ಅಯ್ಯ ನಿಮ್ಮ ಶರಣರ ಬರವಿಂಗೆ
ಗುಡಿ ತೋರಣವ ಕಟ್ಟುವೆ
ಅಯ್ಯ ನಿಮ್ಮ ಶರಣರ ಬರವಿಂಗೆ
ಮಡುಹಿನಲ್ಲಿ ಪಟ್ಟವ ಕಟ್ಟುವೆ
ಅಯ್ಯ ನಿಮ್ಮ ಶರಣರೆನ್ನ ಮನೆಗೆ ಬಂದಡೆ
ಅವರ ಶ್ರೀಪಾದವನೆನ್ನ ಹೃದಯದಲ್ಲಿ ಬಗೆದಿಟ್ಟುಕೊಂಬೆ
ಕಾಣಾ ಚನ್ನಮಲ್ಲಿಕಾರ್ಜುನ
-ಅಕ್ಕಮಹಾದೇವಿ
ಎಚ್ಚರಿರಬೇಕು ನಡೆ-ನುಡಿಯಲ್ಲಿ, ಮಚ್ಚರವಿರಬೇಕು ಭವ ಸಾಗರದಲ್ಲಿ, ಹುಚ್ಚನಾಗಿರಬೇಕು ಜನರ ಕಣ್ಣಿನಲ್ಲಿ, ಮನ ಅಚ್ಚೊತ್ತಿದಂತಿರಬೇಕು ಲಿಂಗದಲ್ಲಿ, ಇಂತೀ ಗುಣವುಳ್ಳಾತನೆ ಭಕ್ತ ಜೇಔರ್ಗಿಯ ಷಣ್ಮುಖ ಶಿವಯೋಗಿಗಳ ಈ ವಚನದಂತೆ ಬಾಳ್ಯದಲ್ಲಿಯೇ ಎಚ್ಚರವಾಗಿದ್ದ ಅಕ್ಕ ಅಚ್ಚಳಿಯದ ಹಿರಿಯತನ ಹೊಂದಿದ್ದಳು. ಗುಣಮಣಿ, ಗುಣದ ಖಣಿಯಾಗಿದ್ದಳು. ಶರಣ ಅಂದರೆ ಬುದ್ಧ. ಬುದ್ಧ ಅಂದರೆ ಶರಣ. ಶರಣ ಅಂದರೆ ಎಚ್ಚರ. ಸಂಸಾರ, ಹುಸಿ, ಮೋಸದಿಂದ ಎಚ್ಚರಾಗಿರುವುದೇ ಶರಣ ಬದುಕು. ಇಂತಹ ಎಚ್ಚರದ ಸ್ಥಿತಿಯಲ್ಲಿ ಅಕ್ಕ ಇದ್ದಳು. ಎಚ್ಚನಾಗಿರುವಾತ ಅಂಟಿಕೊಂಡಿರಲಾರ.
ಅದರಂತೆ ಅರಮನೆಯಲ್ಲಿ ಅಕ್ಕ ನಿತ್ಯ ಎಚ್ಚರವಾಗಿದ್ದಳು. ನಡೆ-ನುಡಿಯಲ್ಲಿ ದೇವಪ್ರೇಮ, ದೇವಭಾವ ಹೊಂದಿದ್ದ ಆಕೆಗೆ ಚೆನ್ನಮಲ್ಲಿಕಾರ್ಜುನನ ಧ್ಯಾನವೇ ಬದುಕಿನ ಮೂಲಧ್ಯೇಯವಾಗಿತ್ತು. “ಕೆಡದಿರೆ ಕೆಡದಿರೆ ಮೃಢನಡಿಯ ಹಿಡಿಯಿರೇ, ದೃಢವಲ್ಲ ನೋಡಿರೆ ನಿಮ್ಮೊಡಲು. ದೃಢವಲ್ಲ ನೋಡಿರೆ ಸಂಸಾರ ಸುಖವು ಚೆನ್ನಮಲ್ಲಕಾರ್ಜುನ ಬರೆದ ಅಕ್ಷರವು ತೊಡೆಯದ ಮುನ್ನ ಬೇಗ ಬೇಗ ಶಿವಶರಣೆನ್ನಿ” ಎಂದ ಅಕ್ಕ ಒಲಿದ ಠಾವಿನಲ್ಲಿ ನೋಟ ಜೀವಾಳದಂತಿದ್ದಳು. ಸದಾ ವಚನಾಧ್ಯಯನ, ಲಿಂಗಧ್ಯಾನದಲ್ಲಿದ್ದಳು.
