ನ. 26 ಕ್ಕೆ ‘ಅಮ್ಮ ಪ್ರಶಸ್ತಿ’ ಪ್ರದಾನ: 19 ನೇ ವರ್ಷದ ಸಂಭ್ರಮ

0
393

ಕಲಬುರಗಿ: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ‘ಅಮ್ಮ ಪ್ರಶಸ್ತಿ’ಗೆ ಕಾದಂಬರಿಕಾರ, ಪತ್ರಕರ್ತ ಜೋಗಿ (ಗಿರೀಶರಾವ), ಲೇಖಕಿ ಸುಧಾ ಆಡುಕಳ, ವೈಚಾರಿಕ ಲೇಖಕ ಜಿ.ಎನ್.ನಾಗರಾಜ್, ಅನುವಾದಕ ಪ್ರಭಾಕರ ಸಾತಖೇಡ, ಕಥೆಗಾರ ಚನ್ನಪ್ಪ ಕಟ್ಟಿ, ಕವಯತ್ರಿ ಭುವನಾ ಹಿರೇಮಠ ಅವರ ಕೃತಿಗಳು ಆಯ್ಕೆಯಾಗಿವೆ ಎಂದು ಅಮ್ಮ ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜೋಗಿ ಅವರ ‘ಎಲ್’ (ಕಾದಂಬರಿ), ಉಡುಪಿಯ ಸುಧಾ ಆಡುಕಳ ಅವರ ‘ಬಕುಲದ ಬಾಗಿಲಿನಿಂದ’ (ಲಲಿತ ಪ್ರಬಂಧ), ತುಮಕೂರಿನ ಜಿ.ಎನ್.ನಾಗರಾಜ್ ಅವರ ನಿಜ ರಾಮಾಯಣ ಅನ್ವೇಷಣೆ (ವೈಚಾರಿಕ ಬರಹ), ಕಲಬುರಗಿಯ ಪ್ರಭಾಕರ ಸಾತಖೇಡ ಅವರ ‘ಮಾಸ್ತರರ ನೆರಳಾಗಿ’ (ಅನುವಾದ), ವಿಜಯಪುರದ ಚನ್ನಪ್ಪ ಕಟ್ಟಿ ಅವರ ಅವರ ‘ಏಕತಾರಿ’ (ಕಥಾ ಸಂಕಲನ) ಮತ್ತು ಬೆಳಗಾವಿಯ ಭುವನಾ ಹಿರೇಮಠ ಅವರ ‘ಟ್ರಯಲ್ ರೂಮಿನ ಅಪ್ಸರೆಯರು’ (ಕವನ ಸಂಕಲನ) ಕೃತಿಗಳನ್ನು ೧೯ ನೇ ವರ್ಷದ ‘ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

Contact Your\'s Advertisement; 9902492681

ಪ್ರಶಸ್ತಿಯು ತಲಾ ೫೦೦೦ ರೂ. ನಗದು ಪುರಸ್ಕಾರ, ನೆನಪಿನ ಕಾಣಕೆ, ಪ್ರಮಾಣ ಪತ್ರ ಮತ್ತು ಸತ್ಕಾರ ಒಳಗೊಂಡಿರುತ್ತದೆ. ಇದೇ ನವೆಂಬರ್ ೨೬ ರಂದು ಸಂಜೆ ೫.೩೦ಕ್ಕೆ ಕಲಬುರಗಿ ಜಿಲ್ಲೆಯ ಸೇಡಮ್ ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ ‘ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಮ್ಮ ಗೌರವ ಪುರಸ್ಕಾರ: ‘ಅಮ್ಮ  ಗೌರವ ಪುರಸ್ಕಾರ’ ಕ್ಕೆ ಈ ಬಾರಿಯೂ ನಾಡು ನುಡಿಗೆ ನೀಡಿದ ಕೊಡುಗೆಯನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಗಣನೀಯ ಸಾಧನೆಯನ್ನು ಗುರುತಿಸಿ ‘ಅಮ್ಮ ಗೌರವ’ ಪುರಸ್ಕಾರ ನೀಡಿ ಸತ್ಕರಿಸಲಾಗುವುದೆಂದು ಎಂದು  ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಈ ಬಾರಿಯ ‘ಅಮ್ಮ ಗೌರವ ಪುರಸ್ಕಾರ’ ಕ್ಕೆ ಹಿರಿಯ ಸಂಶೋಧಕ, ಸಾಹಿತಿ ಪ್ರೊ. ದೇವರಕೊಂಡಾರೆಡ್ಡಿ, ಕಲಬುರಗಿಯ ವಿಲಾಸವತಿ ಖೂಬಾ, ಹಿರಿಯ ಮಕ್ಕಳ ಸಾಹಿತಿ ಏ.ಕೆ.ರಾಮೇಶ್ವರ, ಹಿರಿಯ ಲೇಖಕ ಲಿಂಗಾರೆಡ್ಡಿ ಶೇರಿ ಸೇಡಂ ಹಾಗೂ ರಂಗತಜ್ಞ ಜೀವನರಾಂ ಸುಳ್ಯ, ಮೂಡಬಿದಿರೆ ಅವರು ಆಯ್ಕೆ ಮಾಡಲಾಗಿದೆ.

ಅಮ್ಮ ಪ್ರಶಸ್ತಿಗೆ ೧೯ನೇ ವರ್ಷದ ಸಂಭ್ರಮ: ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ ‘ಅಮ್ಮ ಪ್ರಶಸ್ತಿ’ಗೆ ಈಗ ೧೯ ನೇ ವರ್ಷದ ಸಂಭ್ರಮ. ಕನ್ನಡದ ಪ್ರತಿಭಾವಂತ ಬರಹಗಾರರು ‘ಅಮ್ಮ ಪ್ರಶಸ್ತಿ’ಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ ಹಾಗೂ ಗೌರವಿಸಿದ್ದಾರೆ. ಈ ಬಾರಿ ೪೯೬ ಕೃತಿಗಳು ಬಂದಿದ್ದವು.

ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ‘ಅಮ್ಮ ಪ್ರಶಸ್ತಿ’ ರಾಜ್ಯದ ಗಣನೀಯ ಪ್ರಶಸ್ತಿಗಳಲ್ಲಿ ಒಂದಾಗಬೇಕು ಎಂಬ ಪ್ರತಿಷ್ಠಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಖ್ಯಾತ ಲೇಖಕರು, ಕವಿಗಳು, ಪ್ರಕಾಶಕರು ಮತ್ತು ಲೇಖಕರ ಅಭಿಮಾನಿ ಓದುಗರು ಸ್ಪಂದಿಸಿದ್ದೇ ಇದೊಂದು ಗೌರವಾನ್ವಿತ ಪ್ರಶಸ್ತಿಯಾಗಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿ.

ದಶಮಾನೋತ್ಸವ ವರ್ಷದಿಂದ ಆರಂಭಗೊಂಡ ಅಮ್ಮ ಗೌರವ ಪುರಸ್ಕಾರವನ್ನು ಸಹ ಮುಂದುವರಿಸಲಾಗಿದೆ. ಪ್ರತಿ ವರ್ಷ ಐವರಿಗೆ ಅಮ್ಮ ಪ್ರಶಸ್ತಿ ಹಾಗೂ ಅಮ್ಮ ಗೌರವ ಪುರಸ್ಕಾರ ನೀಡಲಾಗುತ್ತಿತ್ತು. ಈ ಬಾರಿ ಆರು ಜನರಿಗೆ ಅಮ್ಮ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here