ನಮ್ಮ ಸರ್ಕಾರಿ ಹೈಸ್ಕೂಲಿನಲ್ಲಿ ಪ್ರತಿ ವರುಷವೂ ವಾರ್ಷಿಕ ಪರೀಕ್ಷೆಗೆ ಮುನ್ನ ಮೂರು ತಾಸಿನ ನಾಟಕದ ಎರಡು ಪ್ರಯೋಗಗಳು ಖಾಯಂ. ಆಗ ನಮಗೆ ನಾಟಕಗಳೆಂದರೆ ಕಂಪನಿ ಶೈಲಿಯ ವೃತ್ತಿ ನಾಟಕಗಳು ಮಾತ್ರ. ಆಗ ಏನು ಈಗಲೂ ನಮ್ಮೆಲ್ಲ ಹಳ್ಳಿಗಳಲ್ಲಿ ನಾಟಕಗಳೆಂದರೆ ಅವೇ. ಅವರ್ಯಾರೂ ಕಾರಂತ, ಕಾರ್ನಾಡ, ಕಂಬಾರರ ಆಧುನಿಕ ನಾಟಕಗಳನ್ನು ಅಪ್ಪೀ ತಪ್ಪಿಯೂ ಆಡುವುದಿಲ್ಲ.
ನಾನಾಗ ಹತ್ತನೇ ಈಯತ್ತೆ. ಇನ್ನೂ ಪೊಗದಸ್ತಾಗಿ ಮೀಸೆ ಕಪ್ಪೊತ್ತಿರಲಿಲ್ಲ. ನನ್ನ ಧ್ವನಿ ಪೆಟ್ಟಿಗೆ ಗ(0)ಡಸುತನಕ್ಕೆ ಕಾಲಿಡದ ಕಾಲಘಟ್ಟ. ನೋಡಲು ಲಕ್ಷಣವಾಗಿದ್ದೆ. ಮುಖದ ತುಂಬೆಲ್ಲ ತುಂಬಿ ತುಳುಕುವ ಮುಗ್ದತೆಯ ಸ್ನಿಗ್ದಕಳೆ. ಆಗ ನಮ್ಮ ತರಗತಿಯಲ್ಲಿ ಶಂಕರಬಾಯಿ, ಕಸ್ತೂರಬಾಯಿ, ಗುರುಬಾಯಿ.
ಹೀಗೆ ಆರೇಳು ಬಾಯೇರಿದ್ದರೂ ಅವರು ನಾಟಕದಲ್ಲಿ ಅಭಿನಯಿಸಲು ಮನೆಯಿಂದ ಅನುಮತಿ ಸಿಗಲಿಲ್ಲ. ಹೀಗಾಗಿ ನನಗೆ ಮತ್ತು ನನ್ನಷ್ಟೇ ಲಕ್ಷಣವಾಗಿದ್ದ , ಬಾಚಿ ತುರುಬು ಕಟ್ಟುವಷ್ಟು ವೆಗ್ಗಳ ಕೂದಲಿನ ಮಾಲೀಗೌಡರ ಅಶೋಕ ಪಾಟೀಲ… ” ನೀವಿಬ್ಬರೂ ನಾಟಕದಲ್ಲಿ ಹೆಣ್ಣು ಪಾತ್ರ ಮಾಡಬೇಕೆಂದು ” ರಾಮಚಂದ್ರರಾವ್ ಮಾಸ್ತರರು ಆದೇಶ ಕೊಟ್ಟರು. ನಾಟಕದ ಕತೀ ಪೂಜೆ ಮಾಡಿ ದಿನಾಲೂ ತಾಲೀಮು.
ಅದು ಎಚ್. ಎನ್. ಹೂಗಾರರ “ಸುವರ್ಣ” ನಾಟಕ. ಶೋಕಿಲಾಲ ಹೀರೋನನ್ನು ಬಲೆಗೆ ಬೀಳಿಸಿ ಕೊಳ್ಳುವ ನರ್ಸ್ ಪಾತ್ರ ನನ್ನದು. ರಾಮಚಂದ್ರರಾಯ ಮಾಸ್ತರರಿಗೆ ತುಂಬು ಸಲುಗೆಯಲ್ಲಿದ್ದ ಸಿದ್ದಮ್ಮ ಎಂಬುವವರು ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್. ನನ್ನ ಪಾತ್ರಕ್ಕೆ ಜೀವ ತುಂಬಿಸಿಕೊಳ್ಳಲು ತಿಂಗಳ ಪರ್ಯಂತರ ಅವರ ಬಳಿ ನನಗೆ ತರಬೇತಿ. ಅವರ ವೃತ್ತಿ ಹಾಗೂ ಪ್ರವೃತ್ತಿ ಬದುಕಿನ ಒಡನಾಟದಿಂದ ಗಾಢ ಪರಿಣಾಮ ನನ್ನ ಪಾತ್ರದ ಮೇಲೂ ಅಕ್ಷರಶಃ ಬೀರಿತ್ತು.
