ಕಲಬುರಗಿ: ಸಾರ್ವಜನಿಕರ ಕೋರಿಕೆಯ ಮೇರೆಗೆ ಮೇ-31ರ ಭಾನುವಾರದ ಸಂಪೂರ್ಣ ಲಾಕ್ ಡೌನ್ ಅನ್ನು ರಾಜ್ಯ ಸರ್ಕಾರವು ಮಾರ್ಪಡಿಸಿ ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 7 ಗಂಟೆ ವರೆಗೆ ನಿಷೇಧಾಜ್ಞೆಯಿಂದ ವಿನಾಯಿತಿ ನೀಡಿ ಎಂದಿನಂತೆ ಚಟುವಟಿಕೆ ನಡೆಸಲು ಆದೇಶಿಸಿರುವ ಹಿನ್ನೆಲೆಯಲ್ಲಿ ಕಲಬುರಗಿ ನಗರದಾದ್ಯಂತ ಮೇ-31 ಭಾನುವಾರ (ಬೆಳಿಗ್ಗೆ 7 ರಿಂದ ಸಾಯಂಕಾಲ 7 ಗಂಟೆ) ವರೆಗೆ ನಿಷೇಧಾಜ್ಞೆ ತೆರವುಗೊಳಿಸಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್. ಸತೀಕುಮಾರ ತಿಳಿಸಿದ್ದಾರೆ.
ಕಲಬುರಗಿ ನಗರದಾದ್ಯಂತ ಪ್ರಸ್ತುತ ಜಾರಿಯಲ್ಲಿರುವ ಸಿ.ಆರ್.ಪಿ.ಸಿ. ಕಾಯ್ದೆ-1973ರ ಕಲಂ 144 ರನ್ವಯ ನಿಷೇಧಾಜ್ಞೆಯು ಸಂಜೆ 7 ರಿಂದ ಬೆಳಗಿನ 7 ಗಂಟೆಯವರೆಗೆ ಯಥಾಪ್ರಕಾರ ಮುಂದುವರೆಯಲಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಈ ಆದೇಶವು ಸಾರ್ವಜನಿಕರ ಅಗತ್ಯ ಸೇವೆಗಳಿಗೆ ಅನ್ವಯಿಸುವುದಿಲ್ಲ. ನಿμÉೀಧಾಜ್ಞೆ ಸಂದರ್ಭದಲ್ಲಿ ಸಾಮೂಹಿಕವಾಗಿ ಧಾರ್ಮಿಕ ಮತ್ತು ವೈಯಕ್ತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಗುಂಪು-ಗುಂಪಾಗಿ ಚಲಿಸುವುದು, ಅನಾವಶ್ಯಕವಾಗಿ ಹಾಗೂ ಕಾರಣರಹಿತವಾಗಿ ಸಂಚರಿಸುವಂತಿಲ್ಲ ಮತ್ತು ಈ ಆದೇಶದಿಂದ ಭಯಪಟ್ಟು ಅಗತ್ಯಕ್ಕಿಂತ ಹೆಚ್ಚು ಅವಶ್ಯ ದಾಸ್ತಾನುಗಳನ್ನು ಸಹ ಖರೀದಿಸುವ ಅಗತ್ಯವಿಲ್ಲ ಎಂದು ಅವರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.