ಅಪ್ಪನ ಸ್ಮರಣೆಯೆ ಒಂದು ತಂಗಾಳಿ

0
255

ಪ್ರತಿಯೊಂದು ಹೆಣ್ಣಿಗೆ ಅಪ್ಪ ಅಂದರೆ ಆಕಾಶ,ಅಪ್ಪ ಅಂದರೆ ಧೈರ್ಯ, ಅಪ್ಪ ಅಂದರೆ ತ್ಯಾಗ,ಅಪ್ಪ ಅಂದರೆ ನೆಮ್ಮದಿ, ಅಪ್ಪ ಅಂದರೆ ಸಾಂತ್ವನ,ಅಪ್ಪ ಅಂದರೆ ಬೆನ್ನೆಲುಬು,ಅಪ್ಪ ಅಂದರೆ ಸ್ನೇಹಿತ, ನಾವು ಹೆಣ್ಣು ಮಕ್ಕಳು ನಮ್ಮ ಅಪ್ಪನನ್ನು ಪ್ರೀತಿಸಿದಷ್ಟು ಈ ಜಗತ್ತಿನಲ್ಲಿ ಇನ್ನಾರಿಗೂ ಪ್ರೀತಿಸುವುದಿಲ್ಲ*.

ಅಪ್ಪನೇ ಪ್ರತಿಯೊಂದು ಹೆಣ್ಣಿನ ಮೊದಲ ಹೀರೋ,ಮೋದಲ,ಆಪ್ತ ಗೆಳೆಯ ಆಗಿರುತ್ತಾರೆ.ಅಪ್ಪಂದಿರು ಸಹ ತನ್ನ ಗಂಡು ಮಕ್ಕಳಿಗಿಂತ ಹೆಚ್ಚಾಗಿ ತನ್ನ ಹೆಣ್ಣು ಮಕ್ಕಳನ್ನು ಪ್ರೀತಿಸುತ್ತಾರೆ ಎನ್ನುವುದು ಸುಳ್ಳಲ್ಲ.

Contact Your\'s Advertisement; 9902492681

ಹೆಣ್ಣಿನ ಪಾಲಿಗೆ ಅಪ್ಪ ಅಮ್ಮ ಇಲ್ಲದ ತವರೂರು ಆತ್ಮವಿಲ್ಲದ ದೇಹದಂತೆಹೆಣ್ಣಿನ ಜೀವನದಲ್ಲಿ ಅಪ್ಪನ ಪಾತ್ರದ ಕುರಿತು ವರ್ಣಿಸಲು ಅಸಾಧ್ಯ. ಅಪ್ಪನ ಕೈ ಬೆರಳು ಹಿಡಿದು ನಡೆಯುವುದು, ಆತನ ಭುಜದ ಮೇಲೆ ಕುಳಿತುಕೊಳ್ಳುವುದು,ಬಾಲ್ಯದಲ್ಲಿ ಅಪ್ಪನ ಜತೆಗೆ ರಚ್ಚೆ ಹಿಡಿದು ಹಟ ಮಾಡಿ ಅತ್ತು ಕರೆದು ತಾನು ಇಷ್ಟ ಪಟ್ಟ ತಿಂಡಿ,ಚಿಕ್ಕ ಪುಟ್ಟ ವಸ್ತುಗಳು ಪಡೆಯುವುದು, ಅಪ್ಪನ ಜತೆಗೆ ಮಾತನಾಡುವುದು, ಅವನ ಜತೆಗೆ ಸಮಯ ಕಳೆಯುವುದು ಪ್ರತಿಯೊಬ್ಬರು ಹಂಬಲಿಸುತ್ತಾರೆ.ಆದರೆ  ಕೆಲವು ನತದೃಷ್ಟರ ಪಾಲಿಗೆ ಆ ಭಾಗ್ಯ ಇರುವುದಿಲ್ಲ ,

ಅಂತಹ ನತದೃಷ್ಟಳ ಗುಂಪಿಗೆ ನಾನು ಸೆರಿದವಳು.ನಾನು ಇನ್ನು ನನ್ನ ಅಮ್ಮನ ಒಡಲಲ್ಲಿ ಇರುವಾಗಲೇ ನನ್ನ ಅಪ್ಪ ತನ್ನ 27ವಯಸ್ಸಿನಲ್ಲಿಯೆ ಈ ಲೋಕ ತ್ಯಜಿಸಿದರು.ಪ್ರತಿಯೊಂದು ಹೆಣ್ಣು ತನ್ನ ಅಪ್ಪನ ಮುಖ ನೋಡಲು ಹಂಬಲಿಸುತ್ತಾಳೇ ಆದರೆ ಆ ಅದೃಷ್ಟ ನನ್ನ ಪಾಲಿಗೆ ಇರಲೇ ಇಲ್ಲ.

