ಬದುಕಿನ ಶೃಂಗಾರ ಯಾವುದರಿಂದ ಎಂಬುದನ್ನು ಹೇಳಿಕೊಟ್ಟ ಅಕ್ಕ

0
174
ಕಣ್ಗೆ ಶೃಂಗಾರ ಗುರು ಹಿರಿಯರ ನೋಡುವುದು
ಕರ್ಣಕ್ಕೆ ಶೃಂಗಾರ ಪುರಾತನರ ಸುನೀತಂಗಳ ಕೇಳುವುದು
ವಚನಕ್ಕೆ ಶೃಂಗಾರ ಸತ್ಯವ ನುಡಿವುದು
ಸಂಭಾಷಣೆಗೆ ಶೃಂಗಾರ ಸದ್ಭಕ್ತರ ನುಡಿಗಡಣ
ಕರಕ್ಕೆ ಶೃಂಗಾರ ಸತ್ಪಾತ್ರಕ್ಕೀವುದು
ಜೀವಿಸುವ ಜೀವನಕ್ಕೆ ಶೃಂಗಾರ ಗಣಮೇಳಾಪ
ಇವಿಲ್ಲದ ಜೀವಿಯ ಬಾಳುವೆ ಏತಕ್ಕೆ ಬಾರದಯ್ಯ
ಚನ್ನಮಲ್ಲಿಕಾರ್ಜುನ- ಅಕ್ಕಮಹಾದೇವಿ

ಕಣ್ಗೆ ಶೃಂಗಾರ ಗುರುಹಿರಿಯರ ನೋಡುವುದು; ಬದುಕನ್ನು ಎತ್ತರಿಸುವ ಜೀವನ ಹೊರಗಿನ ಸಾಧನಗಳಿಂದ ಆಗುವುದಿಲ್ಲ. ಒಳಗಿನ ಗುಣಗಳಿಂದ. ಅಂತೆಯೇ ಕಣ್ಣಿಗೆ ಸಾಧನವಾಗಿ ಇಷ್ಟಲಿಂಗ ಕೊಟ್ಟರು ಬಸವಣ್ಣನವರು. ಕಣ್ಣು ಮುಚ್ಚುವುದು ಕಣ್ಣಿನ ಕೆಲಸವಲ್ಲ. ರೆಪ್ಪೆ, ಕಾಡಿಗೆಗಳಿಂದ ಶೃಂಗಾರ ಅಲ್ಲ. ಕಣ್ಣಿನಿಂದಲೇ ಪ್ರೇಮ, ಕಾಮ, ಕ್ರೋದ ಉಂಟಾಗುತ್ತವೆ. ಕಣ್ಣಿನಿಂದಲೇ ಮುಕ್ತಿಯೂ ದೊರೆಯಬಲ್ಲುದು.

ಕಿವಿಗಳಿಗೆ ಶೃಂಗಾರ ಪುರಾತನರ ಸುನೀತಂಗಳು; ನಾವು ಅವರಿವರ, ಅಂತಿಂಥ ಮಾತುಗಳನ್ನು ಕೇಳಬಾರದು. ಜ್ಞಾನದೀಪ್ತಿ ಹೊತ್ತುವುದು ಶರಣರ ನುಡಿಗಡಣದ ಒಸರಿನಿಂದ. ಇದರಿಂದಾಗಿ ತಾನು ಯಾರು? ಎಂಬುದು ತಿಳಿಯುತ್ತದೆ. ಇದು ನಮ್ಮನ್ನು ಸತ್ಯದ ದಾರಿಗೆ ಕರೆದುಕೊಂಡು ಹೋಗುತ್ತದೆ. ಆದ್ದರಿಂದ ಸುನೀತಂಗಳನ್ನು ಕೇಳಬೇಕು. ಕೇಳುವುದರಿಂದ ಆ ನುಡಿಗಡಣಗಳು ನಮ್ಮೊಳಗೆ ಇಳಿಯುತ್ತವೆ. ಅದರಿಂದ ಬದುಕಿಗೆ ಒಳಿತಾಗುತ್ತದೆ.

