ಕಲಬುರಗಿ: ಈ ಊರಲ್ಲಿ ಕಾಲಿಡುವುದೇ ತಡ, ಖಾಲಿ ಕೊಡಗಳ ರುದ್ರ ತಾಂಡವ, ಜನಗಳ ಹಾರಾಟ, ಚೀರಾಟದ ನರ್ತನಗಳದ್ದೇ ಕಾರುಬಾರು!
ಅಂದಂತೆ ಈ ಊರಿನ ಸಾರ್ವಜನಿಕರು ಇತ್ತೀಚಿಗೆ ಬೆಳಗ್ಗೆ ಎದ್ದಕೂಡಲೇ ನೀರಿಗಾಗಿ ಕೊಡ ತೆಗೆದುಕೊಂಡು ಕುಡಿವ ನೀರಿಗಾಗಿ ಅಂಡಲೆಯುವ ಪರಿಸ್ಥಿತಿ ಉಂಟಾಗಿದೆ.
ಜಿಲ್ಲಾ ಕೇಂದ್ರದಿಂದ ಕೇವಲ 40 ಕಿ.ಮೀ. ದೂರ ಇರುವ ಈ ಗ್ರಾಮಕ್ಕೆ ಕಳೆದ ಒಂದು ತಿಂಗಳಿಂದ ನೀರಿನ ಅಭಾವ ಉಂಟಾಗಿದೆ.
ಕಳೆದ ಒಂದು ತಿಂಗಳಿಂದ ಗ್ರಾಮದಲ್ಲಿ ಕುಡಿವ ನೀರಿನ ತೊಂದರೆ ಉಂಟಾಗಿದೆ. ಈಗಾಗಲೇ ಡಿಸಿ, ಸಿಎಸ್ ಅವರಿಗೆ ಮನವಿ ನೀಡಲಾಗಿದೆ. ಪಿಡಿಒ ಅವರಿಗೆ ಕೇಳಿದರೆ ನೋಡೋಣ, ಮಾಡೋಣ ಎಂದು ಹಾರಿಕೆ ಉತ್ತರ ಕೊಡುತ್ತಿದ್ದಾರೆ.
– ಭೀಮಾಶಂಕರ ಮಾಡ್ಯಾಳ, ವಕೀಲರು
ಹೌದು ಇದು ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದ ಕುಡಿವ ನೀರಿನ ಕಥೆ. 1200 ಜನಸಂಖ್ಯೆ ಇರುವ ಈ ಗ್ರಾಮಕ್ಕೆ ಗ್ರಾಪಂ ವತಿಯಿಂದ ಈ ಮುಂಚೆ 5 ದಿನಕ್ಕೊಮ್ಮೆ ನಳದ ನೀರು ಪೂರೈಸಲಾಗುತ್ತಿತ್ತು. ಆದರೆ ಇದೀಗ 2-3 ಕೊಡ ಮಾತ್ರ ಬರುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಕುಡಿಯುವ ನೀರು ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಹೀಗಾಗಿ ಪ್ರತಿಯೊಂದು ಕುಟುಂಬದಿಂದ ಇಬ್ಬರು ನೀರು ತರಲು ನಿತ್ಯ ಬಿಸಿಲಲ್ಲಿ ಬಾವಿ, ಬಾವಿ ತಿರುಗಾಡುವಂತಾಗಿದೆ.
ಜಿಪಂ ಸಿಇಒ ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೊಟ್ಟಿರುವ ಸಂಖ್ಯೆಗಳಿಗೆ ಫೋನ್ ಮಾಡಿದರೆ ಫೋನ್ ಸ್ವೀಕರಿಸುವವರು ಕೇವಲ ದೂರು ಸ್ವೀಕರಿಸುತ್ತಾರೆ ಮಾತ್ರ.
ಪಿಡಿಒ ಅವರನ್ನು ಕೇಳಿದರೆ ನೋಡೋಣ, ಮಾಡೋಣ ಎಂದು ಹೇಳುತ್ತಿದ್ದಾರೆ ವಿನಃ ಯಾರೊಬ್ಬರೂ ನೀರಿನ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಇದು ಕೇವಲ ಮಾಡ್ಯಾಳ ಗ್ರಾಮದ ಕಥೆ ಮಾತ್ರ ಆಗಿರದೆ ಜಿಲ್ಲೆಯ ಬಹುತೇಕ ಗ್ರಾಮಗಳ ಕಥೆಯಾಗಿದೆ.