ಒಂದು ಕಡೇ ನನ್ನಪ್ಪ ಮರಣ ಹೊಂದಿದ್ದರು, ಮತ್ತೊಂದು ಕಡೆ ನನ್ನಮ್ಮ ಕುಸಿದು ಬಿದ್ದಿದರು,ಮಗದೊಂದು ಕಡೆ ನನ್ನ ಸಂಬಂಧಿಕರಲ್ಲಿ ಕೆಲವರು ಇವಳು ಒಡಲಲ್ಲಿ ಮೂಡಿದ ಮೇಲೆಯೇ ಇವರಪ್ಪ ಸತ್ತಿದ್ದು. ಇವಳೇ ಶನಿ ಇದ್ದಾಳೆ ಎಂದು ನನ್ನನ್ನು ಮೂದಲಿಸುತ್ತಿದ್ದರು.ಆದರೆ ಇವೆಲ್ಲವೂ ಏನು ಅಂತ ನನಗೆ ಗೊತ್ತೆ ಇರಲಿಲ್ಲ. ನನ್ನಮ್ಮ ನನ್ನ ಜತೆಗೆ ನಿಂತಿದ್ದು, ಇವತ್ತಿಗೂ ನನ್ನ ಒಳಿತಿಗಾಗಿ ಮಾತ್ರ ಹಂಬಲಿಸುವ,ದುಡಿಯುವ ನನ್ನ ಅಮ್ಮನ ಬಗ್ಗೆ ನನಗೆ ಹೆಮ್ಮೆ ಆಗುತ್ತದೆ. ಅವಳೆಂದರೆ ನನ್ನ ಪ್ರಾಣ

ನನ್ನಮ್ಮ ನನ್ನ ಬಾಲ್ಯದ ವಿಧ್ಯಾಭ್ಯಾಸ ಗುಲಬರ್ಗಾದಲ್ಲಿ ಮಾಡಿಸುವ ನಿರ್ಧಾರ ತೆಗೆದುಕೊಂಡು ನಮ್ಮ ಮಾಮನ ಮನೆಯಲ್ಲಿ ನನ್ನನ್ನು ಬಿಡುತ್ತಾರೆ.1ರಿಂದ ಪಿಯುಸಿ ವರೆಗೆ ನಾನು ಓದಿದ್ದು ಕಲಬುರ್ಗಿಯಲ್ಲೇ.ಅಲ್ಲಿ ನನ್ನ ಮಾಮ ವಿಶೇಷ ಮುತುವರ್ಜಿ ವಹಿಸಿ, ಗುಬ್ಬಚ್ಚಿಯಂತೆ ನನ್ನನ್ನು ಪೋಷಿಸುತ್ತಾರೆ,ಕಾಪಾಡುತ್ತಾರೆ.ಇಂದಿಗೂ ನನ್ನ ಪ್ರತಿಯೊಂದು ಕಾರ್ಯಕ್ಕೆ ನನ್ನ ಬೆನ್ನು ತಟ್ಟಿ ಖುಷಿ ಪಡುತ್ತಾರೆ ನನ್ನ ಮಾಮ.

ಎಷ್ಟೇ ಶ್ರೀಮಂತ ಮನೆತನದಲ್ಲಿ ಹೆಣ್ಣು ಮಗು ಜನಿಸಿದರು.ಅಪ್ಪ ಇಲ್ಲ ಅಂದರೆ ಅವಳ ಬದುಕು ಸದಾ ಅತಂತ್ರ*  ಮತ್ತು ಭಯಮಿಶ್ರಿತವಾಗಿಯೇ ಸಾಗುತ್ತದೆ. ನನ್ನ ಬಾಲ್ಯದ ಬದುಕು ಇದಕ್ಕೆ ಹೊರತ್ತಲ್ಲ*

