ಶಹಾಪುರ : – ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಸರಕಾರ ಕೂಡಲೇ ಈಡೇರಿಸಿ ನಮಗೆ ಸೂಕ್ತ ಭದ್ರತೆ ಒದಗಿಸಬೇಕು ಇಲ್ಲದಿದ್ದರೆ ಬೀದಿಗಿಳಿದು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ವಿಶ್ವಾರಾಧ್ಯ ಎಮೋಜಿ ಸರ್ಕಾರಕ್ಕೆ ಒತ್ತಾಯಿಸಿದರು.
ತಾಲ್ಲೂಕು ಪ್ರವಾಸಿ ಮಂದಿರದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ ಹತ್ತಾರು ವರ್ಷಗಳಿಂದ ನಾವು ಕೂಡ ಸಾಮಾಜಿಕ ಸೇವೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದೇವೆ.ಆದರೆ ನಮಗೆ ಯಾವುದೆ ಸೂಕ್ತ ಭದ್ರತೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸರ್ಕಾರಿ ನೌಕರರಿಗೆ ನೀಡಿರುವ ಎಲ್ಲ ಸೌಲಭ್ಯಗಳು ನಮಗೂ ನೀಡಿಬೇಕು ಆರ್ಥಿಕತೆಯ ಜೊತೆಗೆ ಸೇವಾ ಭದ್ರತೆ ನೀಡಿ ಬೋನಸ್ ಹೆಚ್ಚಳ ಸೇರಿದಂತೆ ಹುದ್ದೆಗಳನ್ನು ಕಾಯಂಗೊಳಿಸುವಂತೆ ಆಗ್ರಹಿಸಿದರು.
ಈಗಾಗಲೇ ವಿಭಾಗ ಮಟ್ಟದಲ್ಲಿ ಸಮಿತಿ ರಚಿಸಿ ನಿಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೆಲವು ದಿನಗಳ ಹಿಂದೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದರು.ಆದರೂ ಇನ್ನೂ ಯಾವುದೇ ರೀತಿಯಿಂದ ಕ್ರಮ ಕೈಗೊಂಡಿಲ್ಲ.ಜೊತೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕವಾದ ಸಿಬ್ಬಂದಿಗಳಿಗೆ ಕಳೆದೆರಡು ತಿಂಗಳಿಂದ ವೇತನ ಕೂಡ ನೀಡದೆ ತಡೆಹಿಡಿಯಲಾಗಿದೆ ಇದು ಯಾವ ನ್ಯಾಯ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.ನಮ್ಮ ಬೇಡಿಕೆಗಳ ಪ್ರಸ್ತಾವನೆಯನ್ನು ಮೇಲಾಧಿಕಾರಿ ಗಮನಕ್ಕೆ ಸಲ್ಲಿಸದೇ ಬೇಜವಾಬ್ದಾರಿತನದಿಂದ ಸ್ಥಳೀಯ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಅದರಿಂದ ಮಾನಸಿಕವಾಗಿ ನೊಂದಿದ್ದೇವೆ ಜಾಸ್ತಿ ಮಾತನಾಡಿದರೆ ಕೆಲಸದಿಂದ ಕಿತ್ತೊಗೆಯುವ ಬೆದರಿಕೆ ಕೂಡ ಹಾಕುತ್ತಿದ್ದಾರೆ ಆದ್ದರಿಂದ ಕುಟುಂಬದ ನಿರ್ವಹಣೆ ಮಾಡುವುದು ಬಲು ಕಷ್ಟಕರವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಹೊರಗುತ್ತಿಗೆ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾದ ರಾಚನಗೌಡ,ಡಾ:ವಿ.ಎಂ. ಪಾಟೀಲ್,ಹಾಗೂ ಇತರರು ಉಪಸ್ಥಿತರಿದ್ದರು