ಪ್ರಸ್ತುತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಡಾ. ಶರದ ಮಹಾದೇವಪ್ಪ ರಾಂಪುರೆಯವರು ಇಂದು ದಿನಾಂಕ:೨೭. ೧೨. ೨೦೧೯ ರಂದು ಲಿಂಗೈಕ್ಯರಾಗಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ನನ್ನ ಹೃದಯ ಸಂಕಟವನ್ನು ಅನುಭವಿಸುತ್ತಿದೆ. ಕಂಗಳು ಹನಿಗೂಡಿವೆ. ಮನವು ತಳಮಳಗೊಳ್ಳುತ್ತಿದೆ. ಭದ್ರತಾ ಕೋಟೆಯೊಂದು ಭಗ್ನಗೊಂಡಂತೆ ಭಾಸವಾಗುತ್ತಿದೆ.
ಸಹನೆ, ಸೌಜನ್ಯ ಮತ್ತು ಸ್ನೇಹಶೀಲ ಸ್ವಭಾವದ ಡಾ.ಶರದ ಸಾಹೇಬರು ಸದುವಿನಯದ ಸಾಕಾರ ಮೂರ್ತಿಯಾಗಿದ್ದರು. ಮಾತು ಯಾವತ್ತೂ ಮೃದು ಮಧುರವಾಗಿರುತ್ತಿತ್ತು. ಸಹಾಯ ಯಾಚಿಸಿ ಹೋದವರಿಗೆ ಕೆಲಸ ಆಗುವುದಿಲ್ಲವೆಂದು ಎಂದೂ ಹೇಳಿದವರಲ್ಲ. ಸಂಸ್ಥಾಪಕ ಅಧ್ಯಕ್ಷರ ಮಗ ನಾನೆಂಬ ಹಮ್ಮುಬಿಮ್ಮ ಅವರಲ್ಲಿ ಎಳ್ಳಷ್ಟಿರಲಿಲ್ಲ. ಸಂಸ್ಥೆಯ ಬೋಧಕ ಅಥವಾ ಬೊಧನಾ ಪೂರಕ ಸಿಬ್ಬಂದಿಗಳು ಯಾರೇ ಅವರಲ್ಲಿ ಹೋಗಲಿ: ಅವರೊಂದಿಗೆ ಬಾಯ್ತುಂಬ ಗೌರವಪೂರ್ವಕವಾಗಿ ಮಾತನಾಡುತ್ತಿದ್ದರು. ಪಕ್ಕದಲ್ಲಿ ಕೂಡಿಸಿಕೊಂಡು ಪ್ರೀತಿ ತೋರುತ್ತಿದ್ದರು. ಸ್ನೇಹ ಮತ್ತು ವಿಶ್ವಾಸದಿಂದ ವರ್ತಿಸುತ್ತಿದ್ದರು.
೧೯೮೫ ರಿಂದ ಸತತವಾಗಿ ಎಚ್.ಕೆ.ಇ. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿ, ಜಂಟಿ ಕಾರ್ಯದರ್ಶಿಯಾಗಿ ಮತ್ತು ಕಾರ್ಯದರ್ಶಿಯಾಗಿ ಅನುಪಮವಾದ ಸೇವೆಯನ್ನು ಸಲ್ಲಿಸಿದ್ದಾರೆ. ಎಲ್ಲಾ ಅಧ್ಯಕ್ಷರ ಜೊತೆಗೆ ಹೊಂದಿಕೊಂಡು ಸಮರಸದಿಂದ ಕಾರ್ಯನಿರ್ವಹಿಸಿದ್ದಾರೆ. ಯಾರ ಜೊತೆಗೂ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿಕೊಳ್ಳದೆ ಸೌಹಾರ್ದತೆಯಿಂದ ಸಂವಾದ ನಡೆಸಿ ಸಂಸ್ಥೆಯ ಏಳಿಗೆಗಾಗಿ ಶ್ರಮಿಸಿದ್ದಾರೆ. ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳು ಸುಗಮವಾಗಿ ನಡೆಯುವಂತೆ ಯಾವತ್ತೂ ನೋಡಿಕೊಂಡಿದ್ದಾರೆ.
ಸಂಸ್ಥೆಯ ನಿಯಮಾವಳಿಗಳ ಬಗ್ಗೆ ಸಮಗ್ರವಾದ ಪರಿಜ್ಞಾನವನ್ನು ಹೊಂದಿದ್ದ ಅವರು, ಚಂದದ ಇಂಗ್ಲಿಷ್ ಬರವಣಿಗೆಯನ್ನು ಮಾಡಬಲ್ಲರಾಗಿದ್ದರು. . ದೈಹಿಕವಾಗಿ ದೃಢ ಕಾಯರಾಗಿರುವಂತೆ; ಮಾನಸಿಕವಾಗಿ ತುಂಬಿದ ಕೊಡದಂಥ ಗಂಭೀರ ಗುಣದವರಾಗಿದ್ದರು. ಮಾನವೀಯ ಅಂತಃಕರಣ, ಸಹಾಯ ಮತ್ತು ಸಹಾನುಭೂತಿಯ ನಡವಳಿಕೆಗಳ ಡಾ. ಶರದ ಸಾಹೇಬರನ್ನು ನಾವೀಗ ಎಲ್ಲಿ ಹುಡುಕೋಣ..? ಶಿಕ್ಷಣ ಪೋಷಕ, ಸಿಬ್ಬಂದಿ ಪ್ರೇರಕ, ವಿದ್ಯಾರ್ಥಿ ವತ್ಸಲರನ್ನು ಇನ್ನೆಲ್ಲಿ ಕಾಣೋಣ ?
ಹೃದಯ ಖಾಲಿ ಖಾಲಿಯೆನಿಸುತ್ತಿದೆ. ನಮ್ಮ ಎಚ್. ಕೆ.ಇ. ಸಂಸ್ಥೆಯ ಪ್ರಮುಖ ನಂದಾದೀಪಗಳಲ್ಲೊಂದು: ಪ್ರಮುಖ ದೀಪವು ಇದೀಗ ನಂದಿದಂತಾಗಿದ್ದು; ನಮ್ಮೆಲ್ಲರ ಮನಕ್ಕೆ ದಟ್ಟವಾದ ಕತ್ತಲೆ ಆವರಿಸಿದೆ.
ಆದರಣೀಯರಾದ ಡಾ. ಶರದ ಮಹಾದೇವಪ್ಪ ರಾಂಪುರೆ ಸಾಹೇಬರಿಗೆ ಎಚ್. ಕೆ.ಇ. ಸಂಸ್ಥೆಯ ಹಳೆಯ ವಿದ್ಯಾರ್ಥಿಯೂ, ಹಾಲಿ ಬೋಧಕ ಸಿಬ್ಬಂದಿಯೂ ಆದ ನಾನು ; ಈ ಮೂಲಕ ಅಶ್ರುದುಂಬಿದ ನಮನಗಳನ್ನು ಸಮರ್ಪಿಸುತ್ತೇನೆ.