ಅವರ ಹಾಗೇ ಫೇಷಿಯಲ್ ಎಕ್ಸ್ ಪ್ರೆಶನ್.. ಕಣ್ಣುಗಳಲ್ಲೇ ವಯ್ಯಾರದಿಂದ ಮಾತಾಡೋದು.. ಮಧುರವಾಗಿ ಹಾಡುವುದರಲ್ಲಿ ಪರ್ಫೆಕ್ಟ್ ಆದೆ. ಆದರೆ ನನಗೆ ಡಾನ್ಸ್ ಬರುತ್ತಿರಲಿಲ್ಲ. ತಾಲೀಮಿಗೆ ಬಂದು ಸಿದ್ದಮ್ಮ ಸಿಸ್ಟರ್ ಹಾಡುತ್ತಾ ಡಾನ್ಸ್ ಮಾಡುತ್ತಿದ್ದರೆ ರಾಮಚಂದ್ರರಾವ ಮಾಸ್ತರರು ಸೊಗಸಾಗಿ ಕಾಲು ಪೆಟಿಗೆ (ಹಾರ್ಮೋನಿಯಂ ) ಬಾರಿಸುತ್ತಿದ್ದರು. ನನಗೆ ಡಾನ್ಸ ಬರ್ತಿರಲಿಲ್ಲ. ಆಗ ಪೆಟಿಗೆ ಬಾರಿಸುವುದನ್ನು ಬಿಟ್ಟು ಮಾಸ್ತರರು ನನಗೂ ನಾಲ್ಕು ಬಾರಿಸುತ್ತಿದ್ದರು. ಸಿದ್ದಮ್ಮ ಸಿಸ್ಟರು ” ಅಯ್ಯೋ! ಪಾಪ ಹೊಡಿ ಬೇಡಿ ಪ್ಲೀಜ್ ಎಷ್ಟು ಚೆಂದ ಹಾಡ್ತಾನೆ..” ಎಂದು ಮುದ್ದು ಮಾಡಿ ಡಾನ್ಸ್ ಹೇಳಿ ಕೊಡ್ತಿದ್ರು . ಮೂರು ಹಾಡು. ಅದರಲ್ಲೊಂದು ಹಿಂದೀ ಹಾಡು. ಎರಡು ಡಾನ್ಸ್.
ಇನ್ನೇನು ವಾರ್ಷಿಕ ಪರೀಕ್ಷೆಗಳು ಮೂರೆಂಟು ದಿನ ಬಾಕಿ ಇರುವಾಗ ನಮ್ಮ ನಾಟಕ ಪ್ರದರ್ಶನ. ನನಗೆ ನರ್ಸ್ ಸಿದ್ದಮ್ಮ ಆಂಟಿ ಅವರಿಂದ ಸಖತ್ ಮೇಕಪ್. ತುಂಬಾ ಆಕರ್ಷಕವಾಗಿ ಆ ಕಾಲದ ಹಿಂದೀ ತಾರೆ ಸಾಧನಾ ಕಟಿಂಗ್, ಮೋಹಕ ಪ್ರಸಾಧನ. ಮೇಕಪ್ ಪೂರ್ತಿ ಮುಗಿದ ಮೇಲೆ ಸ್ವತಃ ಸಿದ್ದಮ್ಮನವರೇ ನನಗೆ ನೆದರು ಆದೀತೆಂದು ಲಟಿಗೆ ಮುರಿದು ದೃಷ್ಟಿ ತೆಗೆದರು.
