ಹಿರೇಕೆರೂರ ಉಪ ಚುನಾವಣೆ: ಸ್ವಾಮೀಜಿ ಕಣಕ್ಕೆ (ಪ್ರ.ವಾ.ನ.14). ಓದಿದೆ. ಇದು ನನಗೆ ಹೊಸತೇನು ಅನ್ನಿಸಲಿಲ್ಲ. ಏಕೆಂದರೆ ಈಗಾಗಲೇ ಇಂತಹ ಸ್ವಾಮಿ, ಸಂತರು ರಾಜಕೀಯದಲ್ಲಿರುವುದನ್ನು ನಾವು ಕಾಣುತ್ತಿದ್ದೇವೆ.
ಇದಕ್ಕೂ ಮೊದಲು ಅಪರೋಕ್ಷ ರಾಜಕೀಯ ನಡೆಸುತ್ತಿದ್ದ ಸ್ವಾಮೀಜಿಗಳು ಇದೀಗ ಮುನ್ನೆಲೆಗೆ ಬಂದು ರಾಜಕೀಯ ನಡೆಸುತ್ತಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ.
‘ಸ್ವಾ’ ಎಂದರೆ ತೊರೆ, ಬಿಟ್ಟು ಬಿಡು . ‘ಮಿ’ ಎಂದರೆ ಮೋಹ, ಮಮಕಾರ ವರ್ಜಿಸಿ ತಾನು, ತನ್ನದು ಎಂಬುದನ್ನು ತೊರೆದು ತನ್ನನ್ನು ತಾನು ಸಮಾಜಕ್ಕೆ ಅರ್ಪಿಸಿಕೊಳ್ಳುವುದು ಎಂದರ್ಥ. ಲೌಕಿಕದ ಈ ತಂದೆ-ತಾಯಿ ಬಂಧು-ಬಳಗ ಬಿಟ್ಟು ಇಡೀ ಸಮಾಜವೇ ತನ್ನ ತಂದೆ-ತಾಯಿ ಬಂಧು-ಬಳಗ ಎಂದು ಬಗೆದು ಸಮಾಜ ಸೇವೆ ಮಾಡುವುದು ಇವರ ಕರ್ತವ್ಯ.
ಇಂತಹ ಘನ ಪದವಿ ಹೊಂದಿರುವ ಸ್ವಾಮಿಗಳು ಇದೀಗ ಇಡೀ ಸಮಾಜ ಉದ್ಧಾರಕ್ಕಾಗಿ ರಾಜಕೀಯ ಪ್ರವೇಶ ಪಡೆತ್ತಿರಬಹುದೇ? ಅಥವಾ ತನ್ನನ್ನು ತಾನು ಸಮಾಜಕ್ಕೆ ಅರ್ಪಿಸಿಕೊಳ್ಳುವುದು ಇರಬಹುದೇ? ಯಾರು ಬಲ್ಲರು!
ಆದರೆ ಈ ಸನ್ಯಾಸಿ ಜೀವನ ನಡೆಸುವ ಇವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಈ ಲೌಕಿಕ ಜನರ ಆಶೋತ್ತರ ಈಡೇರಿಸಲು ಸಾಧ್ಯವೆ? ಎಂಬುದು ನನ್ನ ಪ್ರಶ್ನೆ!