Contact Your\'s Advertisement; 9902492681

ವಚನಕ್ಕೆ ಶೃಂಗಾರ ಸತ್ಯವ ನುಡಿಯುವುದು; ಎಲ್ಲಿ ಸತ್ಯವಿದೆಯೋ ಅಲ್ಲಿ ಶಿವನಿದ್ದಾನೆ. ಅಂತೆಯೇ “ಸತ್ಯಂ ಶಿವಂ ಸುಂದರಂ” ಎಂದು ಹೇಳಲಾಗುತ್ತದೆ. ಸತ್ಯವಿದ್ದಲ್ಲಿ ದೇವನ ವಾಸಸ್ಥಾನವಿರುತ್ತದೆ. ಪರಮ ಚೈತನ್ಯ ಕೆಲಸ ಮಾಡಬೇಕಾದರೆ ಅಲ್ಲಿ ಸತ್ಯ ಅಡಗಿರಲೇಬೇಕು. ಕರಗಳಿಗೆ ಶೃಂಗಾರ ಪಾಟ್ಲಿ, ಬಿಲ್ವಾರ ಅಲ್ಲ. ಬಂಗಾರದ ಬಳೆಗಳಲ್ಲ. ಸಂಪತ್ತು ಮಧ್ಯಾಹ್ನದ ಸಿರಿ ಇದ್ದ ಹಾಗೆ. ಅದು ಕ್ಷಣಿಕವಾದುದು. ನಮ್ಮಲ್ಲಿರುವುದನ್ನು ಸತ್ಪಾತ್ರಕ್ಕೆ ನೀಡಬೇಕು. ಪಡೆದ ವ್ಯಕ್ತಿ ಸಮನ್ವಿತನಾಗಿ ಪಾಪಕಾರ್ಯ ಮಾಡುವವನಿಗೆ ನೀಡಬಾರದು. ನಾವು ನೀಡುವುದು ಸಾರ್ಥಕ ಪಡೆಯಬೇಕು. ಅದರ ಪಾಲುದಾರರು ನಾವಾಗಬೇಕು. ಸಮಾಜದ ಒಳಿತಿಗೆ ನಮ್ಮ ಪಾಲುದಾರಿಕೆ ಏನಿದೆ? ಎಂಬುದನ್ನು ನೋಡಬೇಕು. ತನು,ಮನ,ಧನದಿಂದ ಸಮಾಜಕ್ಕಾಗಿ ದುಡಿದರೆ ದುರ್ಬುದ್ಧಿ ಹೋಗಿ ಧರ್ಮಬುದ್ಧಿ ಬೆಳೆಯಲು ಸಾಧ್ಯ. ಕುಟುಂಬದ ಸುತ್ತ ತಿರುಗುವುದರ ಜೊತೆಗೆ ಸಮಾಜದ ಸುತ್ತಲೂ ನಾವು ತಿರುಗಬೇಕು. ಅಂದರೆ ಕುಟುಂಬದ ಜೊತೆಗೆ ಸಮಾಜ ಬಲಿಷ್ಠ ಆಗಬೇಕು ಎಂಬುದರ ಕಡೆಯೂ ವಿಚಾರ ಮಾಡಬೇಕು. ಕೊಟ್ಟವನಿಗೆ ಕಸಿದುಕೊಳ್ಳುವುದೇನು ತಡ? ಹೀಗಾಗಿ ನಮ್ಮಲ್ಲಿರುವುದನ್ನು ಸಮಾಜದ ಒಳಿತಿಗೆ ಕೊಡಬೇಕು. ನೀಡಬೇಕು.