ತಹಶೀಲ್ದಾರರು ನಾಟಕದ ಉದ್ಘಾಟನೆಗೆ ತುಸು ತಡವಾಗಿ ಆಗಮಿಸಿದ್ದರಿಂದ, ನಾಕೈದು ಸೀನುಗಳಾದ ಮೇಲೆ ಸ್ಟೇಜಿನಲ್ಲಿ ಸಮಾರಂಭ. ಅರ್ಧ ತಾಸು ನಾಟಕ ನೋಡಿದ್ದ ತಹಶೀಲ್ದಾರರಿಗೆ ನನ್ನ ನರ್ಸ್ ಪಾತ್ರ ತುಂಬಾ ಹಿಡಿಸಿ ಬಿಟ್ಟಿತ್ತು. ಅವರು ಭಾಷಣ ಮಾಡುತ್ತಾ… ” ನರ್ಸ್ ಪಾತ್ರ ಮಾಡಿದ ಹುಡುಗಿಗೆ ಖಂಡಿತವಾಗಿಯೂ ಶ್ರೇಷ್ಠ ನಟಿಯಾಗುವ ಎಲ್ಲ ಲಕ್ಷಣಗಳಿವೆ. ಆಕೆಗೆ ಉತ್ತಮ ಭವಿಷ್ಯವಿದೆ. ಅವಳ ಅಭಿನಯ ನನಗೆ ತುಂಬಾ ಮೆಚ್ಚುಗೆಯಾಗಿದೆಯೆಂದು ಇಪ್ಪತ್ತೊಂದು ರುಪಾಯಿ ಆಯೇರಿ ಮಾಡಿದ್ದೇನೆ..” ನರ್ಸ್ ಪಾತ್ರ ಮಾಡಿದ ಹುಡುಗಿಯೇ ಬಂದು ಸ್ವೀಕರಿಸಬೇಕೆಂದು ಕರೆದರು.
ನನಗೆ ಜೀವ ಕಜೀಲಾಯ್ತು. ” ನನ್ನನ್ನ ಹುಡುಗಿ ಅಂದುಬಿಟ್ರಲ್ಲ ” ಅಂತ ಅವಮಾನಿತನಾಗಿ ರೊಂಯ್.. ಅಂತ ಅಳ ತೊಡಗಿದೆ. ನನ್ನ ಪ್ರತಿಭೆ ಮೆಚ್ಚಿದ್ದಾರೆಂದು ನನಗರ್ಥವಾಗಲಿಲ್ಲ. ಸ್ಟೇಜಿಗೆ ಹೋಗಿ ಆಯೇರಿ ತಗೋ ಬೇಕು ಅವರು ದೊಡ್ಡವರೆಂದು ರಾಮಚಂದ್ರರಾಯ ಮಾಸ್ತರರು ಪರಿ ಪರಿಯಾಗಿ ಹೇಳಿದರೂ ಕೇಳಲಿಲ್ಲ. ಅಳತೊಡಗಿದೆ. ಮೇಕಪ್ ಎಲ್ಲ ಹಾಳಾಯ್ತು . ಕಡೆಗೆ ಸಿದ್ದಮ್ಮ ಆಂಟಿ ಬಂದು ಸಮಾಧಾನ ಮಾಡಿದ ಮೇಲೆ ಆಯೇರಿ ಪಡೆದೆ. ನಾಟಕ ಮುಂದುವರೀತು.
ನಾಟಕ ನೋಡಿದ ಕೆಲವು ಮರಮಿಂಡ ಹುಡುಗರಿಗೆ ನರ್ಸ್ ಕನಸಲೂ ಕಾಡ ತೊಡಗಿದಳು. ಕೈಗೋ, ಕಣ್ಣಿಗೋ ಸಿಕ್ಕರೆ ಸಾಕು, ಉಕ್ಕಿ ಹರಿಸಿ ಬಿಡಬೇಕೆನ್ನುವ ಹರೆಯದ ಹುಡುಗರು… ಯಾವುದೋ ನೆಪ ಮಾಡಿಕೊಂಡು ನನ್ನ ಬಳಿ ಬರುವುದು ಸಲುಗೆಯಿಂದ ಮಾತಾಡಿಸುವುದು. ಮೈ ಕೈ ಮುಟ್ಟಲು ಯತ್ನಿಸುವುದು. ತುಸು ಮೃದು ಮಾತಿನಲಿ ಹಾಯ್ ಡಾರ್ಲಿಂಗ್ ಎಂದು ಚುಡಾಯಿಸಿದಂತೆ ಫ್ಲರ್ಟಾಗಿ ಮಾತಾಡುತ್ತಾ ನನ್ನೊಳಗೆ ಪರಕಾಯಿಸಿದ ನರ್ಸ್ ಸಾಂಗತ್ಯಕ್ಕೆ ಹಸಿದವರಂತೆ ಆಡುತ್ತಿದ್ದವರಲ್ಲಿ ಅಗ್ರಗಣ್ಯರೆಂದರೆ… ನನ್ನಿಂದ ಮೊನ್ನೆಯಷ್ಚೇ ಬರೆಸಿ ಕೊಂಡ ಕಟ್ಟಕ್ಕರೆಯ ಕುಲಕರ್ಣಿ ಸಾಹೇಬರು ಒಬ್ಬರು.
-ಮಲ್ಲಿಕಾರ್ಜುನ ಕಡಕೋಳ