ಧಗಧಗಿಸುವ ಜಗತ್ತಿಗೆ ಶರಣರ ನುಡಿ ಲೇಸೆಂದ ಅಕ್ಕ

0
74
ಕುಲಗಿರಿಯ ಶಿಖರದ ಮೇಲೆ ಬಾಳೆ ಬೆಳೆಯುವುದಯ್ಯ ಎಂದಡೆ
ಬಾಳೆ ಬೆಳೆಯುವುದಯ್ಯ ಎನಬೇಕು
ಓರೆಗಲ್ಲ ನಗ್ಗುಗುಟ್ಟಿಮೇಲಬಹುದಯ್ಯ ಎಂದಡೆ
ಅದು ಅತ್ಯಂತ ಮೃದು ಮೆಲಬಹುದಯ್ಯ ಎನಬೇಕು
ಸಿಕ್ಕದ ಠಾವಿನಲ್ಲಿ ಉಚಿತವ ನುಡಿವುದೆ ಕಾರಣ ಚೆನ್ನಮಲ್ಲಿಕಾರ್ಜುನ
ಮರ್ತ್ಯಕ್ಕೆ ಬಂದುದಕ್ಕಿದೆ ಗೆಲವು
-ಅಕ್ಕಮಹಾದೇವಿ

ಜನಜಂಗುಳಿಯೇ ಬೇರೆ ಗಣಮೇಳಾಪವೇ ಬೇರೆ. ನಿರ್ಧಿಷ್ಟ ಗುರಿಯಿಲ್ಲದೆ ಒಂದೆಡೆ ಸೇರಿರುವ ಜನ ಸಮೂಹವನ್ನು ಜನ ಜಂಗುಳಿ ಎಂದು ಕರೆದರೆ, ನಿರ್ಧಿಷ್ಟವಾದ ಗುರಿ ಮತ್ತು ಬದ್ಧತೆಯಿರುವ ಜ್ಞಾನ ಅಧಾನ ಪ್ರಧಾನವಾಗಿರುವ ಗಣ ಸಮೂಹವನ್ನು ಗಣಮೇಳಾಪ ಎನ್ನುತ್ತೇವೆ. “ತಮಸೋಮಾ ಜ್ಯೋತಿಂರ್ಗಮಯ, ಅಸತೋಮ ಅಮೃತಂಗಯ” ಕತ್ತಲೆಯಿಂದ ಬೆಳಕಿನೆಡೆಗೆ ಮೃತ್ಯುವಿನಿಂದ ಅಮರತ್ವದ ಕಡೆಗೆ ಕೂಡಬೇಕು. ಆವ ವಿದ್ಯೆ ಕಲಿತರೂ ಸಾವ ವಿದ್ಯೆ ಬೆನ್ನತ್ತಿಹದು. ಶರಣರ ನುಡಿ ದೇವನೆಡೆಗೆ ಕೊಂಡೊಯ್ಯುತ್ತದೆ.

Contact Your\'s Advertisement; 9902492681

ಶರಣರು ಮಾತನಾಡಿದರೆ ಲಿಂಗವೆ ಕಾಣಬಹುದು. ಅದಕ್ಕೆ ಲಿಂಗನುಡಿ ಎನ್ನುತ್ತೇವೆ. ಇಂತಹ ಶರಣರು ಹೌದೆನ್ನುವ ಜೀವನ ಅಕ್ಕನದು. ಕಲ್ಯಾಣದ ಆ ಅನುಭವ ಮಂಟಪದಲ್ಲಿ ವಿವಿಧ ಕಾಯಕ ಮಾಡುವ ಶರಣರಿದ್ದರು. ದುಡ್ಡಿದೆ, ಪದವೀಧರ ಅನ್ನುವುದರ ಮೇಲೆ ಅವರ ವ್ಯಕ್ತಿತ್ವವನ್ನು ಅಳತೆ ಮಾಡದೆ ಅವರವರ ವೃತ್ತಿ ಯಾವುದಾದರೇನು ಅವರ ಸದಾಚಾರದ ಮೇಲೆಯೇ ವ್ಯಕ್ತಿತ್ವವನ್ನು ಗುರುತಿಸಲಾಗುತ್ತಿತ್ತು. ಸಮಾನತೆ ಮತ್ತು ಸಮಾನಪ್ರೇಮ ಇರುವ ಸ್ಥಳ ಅನುಭವ ಮಂಟಪವಾಗಿತ್ತು.

ಅನುಭವ ಮಂಟಪ ಎಂಬುದನ್ನು ಕಲ್ಲು, ಇಟ್ಟಿಗೆಗಳಿಂದ ನಿರ್ಮಿಸಿರಲಿಲ್ಲ. ಸದಾಚಾರ ಮತ್ತು ಸದುದ್ದೇಶ ಹೊಂದಿರುವ ಜನ ಒಂದೆಡೆ ಕುಳಿತು ಚರ್ಚೆ-ಚಿಂತನೆ ಮಾಡುತ್ತಿದ್ದರೆ ಅದು ಅನುಭವ ಮಂಟಪ ಎಂದು ಕರೆಯಲಾಗುತ್ತಿತ್ತು. ಅಂತಹ ಶರಣ ಮೇಳಾಪದಲ್ಲಿ ಬಸವಣ್ಣ ಇರುತ್ತಿದ್ದರು. ಜೀವಿತದ ಉದ್ದೇಶ ಮತ್ತು ಬದ್ಧತೆ ಒಂದೇ ಆಗಿರುತ್ತದೆ. ಅವರವರ ವಿಚಾರಗಳಿಗೆ ಸ್ವಾತಂತ್ರ್ಯವಿತ್ತು.

