ಆಳಂದ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಆರಂಭದ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸಿರುವುದರಿಂದ ಆಳಂದ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ನೀಡುವ ಕಾರ್ಯಕ್ಕೆ ಶಾಸಕ ಸುಭಾಷ್ ಆರ್ ಗುತ್ತೇದಾರ ಚಾಲನೆ ನೀಡಿದರು.
ಶುಕ್ರವಾರ ಇಲಾಖೆಯ ಕಚೇರಿಯಲ್ಲಿ ಬಿತ್ತನೆ ಬೀಜ ವಿತರಿಸಿ ಮಾತನಾಡಿದ ಅವರು, ಈಗಾಗಲೇ ರೋಹಿಣಿ ಮಳೆ ತಾಲೂಕಿನಲ್ಲಿ ಪ್ರವೇಶ ಮಾಡಿದ್ದು ಮುಂದಿನ ದಿನಗಳಲ್ಲಿಯೂ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ ಆದ್ದರಿಂದ ರೈತರು ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಬೇಕು ಎಂದು ಹೇಳಿದರು.
ಒಂದೆರಡು ದಿನಗಳಲ್ಲಿ ಬಿತ್ತನೆ ಕಾರ್ಯ ತಾಲೂಕಿನಲ್ಲಿ ಆರಂಭಗೊಳ್ಳಲಿದೆ ಎಲ್ಲ ರೈತರಿಗೂ ಅನುಕೂಲವಾಗುವಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಕೊರೊನಾ ಸಂದರ್ಭದಲ್ಲಿಯೂ ಸರ್ಕಾರ ರೈತರ ಬೆನ್ನಿಗೆ ನಿಂತಿದೆ ಮುಂದೆಯೂ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಲಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾವ ಮಲಾಜಿ, ಕೃಷಿ ಇಲಾಖೆಯ ಶರಣಗೌಡ ಪಾಟೀಲ, ತಹಸೀಲದಾರ ದಯಾನಂದ ಪಾಟೀಲ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸಂಜಯರೆಡ್ಡಿ ಮುಖಂಡ ಮಲ್ಲಣ್ಣ ನಾಗೂರೆ ಸೇರಿದಂತೆ ಇತರರು ಇದ್ದರು.