ಆತ್ಮಪ್ರಜ್ಞೆಯನ್ನು ಎಚ್ಚರಿಸಲು ಬಂದ ಕಾರಣಿಕ ಪುರುಷ ವಿಶ್ವಗುರು ಬಸವಣ್ಣನವರು

0
269

ಶಹಾಪುರ: ಲಿಂಗಾಯತ ಧರ್ಮ ಕ್ರಾಂತಿಕಾರಿ ವಿಚಾರಗಳ ಮೊತ್ತ. ವೈದಿಕ ವ್ಯವಸ್ಥೆಯಲ್ಲಿ ಕಲುಷಿತಗೊಂಡಿದ್ದ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಎಂಬ ಪದಗಳಿಗೆ ಹೊಸ ವ್ಯಾಖ್ಯೆಯನ್ನು ಬರೆದವರು ವಿಶ್ವಗುರು ಬಸವಣ್ಣನವರು ಎಂದು ಬಸವಕಲ್ಯಾಣ ಬಸವ ಧರ್ಮ ಪೀಠದ ಪೂಜ್ಯ ಶ್ರೀ ಬಸವಪ್ರಭು ಸ್ವಾಮೀಜಿಗಳು ಅಭಿಪ್ರಾಯ ಪಟ್ಟರು.

ನಗರದ ಬಸವಮಾರ್ಗ ಪ್ರತಿಷ್ಠಾನ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆ ಜಂಟಿಯಾಗಿ ಏರ್ಪಡಿಸಿದ್ದ ತಿಂಗಳ ಬಸವ ಬೆಳಕು-86 ರ ಸಭೆಯಲ್ಲಿ ಎತ್ತೆತ್ತ ನೋಡಿದತ್ತ ಬಸವನೆಂಬ ಬಳ್ಳಿ ಎಂಬ ವಿಷಯದ ಕುರಿತು ಮಾತನಾಡಿದರು.

Contact Your\'s Advertisement; 9902492681

ಬಸವಣ್ಣನವರನ್ನು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತಗೊಳಿಸಲಾಗ ವ್ಯಕ್ತಿತ್ವ ಕಟ್ಟಿಕೊಂಡಿದ್ದರು. ಅವರನ್ನು ಸಮಾಜ ಸುಧಾರಕ, ಆರ್ಥಿಕ ತಜ್ಞ, ಮನಶಾಸ್ತ್ರಜ್ಞ, ರಾಜಕೀಯ ಚಿಂತಕ, ಹೋರಾಟಗಾರ, ದೀನ ದಲಿತರ ಆಪ್ತ ಬಂಧು , ಸ್ತ್ರೀ ಕುಲ ಉದ್ಧಾರಕ ಎಂಬ ಶಬ್ಧಗಳಿಂದ ಕರೆದರೆ ಅದು ಸೀಮಿತವಾಗುತ್ತದೆ. ಬಸವಣ್ಣನವರು ನಮ್ಮ ನಿಮ್ಮೆಲ್ಲರ ಆತ್ಮಪ್ರಜ್ಞೆಯನ್ನು ಎಚ್ಚರಿಸಲು ಬಂದ ಕಾರಣಿಕ ಪುರುಷ ಎಂದು ಬಣ್ಣಿಸಿದರು.

ಮಾತೃ ಹೃದಯಿಯಾದ ಬಸವಣ್ಣ ತನ್ನ ಸುತ್ತ ಮುತ್ತ ಶರಣ ಸಂಕುಲವನ್ನು ಕಟ್ಟಿದರು. ರಾಷ್ಟ್ರದ ಮೂಲೆ ಮೂಲೆಯಿಂದ ಜನ ತಂಡೋಪ ತಂಡವಾಗಿ ಕಲ್ಯಾಣದ ನಾಡಿಗೆ ಬಂದರು. ನಿಸ್ಪೃಹವಾದ ಕಾಯಕವನ್ನು ಮಾಡಿ, ಮಿಗುತಾಯದಲ್ಲಿ ದಾಸೋಹವನ್ನು ನೆರವೇರಿಸಿದರು. ದಾಸೋಹಂ ಭಾವದ ಬದುಕಿನ ಮೂಲಕ ಜಗತ್ತಿನ ಎಲ್ಲರಿಗೂ ಬೆಳಕಿನ ಹೊಳೆಯಾದರು. ಆಗ ಕಲ್ಯಾಣದ ಅಂಗಳ ಆಚಾರ, ವಿಚಾರ ಹಾಗೂ ನಡತೆಯಿಂದ ತುಂಬಿ ಹೊರಗೂ ಕಲ್ಯಾಣ ಒಳಗೂ ಕಲ್ಯಾಣ ಎಂಬಂತಾಯಿತು. ಕಾಣದ ದೇವರಿಗಿಂತ ಕಣ್ಣ ಮುಂದಿನ ಸತ್ಯವನ್ನು ಮನಗಾಣಬೇಕೆಂದು ಬಸವಣ್ಣನವರು ಎಲ್ಲರಿಗೂ ಮನಂಬುಗುವಂತೆ ಜೀವಿಸಿ ಎಲ್ಲರಿಗೂ ಮಾದರಿಯಾದರು. ಆದ್ದರಿಂದಲೆ ಅಲ್ಲಮಪ್ರಭುಗಳು ಏನಾದರೂ ಆಗಬಹುದು. ಶಿವನೇ ಆಗಬಹುದು. ಆದರೆ ಬಸವಣ್ಣನವರಾಗುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ ಎಂದು ವಚನಗಳ ಸಹಿತ ಸಭೆಗೆ ವಿವರಿಸಿದರು.

