ಶಹಾಪುರ (ಗ್ರಾ) : ತಾಲ್ಲೂಕಿನ ಗುಂಡಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರಿಗೆ ಸುಮಾರು ಹದಿನೈದು ವರ್ಷಗಳಿಂದ ಕಾಲುವೆಗೆ ನೀರು ಇಲ್ಲದೆ ತುಂಬಾ ತೊಂದರೆ ಅನುಭವಿಸುತ್ತಿರುವದನ್ನು ಮನಗಂಡು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಆಶ್ರಯದಲ್ಲಿ ಕೆಲವು ದಿನಗಳ ಹಿಂದೆ ಹೋರಾಟ ನಡೆಸಿ ಕಾಲುವೆ ದುರಸ್ತಿಗೊಳಿಸಿ ನೀರು ಹರಿಸುವಂತೆ ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಒತ್ತಾಯಿಸಲಾಗಿತ್ತು.
ಈ ಪ್ರದೇಶದ ಪ್ರಮುಖ ನೀರಾವರಿ ಯೋಜನೆಯಾದ ನಾರಾಯಣಪುರ ಎಡದಂಡೆ ಕಾಲುವೆಯ ಬಹುತೇಕ ವಿತರಣಾ ಕಾಲುವೆಗಳು ಸಂಪೂರ್ಣ ಹದಗೆಟ್ಟು ಜಾಲಿ ಮುಳ್ಳು ಕಂಟಿಗಳು ಬೆಳೆದು ಒಂದು ಹನಿ ನೀರು ಬರದಂತಾಗಿದೆ ಎಂದು ರೈತ ಸಂಘದ ಮುಖಂಡ ಮಹೇಶಗೌಡ ಸುಬೇದಾರ ಹೇಳಿದರು.ರೈತಪರ ಹೋರಾಟಗಾರರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಕೂಡಲೇ ಕೃಷ್ಣ ಭಾಗ್ಯ ಜಲ ನಿಗಮದ ಅಧೀಕ್ಷಕರಾದ ಎನ್.ಡಿ. ಪವಾರ್, ಹಾಗೂ ಕಾರ್ಯ ನಿರ್ವಾಹಕ ಎಂಜಿನಿಯರ್ ರಾಜಶೇಖರ ಮಾಗಾ ಸ್ಥಳಕ್ಕೆ ಆಗಮಿಸಿ ಕಾಲುವೆ ದುರಸ್ತಿ ಮಾಡಿ ಕೆಲವೇ ದಿನಗಳಲ್ಲಿ ಈ ಕಾಲುವೆಗಳ ಮೂಲಕ ರೈತರ ಜಮೀನಿಗೆ ನೀರು ಬಿಡಲಾಗುವುದು ಎಂದು ಭರವಸೆ ನೀಡಿದರು.
ಶಿಥಿಲಾವಸ್ಥೆಯಲ್ಲಿರುವ ಕಾಲುವೆಗಳು ಕೂಡಲೇ ದುರಸ್ತಿ ಮಾಡಬೇಕು ತಾತ್ಕಾಲಿಕವಾಗಿ ದುರಸ್ತಿ ಮಾಡಿ ಕೈತೊಳೆದುಕೊಂಡರೆ ಹಾಗಲ್ಲ ಕೊನೆಯ ಭಾಗದ ರೈತರ ಜಮೀನಿಗೆ ನೀರು ಸಿಗುವಂತಾಗಬೇಕು ಎಂದು ಸ್ಥಳದಲ್ಲಿ ನೆರೆದಿರುವ ರೈತರು ಒಕ್ಕೂರಲಿನಿಂದ ಹೇಳಿದರು.ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಸಂಗಣ್ಣ ಮೂಡಬೂಳ ಬಿ.ಎಸ್. ಪಾಟೀಲ್,ಮಾಳಪ್ಪ ಗುಂಡಳ್ಳಿ ಹಾಗೂ ಗ್ರಾಮದ ರೈತರು ಹಾಜರಿದ್ದರು.