ಯಂತ್ರ, ಮಂತ್ರ ತಾಯಿತ, ಚೀಟಿ, ಚಿಪಾಟಿ ಕಟ್ಟುವಾತ ಗುರುವಲ್ಲ. ಭವಿಷ್ಯ ಜೋತಿಷ್ಯ ಹೇಳುವ ಪೂಜಾರಿ-ಪುರೋಹಿತರು ಜನರ ಮನದಲ್ಲಿ ಮೌಢ್ಯತೆ ತುಂಬುತ್ತಾರೆ. ಇಂಥವರ ಕೈಯಲ್ಲಿ ನಮ್ಮ ತಲೆ, ಮೆದುಳು ಒತ್ತೆಯಿಟ್ಟು ನಮ್ಮತನವನ್ನು ಕಳೆದುಕೊಳ್ಳಬಾರದು. ಇವರು ಕಳ್ಳಗುರುಗಳು. ಭಯಮುಕ್ತ ವಾತಾವರಣ ನಿರ್ಮಾಣ ಮಾಡುವಾತನೆ ನಿಜವಾದ ಗುರು. ಎಂಬ ನಿಜ ಸತ್ಯವನ್ನು ಅರಿತುಕೊಂಡಿದ್ದ ಅಕ್ಕ ಭೌತಿಕ ಸುಖ-ಸಂಪತ್ತು ತೊರೆದು ಉತ್ತಮ ಸಂಸ್ಕಾರ-ಸಂಸ್ಕೃತಿ ಬೆಳೆಸಿಕೊಂಡಿದ್ದಳು.
ಗುರುವಿನ ಮಾರ್ಗದರ್ಶನದಿಂದ ಬದುಕು ಹಸನಾಗುತ್ತದೆ. ಸದ್ಗುರುವಿನ ಸ್ನೇಹದಿಂದ “ಇಹ”ದ ಸುಖದ ಜೊತೆಗೆ “ಪರ”ದ ಆನಂದ ಸಿಗುತ್ತದೆ. ವಸ್ತುವಿನಿಂದ ಸುಖ ಸಿಕ್ಕರೆ, ಒಳಗಿನಿಂದ ಆನಂದ ಸಿಗುತ್ತದೆ. ಕಾಯಕ, ದಾಸೋಹದ ಆನಂದ ಸಿಗುತ್ತದೆ. ತುಪ್ಪದ ಸವಿಗೆ ಅಲಗು ನೆಕ್ಕುವ ಸೊಣಗನಂತೆ, ತನ್ನನಿಕ್ಕಿ ನಿಧಾನವ ಸಾಧಿಸುವ ಮರುಳರನೇನೆಂಬೆ? ಎಂಬ ಬಸವಾಲ್ಲಮರ ವಚನ ವಿಷಯ ಅರಿತಿದ್ದ ಅಕ್ಕ ಗುರುವಿನ ಆಗಮನದಿಂದ ಉಲ್ಲಸಿತಳಾಗಿದ್ದಳು. ಎನ್ನಿತ್ಯವೆನ್ನ ಮನೆಗೆ ನಡೆದು ಬಂದಿತ್ತು, ಮುಕ್ತಿಯಿಂದು ಎನ್ನಮನೆಗೆ ನಡೆದು ಬಂದಿತ್ತು ಎಂದು ಗುರು ಲಿಂಗದೇವರ ಬರುವಿನಿಂದ ಅಕ್ಕ ಅರಮನೆ ತುಂಬ ಸಂಭ್ರಮ- ಉಲ್ಲಾಸ, ಪಾದರಸದಂತೆ ಓಡಾಡುತ್ತಿದ್ದಳು. “ಹಾವ ಬಯಸುವ ಮಗಳಿಗೆ ಹಾವ ಕೊಡುವಳೆ ತಾಯಿ” ಎನ್ನುವಂತೆ ಚೆನ್ನ ಮಲ್ಲಿಕಾರ್ಜುನನ ಎಚ್ಚರದಲ್ಲಿದ್ದಳು ಮಹಾದೇವಿ. ಗುರುವಿನ ಪಾದಪೂಜೆ, ಪ್ರಸಾದದ ನಂತರ ಅಲ್ಲೊಂದು ಅನುಭಾವ ಗೋಷ್ಠಿ ಏರ್ಪಡುತ್ತದೆ.
