ ಯಶಸ್ವಿಯಾದರೇನೋ ನಿಜ!

ಆದರೆ ಅನಿಷ್ಠಾನದಲ್ಲಿನ ವಿಳಂಬ ಮತ್ತು ಲೋಪದೋಷಗಳ ವಿರುದ್ಧ ವೈಜನಾಥ ಪಾಟೀಲ ಮತ್ತೆ ಹೋರಾಡಬೇಕಾಯಿತು. ಅಂತೆಯೇ ಈ ಭಾಗದ ಅನೇಕರು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪಡೆಯುವಂತಾಯಿತು.

ಅಪ್ಪ ಲಿಂಗಣ್ಣ ಸತ್ಯಂಪೇಟೆ ಜೊತೆ ಅಪಾರ ಒಡನಾಟ ಹೊಂದಿದ್ದ ಪಾಟೀಲರು ಹೈಕ ಹೋರಾಟ ಸಮಿತಿಯಲ್ಲಿ ಅಪ್ಪನನ್ನು ಸೇರಿಸಿಕೊಂಡು ಕೊಪ್ಪಳ, ರಾಯಚೂರು ಮುಂತಾದೆಡೆ ಕರೆದುಕೊಂಡು ಹೋದದ್ದು ನನಗಿನ್ನೂ ಚೆನ್ನಾಗಿ ನೆನಪಿದೆ. ಕಲಬುರಗಿಯಿಂದ ಶಹಾಪುರದ ಮೇಲೆ ಹಾದು ಹೋಗುವಾಗ ಅಪ್ಪನನ್ನು ಕಂಡು ಮಾತನಾಡಿಸಿ ಹೋಗುತ್ತಿದ್ದ ಪಾಟೀಲರು, ನಮ್ಮಿಬ್ಬರಿಗೂ ಒಂದೊಂದು ಹುಚ್ಷು. ನಿನಗ ಬಸವಣ್ಣ ಮತ್ತು ವಚನ ಚಳವಳಿಯ ಹುಚ್ಷು, ನನಗೆ ನಮ್ಮ ಭಾಗ ಮತ್ತು ಅದರ ಅಭಿವೃದ್ಧಿಯ ಹುಚ್ಚು ಎಂದು ಹೇಳುತ್ತಿರುವುದನ್ನು ನಾನು ಅನೇಕ ಬಾರಿ ಕಿವಿಯಾರೆ ಕೇಳಿಸಿಕೊಂಡಿದ್ದೇನೆ.

ಹಿಂದೊಮ್ಮೆ ಶಹಾಪುರದಲ್ಲಿ ನಮ್ಮ ಹೈದರಾಬಾದ್ ಕರ್ನಾಟಕ ಯುವ ಬರಹಗಾರರ ಬಳಗವು ವೈಜನಾಥ ಪಾಟೀಲರನ್ನು ಆ ಭವ್ಯ ವೇದಿಕೆಯಲ್ಲಿ ಸನ್ಮಾನಿಸಿರುವುದನ್ನು ಕಲಬುರಗಿಯಲ್ಲಿ ಅವರನ್ನು ಭೇಟಿಯಾದಗೊಮ್ಮೆ ಎಲ್ಲರ ಎದುರುಗಡೆ ಆ ಕಾರ್ಯಕ್ರಮ, ಸನ್ಮಾನ ಇತ್ಯಾದಿ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದರು. ಇಂತಹ ಮೇರು ವ್ಯಕ್ತಿತ್ವದ ವೈಜನಾಥ ಪಾಟೀಲರು ನಿನ್ನೆ ತಾನೆ ೨.೧೧.೨೦೧೯ರಂದು ಬೆಂಗಳೂರಿನಲ್ಲಿ ನಿಧನರಾದ ಸುದ್ದಿ ಕೇಳಿ ನಿಜಕ್ಕೂ ಹೃದಯ ಭಾರವೆನಿಸಿತು.

ನಿನ್ನೆ ಸಂಜೆ ಕಲಬುರಗಿಯ ಹಿಂದಿ ಪ್ರಚಾರಸಭೆಯ ಆವರಣದಲ್ಲಿ ಅವರ ಲಿಂಗ ಶರೀರರದ ಅಂತಿಮ ದರ್ಶನ ಪಡೆಯುವಾಗ ಇವೆಲ್ಲ ಘಟನೆಗಳು ನೆನಪಿಗೆ ಬಂದವು. ಇಂತಹ ಒಬ್ಬ ಹೋರಾಟಗಾರನ ಅಂತಿಮ ದರ್ಶನದ ವೇಳೆಯಲ್ಲಿ ಜನ ಕಿಕ್ಕಿರಿದು ಜಮಾಯಿಸಬೇಕಾಗಿತ್ತು. ಆದರೆ ಕೆಲವೇ ಜನರಿರುವುದನದನ್ನು ಕಂಡು ನಿಜಕ್ಕೂ ಬೇಸರವೆನಿಸಿತು.

ಕೊನೆ ಪಕ್ಷ ಅವರ ಹೋರಾಟದ ಫಲ ಉಣ್ಣುವವರು ಬಂದರೆ ಸಾಕಿತ್ತು ಎನಿಸಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here