ಕಲಬುರಗಿ: ಮಹಾಮಾರಿ ಕೊರೋನಾ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‌ಡೌನ್ ಆಗಿದ್ದು, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಿತರಕ್ಷಿಸಲು ಮಹಾರಾಷ್ಟ್ರ ಮಾದರಿಯಲ್ಲಿ ಮೌಲ್ಯಮಾಪನ ಕೈಗೊಳ್ಳಬೇಕು ಎಂದು ಈಶಾನ್ಯ ವಲಯ ಶಿಕ್ಷಕರ ವೇದಿಕೆಯ ಅಧ್ಯಕ್ಷ ಎಂ.ಬಿ. ಅಂಬಲಗಿ ಅವರು ಆಗ್ರಹಿಸಿದ್ದಾರೆ.
ಈ ಕುರಿತು ರಾಜ್ಯದ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿರುವ ಅವರು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಮುಂತಾದ ಪರೀಕ್ಷೆಗಳನ್ನು ಬರೆಯುತ್ತಿರುವ ಲಕ್ಷಾವಧಿ ವಿದ್ಯಾರ್ಥಿಗಳಲ್ಲಿ ಮತ್ತು ಅವರ ಪಾಲಕರಲ್ಲಿ ಕೊರೋನಾ ವೈರಸ್‌ನಿಂದಾಗಿರುವ ಲಾಕ್‌ಡೌನ್‌ನಿಂದ ಆತಂಕಕ್ಕೊಳಗಾಗಿದ್ದಾರೆ ಅಲ್ಲದೆ ಕೊರೋನಾ ವೈರಸ್ ತಡೆಗಟ್ಟುವಲ್ಲಿ ಸರಕಾರ ಇದೇ ಸ್ಠಿತಿ ಮುಂದುವರೆಸಿ ಮೇ ೩೧ರವರೆಗೆ ರಜೆ ಘೋಷಿಸಿರುವುದರಿಂದ ಭವಿಷ್ಯದ ಗತಿ ಹೇಗೆ ಎಂದು ವಿದ್ಯಾರ್ಥಿಗಳು ಮತ್ತು ಪಾಲಕರು ಮಾನಸಿಕ ವೇದನೆಗೆ ಒಳಗಾಗಿದ್ದಾರೆ ಶಿಕ್ಷಣ ಸಚಿವರು ಮತ್ತು ಇಲಾಖೆಯು ಯಾವುದೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಕೆಲವು ಸಲಹೆಗಳನ್ನು ಪರಿಗಣಿಸಲು ಕೋರಿದ್ದಾರೆ. ದ್ವಿತೀಯ ಪಿಯುಸಿಯ ಇಂಗ್ಲೀಷ್ ವಿಷಯ ಬಿಟ್ಟು ಎಲ್ಲ ವಿಷಯಗಳ ಪರೀಕ್ಷೆ ಮುಗಿದಿವೆ ಇಂಗ್ಲೀಷ್ ಪರೀಕ್ಷೆ ರದ್ದು ಪಡಿಸಿ ೫ ವಿಷಯಗಳಲ್ಲಿ ಪಡೆಯುವ ಸರಾಸರಿ ಅಂಕ ಇಂಗ್ಲೀಷ್‌ಗೆ ನೀಡುವಂತೆ ಅವರು ಒತ್ತಾಯಿಸಿದ್ದಾರೆ.