ಮುಂದುವರೆದು ಮಾತನಾಡಿದ ಅವರು ಜಗತ್ತಿಗೆ ಇಂದು ಬೇಕಾಗಿರುವುದು ಅಂತಃಕರಣ, ಮಾನವೀಯ ಮಿಡಿತ, ನಾವೆಲ್ಲರೂ ಒಂದೆ, ಎಲ್ಲರೂ ಶಿವನ ಪ್ರಭೆಯಿಂದ ಬೆಳಗುವ ಜೀವಿಗಳು ಎಂಬ ಅರಿವು ಇಟ್ಟುಕೊಂಡರೆ ಇಡೀ ಜಗತ್ತನ್ನು ಪ್ರೀತಿಸುವ ಮನಸ್ಸು ನಮ್ಮದಾಗುತ್ತದೆ ಎಂದು ತಿಳಿಸಿದರು. ಲಿಂಗಾಯತ ಧರ್ಮ ಜನ ಸಾಮಾನ್ಯರ ಧರ್ಮ. ಶೋಷಿತರ ಧರ್ಮ. ಮಠಮಾನ್ಯಗಳು, ಪಟ್ಟಭದ್ರಶಕ್ತಿಗಳು ಲಿಂಗಾಯತ ಸ್ವತಂತ್ರ ಧರ್ಮವಾಗಲು ಅಡ್ಡಗಾಲು ಹಾಕಿದ್ದಾರೆ ಎಂದು ಆರೋಪಿಸಿದರು.

ಶರಣರ ವಚನಗಳನ್ನು ಓದಿ ಅರಿತುಕೊಂಡು ನಡೆದರೆ ನಮ್ಮ ಬದುಕು ಬಂಗಾರವಾಗುತ್ತದೆ. ಜೀವನದಲ್ಲಿ ಬರುವ ಕಷ್ಟ ಸುಖಗಳನ್ನು ಅನುಭವಿಸಿ ಜೀವಿಸಬೇಕು. ಯಾರ ಟೀಕೆ ಟಿಪ್ಪಣಿಗಳಿಗೆ ಎದೆಗುಂದಡೆ ವೈಚಾರಿಕವಾಗಿ ಬದುಕುವ ಶಕ್ತಿಯನ್ನು ವಚನ ಸಾಹಿತ್ಯ ನಮಗೆ ಕಲಿಸಿಕೊಡುತ್ತದೆ ಎಂದು ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪಟ್ಟಣದ ಹಿರಿಯ ವಕೀಲರಾದ ಭಾಸ್ಕರರಾವ್ ಮುಡಬೂಳ ಮಾತನಾಡಿ, ನಾವೆಲ್ಲ ಸಂಕುಚಿತ ಸಂಕೋಲೆಯಲ್ಲಿ ಬದುಕುತ್ತಿದ್ದೇವೆ. ಶರಣರ ಸಂತರ ವಿಶಾಲವಾದ ಮನೋಭಾವವನ್ನು ಅರ್ಥ ಮಾಡಿಕೊಳ್ಳುವ ಮೂಲಕ ಶರಣರಾಗಬೇಕಾಗಿದೆ. ನಮ್ಮ ನಡುವೆಯೆ ಶರಣ ಜೀವನವನ್ನು ಬದುಕಿ ಹೋದ ಹಲವಾರು ವ್ಯಕ್ತಿಗಳಿದ್ದಾರೆ. ಅವರನ್ನು ಅನುಸರಿಸುವ ಮೂಲಕ ನಮ್ಮ ಬದುಕನ್ನು ಸರಿಪಡಿಸಿಕೊಳ್ಳಬೇಕು. ಅಧಿಕಾರ, ಅಹಂಕಾರಗಳ ಮೂಲಕ ನಮ್ಮ ಬದುಕನ್ನು ಹಾಳು ಮಾಡಿಕೊಳ್ಳಬಾರದು ಎಂದರು. ಅಂದಿನ ಅನುಭವ ಮಂಟಪವನ್ನು ಇಂದಿನ ಪಾರ್ಲಿಮೆಂಟಿಗೆ ಹೋಲಿಸಲಾಗದು. ಇಂದಿನ ರಾಜಕೀಯ ಬಗ್ಗಡಗೊಂಡಿದೆ.

