ಈ ದೇಶದಲ್ಲಿ ಜಯಂತಿ ಆಚರಣೆಗಳ ಆರ್ಭಟ ಇಂದು ನಿನ್ನೆಯದ್ದಲ್ಲ. ಸಕಲ ಜೀವಕೋಟಿಯ ಒಳಿತಿಗಾಗಿ ದುಡಿದ ವ್ಯಕ್ತಿಗಳ ಸಾಧನೆಯನ್ನು ಗುರುತಿಸುವುದು, ಗೌರವಿಸುವುದು ಒಳ್ಳೆಯ ಕೆಲಸವೇನೋ ಸೈ! ಆದರೆ ಬಹಳಷ್ಟು ವೇಳೆ ಈ ರೀತಿ ಗುರುತಿಸಿ ಗೌರವಿಸುವ ಕೆಲಸ ಆ ವ್ಯಕ್ತಿ ಬದುಕ್ಕಿದ್ದಾಗ ಆಗುವುದಕ್ಕಿಂತ ಸತ್ತ ಮೇಲೆಯೇ ನಡೆಯುವ ಸಾಧ್ಯತೆಗಳೇ ಹೆಚ್ಚು. ಇಂದು ಜಯಂತಿಗಳ ಆಚರಣೆ ನಿಜವಾದ ಅರ್ಥದಲ್ಲಿ ಆಗುತ್ತಿಲ್ಲ. ಅನೇಕ ಸಂದರ್ಭಗಳಲ್ಲಿ ವ್ಯಕ್ತಿಗಳ ನಿಜ ಸಾಧನೆಯನ್ನು ಕಡೆಗಣಿಸಿ ಕಾರಣಿಕ ಪುರುಷನನ್ನಾಗಿಯೋ, ದೈವಿಶಕ್ತಿಯ ಹಿನ್ನೆಲೆಯಲ್ಲಿ ನೋಡುವುದರ ಮೂಲಕವೋ ವೈಭವೀಕರಿಸಿ, ಹಾಡಿ-ಹೊಗಳಿ ಕೈ ತೊಳೆದುಕೊಂಡು ಬಿಡುತ್ತೇವೆ. ಬಸವ ಜಯಂತಿ ಆಚರಣೆಯೂ ಇದಕ್ಕಿಂತ ಭಿನ್ನವೇನಿಲ್ಲ.
ಧರ್ಮವೆಂದರೆ ಏನೋ ಗೂಢವಾದದ್ದು. ಗಹನವಾದದ್ದು, ಅದೊಂದು ಸಿದ್ಧಾಂತ, ಕಠಿಣ, ಜಟಿಲ, ಜಾಲ. ಸಾಮಾನ್ಯರಿಗೆ ಅದು ಅರ್ಥವಾಗುವುದಿಲ್ಲ, ಅದು ಕೇವಲ ಕೆಲವರ ಸೊತ್ತು ಎಂಬಂತಿದ್ದ ಕಾಲದಲ್ಲಿ ಧರ್ಮದ ಪರಿಕಲ್ಪನೆಯನ್ನು ಸರಳೀಕರಣಗೊಳಿಸಿದರು. ಬಿದ್ದವರನ್ನು ಎತ್ತಿ ಹಿಡಿಯುವುದೇ ಧರ್ಮ, ದಯೆಯೇ ಧರ್ಮದ ಮೂಲ ಎಂದು ಸಾರಿ ಹೇಳಿದ ಅವರು ಜಗತ್ತಿಗೆ ನಿಜ ಧರ್ಮವನ್ನು ಬೋಧಿಸಿದ ಮಹಾತ್ಮರು.
ಸಮಾಜವೆಂದರೆ ಹಲವು ಜಾತಿ, ವರ್ಗಗಳ ಆಗರ. ನಮ್ಮ ಕೈ ಬೆರಳುಗಳೇ ದೊಡ್ಡದು, ಚಿಕ್ಕದು ಇರುವಂತೆ ಬ್ರಾಹ್ಮಣನೇ ಶ್ರೇಷ್ಠ, ಶೂದ್ರ ಕನಿಷ್ಠ ಎಂದು ಹೇಳುತ್ತ ವಾರ-ತಿಥಿ, ಪಾಪ-ಪುಣ್ಯ, ಮೇಲು-ಕೀಳುಗಳ ತರತಮ ಇರಲೇಬೇಕು ಎಂದು ಹೇಳುವ ಜಾತಿ ಪ್ರಧಾನವಾಗಿದ್ದ ಸಮಾಜದಲ್ಲಿ ನೀತಿ ಪ್ರಧಾನತೆಯನ್ನು ತಂದು ಕೊಟ್ಟ ಬಸವಣ್ಣನವರು ಜನಸಾಮಾನ್ಯರಲ್ಲಿ ಸಾಮಾಜಿಕ ಪ್ರಜ್ಞೆ ತುಂಬಿದ ಇಂತಹ ಸತ್ಪುರುಷರ ಜಯಂತಿ ಆಚರಣೆಯನ್ನು ಯಾರು ಆಚರಿಸಬೇಕು ಎನ್ನುವುದು ಕೂಡ ಮೂಲಭೂತ ಪ್ರಶ್ನೆಯಾಗಿದೆ.