ಸಂಸಾರವೆಂಬ ಹೆಣ ಬಿದ್ದಡೆ ತಿನಬಂದ ನಾಯ ಜಗಳವ ನೋಡಿರೆ! ನಾಯ ಜಗಳವ ನೋಡಿ ಹೆಣನೆದ್ದು ನಗುತ್ತಿವೆ. ಗುಹೇಶ್ವರನೆಂಬ ಲಿಂಗವಲ್ಲಿಲ್ಲ ಕಾಣಿರೆ ಎಂಬ ಅಲ್ಲಮನ ವಚನ, ಹಾವಿನ ಬಾಯ ಹಸಿದು ಹಾರುವ ನೊಣಕ್ಕೆ ಆಸೆ ಮಾಡುವಂತೆ ಶೂಲವನೇರುವ ಕಳ್ಳನು ಹಾಲು ತುಪ್ಪವ ಕುಡಿದು ಮೇಲೇಸು ಕಾಲ ಬದುಕುವನೊ ಕೆಡುವಡಲ ನೆಚ್ಚಿ ಕಡು ಹುಸಿಯನೆ ಹುಸಿದು ಒಡಲ ಹೊರೆವರ ಕೂಡಲಸಂಗದೇವಯ್ಯನೊಲ್ಲ ಕಾಣಿರಣ್ಣಾ ಎಂಬ ಬಸವಣ್ಣನವರ ವಚನಗಳನ್ನು ಅರ್ಥ ಬಿಡಿಸಿ ಹೇಳುತ್ತಿರುವಾಗ ಅಕ್ಕನ ಜೊತೆಗೆ ಅಲ್ಲಿರುವ ದಾಸಿಯರು ಸಹ ಅದ್ಯಾವುದೋ ಕಾಣದ ಲೋಕದಲ್ಲಿ ಮುಳುಗಿದಂತೆ ಕಂಡು ಬಂದರು.
ಸದಾ ವಿಲಾಸ ವೈಭೋಗದಿಂದ ಕೂಡಿರುತ್ತಿದ್ದ ಆ ಅರಮನೆ ಗುರುವಿನ ಆಗಮನದಿಂದ ಅದೊಂದು ಥೇಟ್ ಅನುಭವ ಮಂಟಪದಂತೆ ಕಂಗೊಳಿಸಿತು. ಇದನ್ನು ಕಂಡ ಅಕ್ಕ ಗದ್ಗದಿತಳಾದಳು. ಅಶ್ರುಜಲಧಾರೆ ಹರಿಯಿತು. ಮೈ ಕಂಪಿಸತೊಡಗಿತು. ಏನಿದು ಎಂದು ಕೌಶಿಕ ಚಿಂತಾಕ್ರಾಂತನಾದ. ಆದರೂ ಸಾವರಿಸಿಕೊಂಡು ಮೇಲೆ ಬಂದು ಅರಮನೆಯ ಬದಲಾದ ಆ ವಾತಾವರಣ ತನ್ನ ಕಣ್ಣು ತುಂಬಿಕೊಳ್ಳುತ್ತಿದ್ದ.
ಕೌಶಿಕನ ಈ ಅಲೌಕಿಕ ಮಾತುಗಳನ್ನು ಕೇಳಿದ ಕೌಶಿಕನಿಗೆ ಎಲ್ಲಿ ತನ್ನ ಅರಮನೆ ಕಳೆದು ಹೋಗುವುದೋ? ಎಂದುಕೊಂಡು “ಏ ಭೈರಾಗಿ ಅರಮನೆಯಲ್ಲಿದ್ದುಕೊಂಡು ಈ ರೀತಿ ಮಾತನಾಡುವುದು ತರವೇ? ಏನಿದು ನಿನ್ನ ಈ ಹುಚ್ಚಾಟ? ಎಂದು ಕೋಪಗೊಂಡು ನಡುಗುತ್ತ ಜೋರು ದನಿಯಲ್ಲಿ ಕೇಳುತ್ತಾನೆ. ಗುರುವಿಗೆ ಅವಮಾನ ಮಾಡಿದ ಪ್ರಸಂಗ ಕಂಡ ಅಕ್ಕ ಮತ್ತೆ ಇದೇನಾಯಿತಲ್ಲ! ಎಂದು ಕಂಪಿಸುತ್ತಿರುತ್ತಾಳೆ.
ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ
(ಸ್ಥಳ: ಎಚ್.ಸಿ.ಜಿ.ಆಸ್ಪತ್ರೆ ಎದುರು,ಖೂಬಾ ಪ್ಲಾಟ್,ಕಲಬುರಗಿ)