ನಾನು ಬಾಲ್ಯದಲ್ಲಿ ಜಾಣ ವಿಧ್ಯಾರ್ಥಿನಿ ಆಗಿದ್ದೆ.ಪ್ರತಿ ವರ್ಷ ನಮ್ಮ ತರಗತಿಯಲ್ಲಿ ನಾನೆ ಫಸ್ಟ್ ಬರುತ್ತಿದ್ದೆ. ನನ್ನಂತೆ ಯಾವ ಹೆಣ್ಣು ತನ್ನ ಬಾಲ್ಯದಲ್ಲಿಯೇ ತನ್ನ ಅಪ್ಪನನ್ನು ಕಳೆದುಕೊಳ್ಳಬಾರದು,ಅವರ ಅಕಾಲಿಕ ಮರಣ ತಪ್ಪಿಸಬೇಕೆಂದು ನನಗೆ ಅರಿವು ಬಂದಾಗ ನಾನು

ವಕೀಲ ವೃತ್ತಿಗೆ ಸೇರಿಕೊಳ್ಳಬೇಕು ಕರಿ ಕೋಟು ತೊಟ್ಟು ಬಡವರಿಗೆ ನ್ಯಾಯ ದೊರಕಿಸಿ ಕೊಡಬೇಕು  ಎಂಬ ಕನಸು ಕಟ್ಟಿದೆ. ಪಠ್ಯ ಪುಸ್ತಕಗಳೆ ನನ್ನ ಆಪ್ತ ಸಂಗಾತಿಯಾಗಿದ್ದವು,

ಆದರೆ ನನ್ನ ಅಮ್ಮನ ಆಲೋಚನೆಯೇ ಬೇರೆ ಆಗಿತ್ತು. ಬೇಗನೆ ಇವಳ ಮದುವೆ ಮಾಡಿದರೆ ಇವಳ ಬದುಕು ಹಸನಾಗಬಹದು ಎಂಬ ಸದಾಶಯದಿಂದ ನನ್ನ ಮದುವೆ ಮಾಡಲು ದೃಢವಾದ ನಿರ್ಧಾರ ತೆಗೆದುಕೊಳ್ಳುತ್ತಾರೆ.ಈ ವಿಷಯ ನನಗೆ ಗೊತ್ತಾದಾಗ ಬರಸಿಡಿಲು ಬಡಿದಂತಾಗಿತ್ತು.ಅಮ್ಮನ ನಿರ್ಧಾರಕ್ಕೆ ವಿರೋಧಿಸುವ ಶಕ್ತಿ ಮತ್ತು,ಪರಸ್ಥಿತಿ ನನ್ನಲ್ಲಿ ಇದ್ದಿಲ್ಲ.

ಅಮ್ಮನ ಪ್ರೀತಿ, ಅವಳ ತ್ಯಾಗ, ಅವಳ ದುಡಿಮೆ ಪ್ರತಿರೋಧ ಒಡ್ಡದಂತೆ ನನ್ನನ್ನು ಕಟ್ಟಿ ಹಾಕುತ್ತದೆ.

ಅಮ್ಮನ ಮಾತಿಗೆ ಅನಿವಾರ್ಯವಾಗಿ ತಲೆದೂಗಿ ಮದುವೆಗೆ ಒಪ್ಪಿಕೊಂಡು ಮದುವೆ ಆದೆ.ಇವತ್ತು ನನಗೆ ಮೂರು ಮಕ್ಕಳು ಹೊಂದಿರುವ ಸುಖವಾದ ಸಂಸಾರ ಇದೆ.

