ಕಲಬುರಗಿ/ವಾಡಿ: ಚಿಂಚೋಳಿ ತಾಲೂಕಿನಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಂದಿರುವ ಪಾಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಸೋಷಿಯಲ್ ಡೆಮಾಕ್ರೇಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಮೌಲಾನಾ ಅಬ್ದುಲ್ ಕಲಾಂ ಆಜಾದ್ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪಕ್ಷದ ನೂರಾರು ಕಾರ್ಯಕರ್ತರು, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಬೇಟಿ ಬಚಾವ್ ಬೇಟಿ ಪಡಾವ್ ಘೋಷಣೆ ಕೂಗುತ್ತಿರುವ ಬಿಜೆಪಿ ಸರಕಾರದಲ್ಲಿ ಯಾವ ಹೆಣ್ಣಿಗೆ ರಕ್ಷಣೆಯಿಲ್ಲ. ಇತ್ತ ಮಗಳೂ ಸುರಕ್ಷಿತವಾಗಿಲ್ಲ ಅತ್ತ ತಾಯಿಗೂ ಭದ್ರತೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೈದರಾಬಾದ್‌ನ ಪಶು ವೈದ್ಯೆಯನ್ನು ಅತ್ಯಾಚಾರಗೈದು ಜೀವಂತವಾಗಿ ಸುಟ್ಟ ಹಾಕಿದ ಜಾಗದಲ್ಲಿಯೆ ಆರೋಪಿಗಳನ್ನು ಹೊಡೆದು ಸಾಯಿಸಿದಂತೆ ಚಿಂಚೋಳಿಯ ಬಾಲಕಿಯ ಅತ್ಯಾಚಾರಿಗಳಿಗೂ ನೇಣಿನ ಕುಣಿಕೆ ಬಿಗಿಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಬೆಂಬಲಿಸಿ ಮಾತನಾಡಿದ ಮಾನವ ಬಂಧುತ್ವ ವೇದಿಕೆಯ ತಾಲೂಕು ಅಧ್ಯಕ್ಷ ಶ್ರವಣಕುಮಾರ ಮೌಸಲಗಿ, ದೇಶದಲ್ಲಿ ಪದೇಪದೆ ಅತ್ಯಾಚಾರ ಮತ್ತು ಕೊಲೆ ಘಟನೆಗಳು ನಡೆಯುತ್ತಿವೆ. ಅಮಾನುಷ್ಯವಾಗಿ ಮಹಿಳೆಯರನ್ನು ಸಾಯಿಸಲಾಗುತ್ತಿದೆ. ದುಷ್ಕೃತ್ಯದಲ್ಲಿ ಬಂಧಿಸಲಾಗುತ್ತಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುತ್ತಿಲ್ಲ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಗುತ್ತಿಲ್ಲ. ಅತ್ಯಾಚಾರಕ್ಕೆ ಮುಂದಾಗುವ ಕ್ರೂರಿಗಳಿಗೆ ಜೀವಭಯ ಹುಟ್ಟುತ್ತಿಲ್ಲ. ಹೀಗಾಗಿ ನಿರಂತರವಾಗಿ ಬಾಲಕಿಯರ ಮೇಲೆ ಒಂಟಿ ಮಹಿಳೆಯರ ಮೇಲೆ ದಾಳಿಗಳಾಗುತ್ತಿವೆ. ಕೃತ್ಯಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿಗೊಳಿಸಬೇಕು. ಬಾಲಕಿಯನ್ನು ಕೊಂದ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಎಸ್‌ಡಿಪಿಐ ಪಕ್ಷದ ಅಧ್ಯಕ್ಷ ಮಹ್ಮದ್ ಆಶೀಫ್, ಮುಖಂಡರಾದ ಲಾಖೇಶ ಮೋಹನ, ಖಲೀಲ ಅಹ್ಮದ್, ಝಹೂರ ಖಾನ್, ಮಹ್ಮದ್ ಮೋಹಸೀನ್, ಅಲ್ತಾಫ್ ಅಹ್ಮದ್, ಶೇಖ ಸದ್ದಾಂ, ಶೇಖ ಮಹೆಬೂಬ, ಗೌಸ್ ಪಾಶಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.