ಕಳೆದ ವರ್ಷ ಬಸವ ಜಯಂತಿ ನಿಮಿತ್ತ ವಿಜಯಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಸಂಜೆ ೬.೩೦ ಗಂಟೆಗೆ ಆರಂಭವಾಗಬೇಕಿದ್ದ ಆ ಕಾರ್ಯಕ್ರಮ ರಾತ್ರಿ ೯.೩೦ ಗಂಟೆಗೆ ಶುರುವಾಯ್ತು. ಆಯೋಜಕರು ಬಹಳ ಪ್ರೀತಿಯಿಂದ ಕರೆದಿದ್ದಾರೆಂದು ನಾನು ಅಷ್ಟೊತ್ತಿನವರೆಗೂ ಅನಿವಾರ್ಯವಾಗಿ ಕಾದು ಕುಳಿತೆ. ಮೆರವಣಿಗೆ ಮುಗಿಸಿ ಬಂದ ಜನ ಒಮ್ಮೆಲೆ ಸ್ಟೇಜ್ ಹತ್ತಿ ಸಾಕಷ್ಟು ಗದ್ದಲ ಮಾಡುತ್ತಿದ್ದರು. ಅದೇವೇಳೆಗೆ ಮುಖ್ಯ ಭಾಷಣಕಾರನಾಗಿದ್ದ ನನ್ನನ್ನೂ ವೇದಿಕೆಗೆ ಆಹ್ವಾನಿಸಿದರು. ಹಾರ ತುರಾಯಿ, ಸ್ವಾಗತ ಪ್ರಾಸ್ತಾವಿಕ ಮಾತು ಮುಗಿಸುವಷ್ಟರಲ್ಲಿ ರಾತ್ರಿ ೧೦.೩೦. ನಾನೇ ಮುಖ್ಯ ಭಾಷಣಕಾರನಾಗಿದ್ದರೂ ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವರನ್ನು ಮೊದಲು ಮಾತಾಡಿಸಿದರು. ಮಾಜಿ ಸಚಿವರು ಮೇಲಾಗಿ ಅವರು ಹಿರಿಯರಾಗಿದ್ದರಿಂದ ನಾನೂ ಸುಮ್ಮನಾದೆ. ಅವರ ಭಾಷಣ ಮುಗಿದ ಬಳಿಕ ನನಗೆ ಬಸವಣ್ಣನವರ ಕುರಿತು ವಿಶೇಷ ಉಪನ್ಯಾಸ ನೀಡುವಂತೆ ನಿರೂಪಕರು ಕರೆದರು.
ಅಷ್ಟೊತ್ತಿಗಾಗಲೇ ಕುಡಿದು ಕುಣಿದು ಕುಪ್ಪಳಿಸಿದ ಯುವ ಜನರು, “ವೇದಿಕೆಗೆ ನನ್ನ ಕರೆದಿಲ್ಲ, ನಿನ್ನ ಕರೆದಿಲ್ಲ, ಆಮಂತ್ರಣ ಪತ್ರಿಕೆಯಲ್ಲಿ ನಮ್ಮ ಹೆಸರು ಯಾಕೆ ಹಾಕಿಲ್ಲ?” ಎಂದು ತಕರಾರು ತೆಗೆದರು. ಇದನ್ನು ಕಂಡು ನಾನು ಮಾತನಾಡುವುದನ್ನು ನಿಲ್ಲಿಸಿದೆ. ಆದರೆ ಅವರೆಲ್ಲರೂ ಸರ್, ನೀವು ಮಾತಾಡ್ರಿ, ಆದರೆ ಇವ್ರು (ಸಮಿತಿಯವರು) ಯಾವಾಗಲೂ ಹೀಗೆಯೇ ಮಾಡುತ್ತಾರೆ ಎಂದು ರಂಪಾಟ ಶುರು ಮಾಡಿದರು. ಆಗ ಸಾಕಷ್ಟು ಸಮಯವೂ ಆಗಿತ್ತು. “ಜಯಂತಿ ಆಚರಣೆ ಕಾರ್ಯಕ್ರಮಗಳು ಕೇವಲ ಭಾವಚಿತ್ರ ಮೆರವಣಿಗೆಗೆ ಸೀಮಿತವಾಗಿರದೆ ಅವರ ವಿಚಾರಗಳ ಮೆರವಣಿಗೆ ಆಗಬೇಕು. ಮನುಷ್ಯತ್ವದಲ್ಲಿ ನಂಬಿಕೆಯಿಟ್ಟ ಯಾರಾದರೂ ಅವರ ತತ್ವಗಳನ್ನು ಅನುಸರಿಸಲು, ಜಯಂತಿ ಕಾರ್ಯಕ್ರಮ ಆಚರಿಸಲು ಅವಕಾಶವಿದೆ” ಎಂದು ಒಂದೈದು ನಿಮಿಷದಲ್ಲಿ ನನ್ನ ಭಾಷಣ ಮೊಟಕುಗಳಿಸಿದೆ. ಇದು ಕೇವಲ ಬಸವಜಯಂತಿ ಆಚರಣೆ ಕಾರ್ಯಕ್ರಮದ ಉದಾಹರಣೆ ಅಲ್ಲ. ಬಹುತೇಕ ಮಹಾಪುರುಷರ ಜಯಂತಿ ಕಾರ್ಯಕ್ರಮಗಳು ಇದೇ ರೀತಿಯಾಗಿರುತ್ತವೆ. ಹಾಗೆಂದ ಮಾತ್ರಕ್ಕೆ ನಾವು ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಬಾರದು ಎಂಬುದು ಇದರರ್ಥವಲ್ಲ!