ನನ್ನಪ್ಪ ಇದಿದ್ದರೆ ನಾನು ಖಂಡಿತಾ ನನ್ನ ಕನಸಿಗೆ ರೆಕ್ಕೆ ಕಟ್ಟಿಕೊಂಡು ಹಾರಬಹುದಿತ್ತು .ಇದು ನನ್ನ ಖಚಿತ ನಂಬಿಕೆ,ಅಭಿಪ್ರಾಯ ಆಗಿದೆ. ನನ್ನಪ್ಪನ ಮುಖವೇ ನಾನು ನೋಡಲಿಲ್ಲ. ನನಗೆ ಅರಿವು ಬಂದಾಗ ಪಟದಲ್ಲಿ ಮಾತ್ರ ನನ್ನಪ್ಪನನ್ನ ನೋಡಿದ್ದು ಅಮ್ಮನ,ಸಂಬಂಧಿಕರ,ಅವರಿವರ ಬಾಯಿಂದ ನನ್ನ ಅಪ್ಪನ ಬಗ್ಗೆ ಕೇಳಿದ್ದು. ಆ ಕಾಲಾದಲ್ಲಿಯೆ ನನ್ನಪ್ಪ ರಾಜಕೀಯ ಮುತ್ಸದ್ದಿ ಆಗಿದ್ದರಂತೆ. ಬಡವರನ್ನು ಕಂಡರೆ ಮಮ್ಮಲ ಮರುಗುತ್ತಿದ್ದರು’ ನಂದಿ ಶರಣಪ್ಪ ಇದ್ದಿದ್ರೆ ಇವತ್ತು ಬಡವರ ಬಂಧು ಆಗಿ ಇರುತ್ತಿದ್ದ ,  ಅಂತ ನಮ್ಮ ಗ್ರಾಮದವರು ಕುಟುಂಬದವರು ಹೇಳುವಾಗ ನನಗೆ ನನ್ನಪ್ಪನ ಬಗ್ಗೆ  ಹೆಮ್ಮೆ ಮತ್ತು ಸಂತೋಷ ಆಗಿ ಕಣ್ಣಂಚಿನಲ್ಲಿ ನೀರು ಬರುತ್ತವೆ.

ಅಪ್ಪ ದೈಹಿಕವಾಗಿ ನನ್ನ ಜತೆಗೆ ಇಲ್ಲದೇ ಇರಬಹುದು, ಆದರೆ ಮಾನಸಿಕವಾಗಿ ಅವರು  ನನ್ನ ಜತೆಗೆ ಇದ್ದಾರೆ ಮತ್ತು ಈ ದೇಹದಲ್ಲಿ ಉಸಿರು ಇರುವತನಕ ಎಂದೆಂದಿಗೂ ಇರುತ್ತಾರೆ. ಇಂದಿಗೂ ಅನುದಿನವೂ ನನ್ನ ಅಪ್ಪನ ಸ್ಮರಣೆಯಿಂದಲೆ ನನ್ನ ದಿನಚರಿ ಆರಂಭವಾಗುತ್ತದೆ.ಅಪ್ಪನ ನೆನಪಾದಾಗಲೆಲ್ಲ ಅವರಿವರು ಅವರ ಬಗ್ಗೆ ಹೇಳಿದ ಮಾತುಗಳು ಜ್ಞಾನಪಿಕೊಂಡು  ಖುಷಿ ಪಡುತ್ತೇನೆ.ಮರುಕ್ಷಣವೇ ನನಗರಿವಿಲ್ಲದೆ ದುಃಖ ಉಮ್ಮಳಿಸಿ ಬರುತ್ತದೆ.

ನನ್ನ ಜೀವನ ಹಸನುಗೊಳಿಸಲು ತನ್ನ ಇಡೀ ಬದುಕು ಸವೆಸಿದ ನನ್ನಮ್ಮ ಬಗ್ಗೆ ನನಗೆ ಅಪಾರ ಹೆಮ್ಮೆ, ಗೌರವ,ಪ್ರೀತಿ ಇದೆ.ನನ್ನಮ್ಮ ನಿಜಕ್ಕೂ ತ್ಯಾಗಮೂರ್ತಿ.ಅವಳು ಇಚ್ಛಿಸಿದರೆ ನನ್ನನ್ನು ತೊರೆದು ಹೋಗಬಹುದಿತ್ತು.ಆದರೆ ನನ್ನಮ್ಮ ನನಗೋಸ್ಕರ ಬದುಕಲು ನಿರ್ಧಾರ ಕೈಗೊಂಡು ತನ್ನ ಇಡೀ ಜೀವನ ತ್ಯಾಗ ಮಾಡ್ತಾಳೆ.ಇಂತಹ ಅಮ್ಮ ಪಡೆದ ನಾನು ನಿಜಕ್ಕೂ ಅದೃಷ್ಟವಂತೆ.ನನ್ನ ಜೀವನ ರೂಪಿಸಲು ಅನೇಕರು ಶ್ರಮಿಸಿದ್ದಾರೆ.