೬.೮ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಸುಮಾರು ೩೫ಲಕ್ಷ ಉತ್ತರ ಪತ್ರಿಕೆಗಳು ಮೌಲ್ಯಮಾಪನ ಮಾಡಲು ಸುಮಾರು ೨೦ಸಾವಿರ ಉಪನ್ಯಾಸಕರಿಂದ ೧೨ ದಿನಗಳವರೆಗೆ ಪ್ರತಿ ಮೌಲ್ಯ ಮಾಪನ ಕೇಂದ್ರದಲ್ಲಿ ಸಾವಿರಕ್ಕಿಂತ ಹೆಚ್ಚು ಉಪನ್ಯಾಸಕರು ಒಂದೆಡೆ ಸೇರಬೇಕಾಗುತ್ತದೆ ಇದು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ, ಮಹಾರಾಷ್ಟ್ರದಲ್ಲಿ ಉಪನ್ಯಾಸಕರ ಮನೆಗೆ ಉತ್ತರ ಪತ್ರಿಕೆಗಳನ್ನು ಕಳಿಸಿ ಮೌಲ್ಯಮಾಪನ ಮಾಡಿಸಲಾಗುತ್ತಿದೆ ಅದರಂತೆ ಜಿಲ್ಲಾ ಪದವಿ ಪೂರ್ವ ಉಪನಿರ್ದೇಶಕರ ಮುಖಾಂತರ ಉಪನ್ಯಾಸಕರ ಮನೆಗೆ ಉತ್ತರ ಪತ್ರಿಕೆಗಳನ್ನು ಕಳಿಸಿ ಮೌಲ್ಯಮಾಪನ ಮಾಡಿಸಿ ಪ.ಪೂ. ಇಲಾಖೆಗೆ ಅಂಕಗಳ ಪಟ್ಟಿ ಕಳಿಸಿದರೆ ಒಂದುತಿಂಗಳಲ್ಲಿ ಫಲಿತಾಂಶ ಪ್ರಕಟಿಸಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
೧೪ ಲಕ್ಷ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುತ್ತಿದ್ದಾರೆ ಮೇ ಕೊನೆವಾರದಲ್ಲಿ ಆಯಾ ಶಾಲೆಗಳಲ್ಲಿಯೇ ಪರೀಕ್ಷೆ ನಡೆಸಿ ಆ ಶಿಕ್ಷಕರಿಂದಲೆ ಮೌಲ್ಯಮಾಪನ ಮಾಡಿಸಿ ಫಲಿತಾಂಶ ನೀಡಬಹುದು ಅಥವಾ ಈ ಹಿಂದೆ ನಡೆದ ತಿಂಗಳ ಮತ್ತು ಪ್ರಿಪರೇಟರಿ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಫಲಿತಾಂಶ ನೀಡುವಂತೆ, ೨೦ ಲಕ್ಷದಷ್ಟು ಪದವಿ ವಿದ್ಯಾರ್ಥಿಗಳು ರಾಜ್ಯಾದ್ಯಂತ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆ ಬರೆಯುವರು ಆ ಎಲ್ಲ ವಿರ್ದ್ಯಾಥಿಗಳ ಪರೀಕ್ಷೆ ಜುಲೈವರೆಗೆ ಮುಂದೂಡುವಂತೆ ಅವರು ಒತ್ತಾಯಿಸಿದ್ದಾರೆ.
ಇಂಜಿನಿಯರಿಂಗ್ ಪ್ರವೇಶಕ್ಕಾಗಿ ನಡೆಯಲಿರುವ ಸಿಇಟಿ ಪರೀಕ್ಷೆ ರದ್ದುಪಡಿಸಿ ಹಿಂದಿನಂತೆ ಪಿಯುಸಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸೀಟು ಹಂಚಿಕೆ ಮಾಡುವಂತೆ, ೧೦ ಲಕ್ಷದಷ್ಟು ಪರೀಕ್ಷೆ ಬರೆಯಲಿರುವ ಸ್ನಾತಕೋತ್ತರ ಪದವಿಧರರ ಪರೀಕ್ಷೆ ಜುಲೈವರೆಗೆ ಮುಂದೂಡುವಂತೆ, ಮೆಡಿಕಲ್, ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ವೈದ್ಯಕೀಯ ಮತ್ತು ಪೋಲಿಸ್ ಇಲಾಖೆಯ ಜೊತೆಗೆ ಕಾರ್ಯನಿರ್ವಹಿಸಲು ಸಹಕಾರ ಪಡೆಯಬೇಕು ಎಂದು ಅವರು ಸಲಹೆ ಮಾಡಿದ್ದಾರೆ.
ಕೊರೋನಾ ವೈರಸ್ ವ್ಯಾಪಿಸದಂತೆ ಸರಕಾರ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸತತ ಪ್ರಯತ್ನಿಸುತ್ತಿದೆ ಅದಕ್ಕೆ ಎಲ್ಲರು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.