ಯಾವುದೆ ಸ್ವಾರ್ಥ, ರಾಜಕೀಯ ಇಲ್ಲದೆ ಬಸವ ಬೆಳಕನ್ನು ಮುನ್ನಡೆಸಿಕೊಂಡು ಹೋಗುವುದು ತುಂಬಾ ಕಷ್ಟ. ಬಸವಮಾರ್ಗ ಪ್ರತಿಷ್ಠಾನವನ್ನು ಸತ್ಯಂಪೇಟೆ ಕುಟುಂಬ ನಿರಂತರವಾಗಿ ನಡೆಸಿಕೊಂಡು ಹೊರಟಿದೆ. ಈ ಪ್ರತಿಷ್ಠಾನಕ್ಕೆ ನನ್ನದು ಯಾವತ್ತೂ ಬೆಂಬಲ ಇದ್ದೆ ಇರುತ್ತದೆ. ಜನರ ಮನಸ್ಸಿನಲ್ಲಿ ಅಡಗಿರುವ ಅಜ್ಞಾನವನ್ನು ಕಳೆದು ಸುಜ್ಞಾನವನ್ನು ಬಸವ ಬೆಳಕು ನೀಡಲಿ ಎಂದು ಹಾರೈಸಿದರು.

ಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಬೆಂಗಳೂರಿನ ಶ್ರೀಶೈಲ ಮಸೂತಿ ಉದ್ಘಾಟಿಸಿದರು. ಭೀಮರಾಯ ಲಿಂಗೇರಿ ಸ್ವಾಗತಿಸಿದರು. ಅಲ್ಲಮಪ್ರಭು ಸತ್ಯಂಪೇಟೆ, ಮಹಾದೇವಪ್ಪ ಗಾಳೆನೋರ, ಚೆನ್ನಮಲ್ಲಿಕಾರ್ಜುನ ಗುಂಡಾನೋರ ವಚನಗಳನ್ನು ಹಾಡಿದರು. ಕರ್ನಾಟಕ ರಾಜ್ಯ ರೈತ ಸಂಘದ ನಾಗರತ್ನ ವಿ.ಪಾಟೀಲ ವಂದಿಸಿದರು. ಶಿವಣ್ಣ ಇಜೇರಿ ನಿರೂಪಿಸಿದರು. ಸಭೆಯಲ್ಲಿ ಶರಣು ಮಂಡಗಳ್ಳಿ, ಶಿವಯೋಗಪ್ಪ ಮುಡಬೂಳ, ಹೊನ್ನಾರೆಡ್ಡಿ ವಕೀಲರು, ಶಾಂತರೆಡ್ಡಿ ವಕೀಲರು, ಸಿದ್ಧಲಿಂಗಪ್ಪ ಆನೇಗುಂದಿ, ರಾಜು ಸಾಲಿಮನಿ, ದೇವರಾಜ ಪೂಜಾರಿ, ಶಿವಕುಮಾರ ಕರದಳ್ಳಿ, ಗುಂಡಪ್ಪ ತುಂಬಗಿ, ರಾಜಶೇಖರ ದಿಗ್ಗಿ, ವಿಶ್ವನಾಥರೆಡ್ಡಿ ಸಾವುರ, ಅಡಿವೆಪ್ಪ ಜಾಕಾ, ಗುಂಡಣ್ಣ ಕಲಬುರ್ಗಿ, ಜಗದೀಶ್ ನೂಲಿನವರ್, ವಿಶ್ವನಾಥರೆಡ್ಡಿ ಗೊಂದಡಗಿ ಮುಂತಾದವರು ಭಾಗವಹಿಸಿದ್ದರು.

ವೇದಿಕೆಯ ಮೇಲೆ, ಶ್ರೀಶೈಲ ಮಸೂತಿ, ಭಾಸ್ಕರರಾವ್ ಮುಡಬೂಳ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here