ಇವತ್ತು ಅಪ್ಪಂದಿರ ದಿನ,ನನಗೆ ಅನುದಿನವೂ ಅಪ್ಪನ ದಿನವೇ, ಅವರ ಸ್ಮರಣೆಯೆ ಒಂದು ತಂಗಾಳಿ, ಅವರ ನೆನಪೆ ನಂಗೊಂದು ದೈರ್ಯ, ಸಾಂತ್ವನ,ನೆಮ್ಮದಿ.ನನ್ನ ಆತ್ಮದ ಒಂದು ತುಣುಕು ನನ್ನ ಅಪ್ಪನ ಜತೆಗೆ ಹೊಗಿದೆ* .ಇನ್ನೊಂದು ತುಣಿಕಿನಲ್ಲಿ ನನ್ನ ಅಪ್ಪ ಯಾವತ್ತೂ ಹಚ್ಚಹಸಿರಾಗಿಯೇ ಇದ್ದಾರೆ .

ಅಪ್ಪ,

ನನಗೆ ಪುನರಜನ್ಮದಲ್ಲಿ ಒಂಚೂರು ನಂಬಿಕೆ ಇಲ್ಲ. ಇನ್ನೊಂದು ಜನ್ಮ ಅಂತ ಇದ್ದರೆ ನಿನ್ನ ಮಗಳಾಗಿಯೇ ಹುಟ್ಟಿಸೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೆನೆ.ಜತೆಗೆ ನಾನು ಒಡಲಲ್ಲಿ ಇರುವಾಗಲೋ ಅಥವಾ ಬಾಲ್ಯದಲ್ಲೋ ನನ್ನಪ್ಪನನ್ನ ನನ್ನಿಂದ ನೀನು ಕಿತ್ತುಕೊಳ್ಳುವುದಾದರೆ ಅಂತಹ ಜನನ ನನಗೆ ಬೇಡವೇ ಬೇಡ ಎಂದು ದೇವರಲ್ಲಿ ಪಾರ್ಥಿಸುತ್ತೇನೆ.ಮುಂದಿನ ಜನ್ಮದಲ್ಲಾದರೂ ನಿನ್ನ ಜತೆಗೆ ಬಾಲ್ಯದಲ್ಲಿ ಆಟ ಆಡುವ,ನಿನ್ನ ಜತೆಗೆ ಹಟ ಮಾಡುವ,ನಿನ್ನ ಕೈಬೆರಳು ಹಿಡಿದು ನಡೆಯುವ, ನಿನ್ನ ಭುಜದ ಮೇಲೆ ಕೂತು ಊರೆಲ್ಲಾ ಸುತ್ತಾಡುವ  ಹಕ್ಕಿನಿಂದ ನನ್ನನ್ನು ವಂಚಿತ ಮಾಡಬೇಡಪ್ಪ, ಪ್ಲೀಜ್.ನನ್ನ ಜೀವನದಲ್ಲಿ ನಿನ್ನ ಸ್ಥಾನವನ್ನು ತುಂಬಲು ಯಾರಿಂದಲೂ  ಸಾಧ್ಯವಿಲ್ಲ

ಪ್ರತಿಯೊಂದು ಹೆಣ್ಣಿಗೆ ತನ್ನ ಅಪ್ಪನಿಲ್ಲದ ಜಗತ್ತು ಶೂನ್ಯ ಎಂದೆನಿಸುತ್ತದೆ.ಈ ಪುರುಷ ಪ್ರಧಾನ ಸಮಾಜದಲ್ಲಿ ಅಪ್ಪನಿಲ್ಲದ ಬದುಕು ಎಷ್ಟು ಕಷ್ಟ ಅಂತ ಅನುಭವಿಸಿದವರಿಗೆ ಮಾತ್ರ ಗೊತ್ತು.ದೇವರೆ ಮಕ್ಕಳಿಂದ ಅವರಪ್ಪನನ್ನ ಕಿತ್ತುಕೊಳ್ಳಬೇಡ.ನಿನಗೆ ಸಾವಿನ ಹಸಿವಿದ್ದರೆ ಬೇಕಾದರೆ ಮಕ್ಕಳನ್ನೆ ಕಿತ್ತಿಕೋ.ಅವರಿಂದ ಅವರ ತಂದೆಯನ್ನು ಮಾತ್ರ ಕಿತ್ತುಕೊಳ್ಳಬೇಡ. ಪುರೋಹಿತರ ಬಂಧಿಯಾಗಿರುವ ನಿನಗೆ ಅನಾಥ ಮಕ್ಕಳ ಕೂಗು  ತಲುಪಲು ಅಸಾಧ್ಯ ಬೀಡು.

*I love you dad miss you always* *happy fathers day*

– ಮೇನಕಾ ಪಾಟೀಲ್.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here