ಸಂಭಾಷಣೆಗೆ ಶೃಂಗಾರ ಸದ್ಭಕ್ತರ ನುಡಿಗಡಣ; ನಮ್ಮ ಸಂಭಾಷಣೆ ಪ್ರೇಮಪೂರ್ವಕವಾಗಿರುವುದರ ಜೊತೆಗೆ ಶುದ್ಧವಾಗಿರಬೇಕು. ಬಸವಣ್ಣನವರು ಹೇಳುವಂತೆ ನುಡಿದರೆ ಮುತ್ತಿನ ಹಾರದಂತಿರಬೇಕು. ಪರಸ್ಪರ ಮಾತನಾಡುತ್ತಿದ್ದರೆ ಅಲ್ಲಿ ಬೆಳಕು ಕಾಣಿಸಬೇಕು. ವಚನಕಾರ್ತಿ ಸಾತವ್ವೆ ಕೊಂಡಿ ಮಂಚಣ್ಣನ ಹೆಂಡತಿ ಲಕ್ಷ್ಮವ್ವನ ಜೊತೆ ನಡೆದ ಸಂಭಾಷಣೆ, ಭಗವಾನ್ ಬುದ್ಧ ಅಂಗುಲಿಮಾಲಾನ ಜೊತೆ ನಡೆಸಿದ ಸಂಭಾಷಣೆಗಳು ಇನ್ನೊಬ್ಬರ ಬದುಕು ಹಸನುಗೊಳಿಸಿದವು ಎಂಬುದನ್ನು ನಾವು ಮರೆಯಬಾರದು. ಸತ್ಯ ಸಂಭಾಷಣೆಯಿಂದ ಜೀವನ ಪರಿವರ್ತನೆ ಆಗುತ್ತದೆ. ನಮ್ಮ ಶರಣರು ಮಾತು ಬೆಳ್ಳಿ, ಮೌನ ಬಂಗಾರ ಎನ್ನಲಿಲ್ಲ. ಮಾತೆಂಬುದು ಜ್ಯೋತಿರ್ಲಿಂಗ ಎಂದು ಕರೆದರು.

ಜೀವಿಸುವ ಜೀವನಕ್ಕೆ ಶೃಂಗಾರ ಗಣಮೇಳಾಪ; ಕೂಡಲ ಸಂಗನ ಶರಣರ ಅನುಭಾವದ ಸಂಗದಿಂದ ನಮ್ಮ ಮನಸ್ಸಿನ ಕೇಡಾಗುತ್ತದೆ. ಅಂತೆಯೇ ಸಾರ ಸಜ್ಜನರ ಸಂಗ ಲೇಸು ಎಂದು ಬಸವಣ್ಣನವರು ಹೇಳಿದ್ದಾರೆ. ಈ ಗುಣಗಳಿಲ್ಲದ ಜೀವನ ಯಾವುದಕ್ಕೂ ಉಪಯೋಗವಾಗುವುದಿಲ್ಲ ಎಂದು ಅಕ್ಕ ತನ್ನ ಈ ವಚನ ವಿಶ್ಲೇಷಣೆ ಮಾಡಿದಳು.

ಆ ಊರಿನಿಂದ ಕಲ್ಯಾಣಕ್ಕೆ ಹೊರಟು ನಿಂತ ಅಕ್ಕನಿಗೆ ಸೀರೆ ಕೊಡಲು ಬರುತ್ತಾರೆ. ಆದರೆ ಅಕ್ಕ ಅದನ್ನು ನಯವಾಗಿ ನಿರಾಕರಿಸುತ್ತಾಳೆ. ದಾರಿಯುದ್ದಕ್ಕೂ ಜನ ಸಾಲಾಗಿ ನಿಂತು ಅಕ್ಕನಿಗೆ “ಶರಣು ಶರಣಾರ್ಥಿ” ಹೇಳಿ ಬೀಳ್ಕೊಡುತ್ತಾರೆ. ಸತ್ತವರನ್ನು ಎದ್ದು ನಿಲ್ಲಿಸುವ “ಶರಣು ಶರಣಾರ್ಥಿ” ಎನ್ನುವ ನುಡಿ ಅದು. ಅಂತಹ ಸಾತ್ವಿಕ ಗುಣ ಹೊಂದಿದ ಭಾಗ್ಯನಿಧಿಯಂತಿರುವ ಅಕ್ಕ ಕಲ್ಯಾಣದೆಡೆಗೆ ತನ್ನ ದೃಷ್ಟಿ ಹಾಯಿಸಿದಳು.

ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ
(ಸ್ಥಳ: ಎಚ್.ಸಿ.ಜಿ. ಆಸ್ಪತ್ರೆ ಎದುರು, ಖೂಬಾ ಪ್ಲಾಟ್, ಕಲಬುರಗಿ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here