ಕಲಬುರಗಿ: ವಿಕಲಚೇತನರು ಸಮಾಜದ ಅವಿಭಾಜ್ಯ ಅಂಗವಾಗಿದ್ದಾರೆ. ಅವರ ಬಗ್ಗೆ ಸಮಾಜ ಕೀಳರಿಮೆ ತಾಳದೆ ಅವಕಾಶಗಳನ್ನು ಒದಗಿಸಿಕೊಟ್ಟು ಸಾಧನೆಗೆ ಪ್ರೋತ್ಸಾಹಿಸಿದರೆ ಅವರು ಕೂಡಾ ರಾಷ್ಟ್ರಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡುವ ಸದೃಢ ರಾಷ್ಟ್ರ ನಿರ್ಮಾಣವಾಗಿಸಲು ಶ್ರಮಿಸುತ್ತಾರೆಂದು ಆಳಂದ ಬಾಲಕರ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಶಶಿಕಾಂತ ಮೇತ್ರಿ ಅಭಿಮತ ವ್ಯಕ್ತಪಡಿಸಿದರು.
ಅವರು ನಗರದ ಆಳಂದ ಚೆಕ್ ಪೊಸ್ಟ್ ಸಮೀಪದ ’ಬಸವೇಶ್ವರ ಕಾನ್ವೆಂಟ್ ಶಾಲೆ’ಯಲ್ಲಿ, ಇಲ್ಲಿನ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಸಂಜೆ ಏರ್ಪಡಿಸಿದ್ದ ’ವಿಶ್ವ ವಿಶೇಷಚೇತನರ ದಿನಾಚರಣೆ;ಯ ಪ್ರಯುಕ್ತ ವಿಶೇಷ ಸಾಧನೆಗೈದ ವಿಕಲಚೇತನರಿಗೆ ಅರ್ಥಪೂರ್ಣವಾಗಿ ಜರುಗಿದ ಸತ್ಕಾರ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡುತ್ತಿದ್ದರು.
ಸಹ ಶಿಕ್ಷಕ ಶ್ರೀಕಾಂತ ಬಿರಾದಾರ ಮಾತನಾಡಿ, ವಿಕಲಚೇತನರಿಗೆ ಸಮಾನ ಅವಕಾಶಗಳು ದೊರೆಯಬೇಕು. ಸಾಮಾನ್ಯ ಜನರ ಹಾಗೆ ಅವರಿಗೆ ಬದುಕಲು ಉತ್ತೇಜ ನೀಡಬೇಕು. ವಿಶೇಷಚೇತನರಿಗೆ ಸಂಬಂಧಿಸಿದ ಯೋಜನೆ, ಕಾರ್ಯಕ್ರಮಗಳನ್ನು ಸಮಪರ್ಕವಾಗಿ ಅನಿಷ್ಠಾನಗೊಳ್ಳಲು ಜನಪ್ರತಿನಿಧಿಗಳು ಹಾಗೂ ಆಡಳಿತ ವರ್ಗದವರು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆಯೆಂದು ಮಾರ್ಮಿಕವಾಗಿ ನುಡಿದರು.
ಬಳಗದ ಸಂಸ್ಥಾಪಕ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಸಮಾಜ ವಿಕಲಚೇತನರ ಬಗ್ಗೆ ಅನುಕಂಪ ತೋರಿದರೆ ಸಾಲದು. ಬದಲಿಗೆ ಅವರಿಗೆ ದೊರೆಯಬೇಕಾದ ಎಲ್ಲಾ ಸವಲತ್ತುಗಳು ಒದಗಿಸಿಕೊಡಬೇಕು. ಅವರನ್ನು ನೋಡುವ ದೃಷಿ ಉತ್ತಮವಾಗಬೇಕು. ವಿಕಲಚೇತನರು ತಮ್ಮಲಿರುವ ಕೀಳರಿಮೆಯನ್ನು ಬಿಟ್ಟು, ಧನಾತ್ಕಕ ಚಿಂತನೆಯನ್ನು ರೂಢಿಸಿಕೊಂಡರೆ, ಸಾಮಾನ್ಯರಿಗಿಂತಲೂ ಕಡಿಮೆಯಿಲ್ಲದ ಸಾಧನೆ ಮಾಡಲು ಸಾಧ್ಯವಿದೆಯೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಶಿವಶರಣಪ್ಪ ಹಡಪದ ಮಾತನಾಡಿದರು. ಬಳಗದ ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ, ಸಂಸ್ಥೆಯ ಕಾರ್ಯದರ್ಶಿ ಸೋಮಶೇಖರ ಬಿ.ಮೂಲಗೆ, ಬಳಗದ ಸದಸ್ಯರಾದ ಬಸವರಾಜ ಪುರಾಣೆ, ಶರಣಬಸಪ್ಪ ಮಲಶೆಟ್ಟಿ, ಸಂತೋಷ ಹೂಗಾರ, ಶ್ರೀನಿವಾಸ ಬುಜ್ಜಿ, ನಾಗರಾಜ ವಡ್ಡನಕೇರಿ, ನಿಂಗರಾಜ ವಾಲಿ, ಬಸವರಾಜ ಸಂಗೋಳಗಿ, ಸತೀಶ ಸಣಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ವೀರೇಶ ಬೋಳಶೆಟ್ಟಿ ಸ್ವಾಗತಿಸಿ, ನಿರೂಪಣೆ ಮಾಡಿದರು. ಮಲ್ಲಿನಾಥ ಮುನ್ನಳ್ಳಿ ವಂದಿಸಿದರು.