ವಚನ ಚಳವಳಿಯ ನೇತಾರನಾಗಿದ್ದ ಬಸವಣ್ಣನವರು ವರ್ಗ, ವರ್ಣ, ಲಿಂಗಭೇದ ಮತ್ತು ಅಸ್ಪೃಶ್ಯತೆ ಇಲ್ಲದ ಜಾತ್ಯತೀತ ಸಮಾಜ ಕಟ್ಟಬಯಸಿದ್ದರು. ವ್ಯಷ್ಠಿ ಮೂಲಕ ಸಮಷ್ಠಿಯಲ್ಲಿ ಹೊಸ ಪ್ರಜ್ಞೆ ಮೂಡಿಸಿದ ಮಹಾನ್ ಮಾನವತಾವಾದಿ.
ನೆರೆ ಕೆನ್ನೆಗೆ ತೆರೆ ಗಲ್ಲಕೆ, ಶರೀರ ಗೂಡು ಹೋಗದ ಮುನ್ನ
ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ
ಕಾಲಮೇಲೆ ಕೈನೂರಿ ಕೋಲು ಹಿಡಿಯುವ ಮುನ್ನ
ಮುಪ್ಪಿಂದೊಪ್ಪವಳಿಯದ ಮುನ್ನ ಮೃತ್ಯು ಮುಟ್ಟದ ಮುನ್ನ
ತೊತ್ತು ಗೆಲಸವ ಮಾಡು ನಮ್ಮ ಕೂಡಲ ಸಂಗಮದೇವ
ಎನ್ನುವ ಬಸವಣ್ಣನವರ ಮೇಲಿನ ಈ ವಚನ ತಾರುಣ್ಯದ ಸದುಪಯೋಗಕ್ಕೆ ಕಾಯಕವೇ ಮೂಲಮಂತ್ರ ಎಂಬುದನ್ನು ಹೇಳುತ್ತದೆ. ಯಾರಲ್ಲಿ ತಾರುಣ್ಯ, ಮನಸ್ಸಿನಲ್ಲಿ ಉತ್ಸಾಹವಿರುತ್ತದೋ ಅವರೆಲ್ಲ ತರುಣರು. ಬಸವಣ್ಣ ಕೂಡ ತರುಣನಾಗಿದ್ದ. ಹೀಗಾಗಿ ಬಸವಣ್ಣನವರ ಜಯಂತಿಯನ್ನು ತರುಣ ಜಯಂತಿಯನ್ನಾಗಿ ಆಚರಿಸಿದರೆ ಹೇಗೆ? ಏಕೆಂದರೆ ದೇಶ ಗೆದ್ದವರು, ಸಧನೆ ಮಾಡಿದವರು ದೊಡ್ಡವರಲ್ಲ. ಅದು ದೊಡ್ಡ ಸಾಧನೆಯೂ ಅಲ್ಲ; ಸಮಾಜದಲ್ಲಿ ಬದಲಾವಣೆ ತರುವುದು ಎಲ್ಲಕ್ಕಿಂತ ಮಿಗಿಲಾದ ಸಾಧನೆ. ಅಂತಹ ಬದಲಾವಣೆಯ ದಿಕ್ಕಿನಲ್ಲಿ ಬಸವ ಜಯಂತಿ ಆಚರಣೆ “ನಿಮ್ಮ ಮುಡಿಗೆ ಹೂ ತರುವೆವಲ್ಲದೆ ಹುಲ್ಲ ತಾರೆವು” ಎಂದು ಸಂಕಲ್ಪ ತೊಡಬೇಕು. ಈ ಹಿನ್ನೆಲೆಯಲ್ಲಿ ಜಯಂತಿ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಆಚರಿಸುವತ್ತ ಎಲ್ಲರೂ ಯೋಚಿಸಬೇಕಿದೆ.
-ಶಿವರಂಜನ್ ಸತ್ಯಂಪೇಟೆ
ಮೊ: 9448204548
ಜಯ ಬಸವ
Guru basava