ಪ್ರಪಂಚ ಇಂದು ಪರಸ್ಪರ ದ್ವೇಷಾಸೂಹೆಗಳಿಂದ ಧಗ ಧಗಿಸುತ್ತಿದೆ. ಪರಸ್ಪರ ದ್ವೇಷಾಸೂಹೆ ಮರೆತು ನೆಮ್ಮದಿ ಮತ್ತು ತಂಪು ನೀಡುವ ಸ್ಥಳ ಶರಣರ ಸಂಗ. ಸಾರ ಸಜ್ಜನರ ಸಂಗ ಲೇಸು; ದೂರ ದುರ್ಜನರ ಸಂಗ ಬೇಡ ಎನ್ನುವಂತೆ ಕೆಟ್ಟವರ ಜೊತೆ ಮೂರ್ಖರ ಸಹವಾಸ ಮಾಡಬಾರದು. ಶರಣರ ಸಂಗದಲ್ಲಿ ಎನಗಿಂತ ಕಿರಿಯರಿಲ್ಲ; ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ತತ್ವ ಅಡಗಿದೆ. ನಾನು ಮಾಡಿದೆ ಅನ್ನುವುದಕ್ಕಿಂತ ನನಗೆ ಮಾಡಲು ಅವಕಾಶ ಸಿಕ್ಕಿತು ಎಂದು ಭಾವಿಸಬೇಕು.

ನದಿ ಹರಿದರೆ ಕ್ಷೇಮ, ಗಾಳಿ ಬೀಸಿದರೆ ಕ್ಷೇಮ, ಸಾಧಕ ನಡೆದರೆ ಕ್ಷೇಮ ಎನ್ನುವಂತೆ ಅಲ್ಲಿಂದ ಬೀಳ್ಕೊಂಡು ಮುಂದೆ ಬಂದ ಅಕ್ಕನಿಗೆ ಮತ್ತೆ ಶರಣರು ಶರಣಾರ್ಥಿ ಎಂಬ ಕುಶಲದ ನುಡಿ ಕೇಳಿಸಿತು. ಹೀಗೆ ಕಲ್ಯಾಣದೆಡೆಗೆ ತೆರಳುತ್ತಿದ್ದ ಅಕ್ಕ ಕಲಬುರಗಿಯ ಮಹಾಗಾಂವ ಪ್ರದೇಶಕ್ಕೆ ಬಂದು ನಿಂತಾಗ, “ದೇವಿ ಬಂದಾಳೆ, ಮಹಾದೇವಿ ಬಂದಾಳೆ. ಶರಣರೆಲ್ಲರೂ ಬರ ಮಾಡಿಕೊಳ್ಳಿರೆ” ಎಂದು ಹಾಡಿ ಸ್ವಾಗತಿಸಿಕೊಂಡರು. ಅಲ್ಲಿಯೇ ರಾತ್ರಿ ಕಳೆಯುತ್ತಾಳೆ. ಅನುಭಾವಗೋಷ್ಠಿ ನಡೆಸುತ್ತಾಳೆ.

ಕಲ್ಯಾಣ ಇಲ್ಲಿಂದ ಕೇವಲ ೩೦ ಮೈಲು ದೂರ ಇದೆ ಎಂಬ ಸುದ್ದಿ ತಿಳಿದ ಅಕ್ಕ ಪುಳಕಿತಗೊಳ್ಳುತ್ತಾಳೆ. ನಮ್ಮೂರಿನ ಸೀರೆ ಉಟ್ಟುಕೊಂಡು ಹೋಗಬೇಕು. ನಿಮ್ಮ ವಚನದ ತಾಡೋಲೆಯೊಂದನ್ನು ಇಲ್ಲಿ ಇಟ್ಟು ಹೋಗಿ ಎಂದು ಗ್ರಾಮಸ್ಥರು ಒತ್ತಾಯ ಮಾಡಿದರು. ಅಂತೆಯೇ ಅಂದಿನಿಂದ ಇಂದಿನವರೆಗೆ ಅಕ್ಕನ ಹೆಸರಿನಲ್ಲಿ ವಚನ ಉಡಿ ತುಂಬುವ ಕಾರ್ಯಕ್ರಮ ಈ ಮಹಾಗಾಂವ ಗ್ರಾಮದಲ್ಲಿ ನಡೆಯುತ್ತಿದೆ.

ಅಲ್ಲಿಂದ ಬೀಳ್ಕೊಂಡು ಕಲ್ಯಾಣದ ಹೆಬ್ಬಾಗಿಲಿಗೆ ಬಂದು ನಮಸ್ಕರಿಸಿ ನಿಲ್ಲುವ ಅಕ್ಕ ಅಲ್ಲಿನ ಬಾಂಧವರ ಓಣಿಗೆ ಕಾಲಿರಿಸುತ್ತಾಳೆ. ಅಕ್ಕ ಬರುವುದನ್ನು ಬಸವಣ್ಣ ತನ್ನ ಲಿಂಗ ನಿರೀಕ್ಷಣೆಯಲ್ಲಿಯೇ ಗೊತ್ತು ಮಾಡಿಕೊಳ್ಳುತ್ತಾನೆ. ಅಕ್ಕನಿಗೆ ಅಲ್ಲೊಂದು ಅಗ್ನಿ ಪರೀಕ್ಷೆ ಎದುರಾಗುತ್ತದೆ.

ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ
(ಸ್ಥಳ: ಎಚ್.ಸಿ.ಜಿ. ಆಸ್ಪತ್ರೆ ಎದುರು, ಖೂಬಾ ಪ್ಲಾಟ್, ಕಲಬುರಗಿ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here