ಭಾಗ-7: ಯಡ್ರಾಮಿ : ಗ್ರಾಮ ಭಾರತದ  ಕಣ್ಮರೆ

0
156

ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳನ್ನು ಟೀವಿಗಳಲ್ಲಿ ನೋಡುತ್ತಲಿದ್ದೆ. ಸಮೀಕ್ಷಾ ಸಂಸ್ಥೆಗಳ ಸಮೀಕ್ಷೆಗಳನ್ನು ನೆಪವಾಗಿಟ್ಟುಕೊಂಡು ನಮ್ಮ ಟೀವಿ ನಿರೂಪಕರು ಕೈಗಂಟು ಹಾಕಿ ಕೊರೆಯುವುದನ್ನು ಸಹಿಸಿಕೊಳ್ಳುವ ಕನ್ನಡಿಗರು, ಅದರಲ್ಲೂ ಹೈ.ಕ. ಕನ್ನಡಿಗರಾದ ನಾವು ಮೊದಲ ಸಾಲಿನವರಲ್ಲವೇ ?

ಒಂದು ಟೀವಿಯಲ್ಲಂತೂ ತಾಸುಗಟ್ಟಲೇ ಕವಡೆ ಶಾಸ್ತ್ರ , ಗಿಣಿಶಾಸ್ತ್ರ , ಮುಂದುವರೆದು ಇಲಿಶಾಸ್ತ್ರದ ಸಮೀಕ್ಷೆ ನಡೆಸಿದುದು… ಮಾಧ್ಯಮಗಳು ತಲುಪಿರುವ ಮಾನಸಿಕ ದಿವಾಳಿತನದ ದ್ಯೋತಕದಂತಿತ್ತು.

Contact Your\'s Advertisement; 9902492681

ಎಕ್ಸಟ್ ಪೋಲ್ ಸಮೀಕ್ಷೆಗಳಾಧಾರಿತ ಸೋಲು ಗೆಲುವುಗಳನ್ನು ” ಅಧಿಕೃತ ” ಘೋಷಣೆಗಳಂತೆ ಅಂಕಿ ಅಂಶಗಳ ಸಮೇತ ಕಿರುಚುವುದನ್ನು ಕೇಳುತ್ತಾ ನೋಡುತ್ತಿದ್ದರೆ ಇಪ್ಪತ್ಮೂರರ ಮತ ಎಣಿಕೆಯೇ ಅಗತ್ಯವಿಲ್ಲ ಎನ್ನುವಂತಿದೆ. ಹೀಗೆ ಸೋಲು ಗೆಲುವುಗಳ ನಿರ್ಧಾರ ಮತ್ತು ಅಧಿಕೃತ ಧ್ವನಿ ಭಾಷೆಯಲ್ಲಿ ಘೋಷಣಾತ್ಮಕವಾಗಿ ಎಂಬಂತೆ ಚರ್ಚಿಸುತ್ತಿರುವುದು ಸಂವಿಧಾನ ಬದ್ದ ಪ್ರಜಾ ಸತ್ತಾತ್ಮಕ ವ್ಯವಸ್ಥೆಗೆ ಒಂದರ್ಥದ ಅಣಕದಂತಿತ್ತು.

ಅಷ್ಟಕ್ಕು ಮಾಧ್ಯಮಗಳಲ್ಲಿ ಬರುವುದೆಲ್ಲವೂ ಸತ್ಯವಲ್ಲ ಎಂಬ ಸತ್ಯ ಗೊತ್ತಾದ ಮೇಲೂ ಮತ್ತೆ ಮತ್ತೆ ನಾವು ಮಾಧ್ಯಮಗಳನ್ನು ಅವಲಂಬಿಸುವುದು ಅನಿವಾರ್ಯ. ಅದೊಂದು ಬಗೆಯ ಅಸಹಾಯಕತೆ. ನಮಗೆ ಸಾಮಾಜಿಕ ಜಾಲತಾಣಗಳಲ್ಲಾದರೂ ನಿಖರ ಮತ್ತು ನಿಜದ ನೆಲೆಯ ಸುದ್ದಿಗಳು ಸಿಕ್ಕಾವೆಂದು ಕೊಂಡರೆ ಅವು ಕೂಡಾ ಅರೆಬೆಂದ, ಅತಿರಂಜಿತ ಇಲ್ಲವೇ ರಾಜಕೀಯಪಕ್ಷ ಪ್ರೇರಿತ ಪೇಡ್ ನ್ಯೂಜ್ ಗಳಂತಾಗಿರುವುದು ಸಾಮಾಜಿಕ ದುರಂತವೇ ಸೈ. ಇನ್ನು ಸಮೀಕ್ಷಾ ಸಂಸ್ಥೆಗಳ ಹಣೆಬರಹ ಇದಕ್ಕೆ ಹೊರತೇನಲ್ಲ ಅಲ್ಲವೇ ?

ಅಷ್ಟಕ್ಕು ಯಾರೇ ಗೆಲ್ಲಲಿ, ಸೋಲಲಿ ಎಂಬ ಸಿನಿಕತನವೂ ನನ್ನದಲ್ಲ. ಯಡ್ರಾಮಿಯಂಥ ಸಹಸ್ರಾರು ಮತದಾರರಿರುವ ನೂತನ ತಾಲೂಕಿನ ಎರಡನೇ ಚುನಾವಣೆ ಇದು. ವರುಷ ಕಳೆಯುವ ಕಡೇ ಗಳಿಗೆಯಲ್ಲಿ ತಹಶೀಲ್ದಾರರ ಪೋಸ್ಟಿಂಗ್ ಆಗಿರುವುದೊಂದೇ ಸಣ್ಣ ಸಮಾಧಾನ. ತಾಲೂಕು ಪೂರ್ವದ ಮತ್ತು ಈಗಿನ ಅಭಿವೃದ್ದಿ ಕುರಿತು ಚರ್ಚಿಸುವುದು ರಾಜಕೀಯೇತರವಾಗಿದ್ದರೆ ಆರೋಗ್ಯಕರ.

ಸ್ವಾತಂತ್ರ್ಯೋತ್ತರ ಭಾರತದ ಅದರಲ್ಲೂ ಯಡ್ರಾಮಿಯಂತಹ ಹೈ.ಕ.ದ ನಮ್ಮೆಲ್ಲ ಹಳ್ಳಿಗಳು ದಕ್ಷಿಣ ಕರ್ನಾಟಕದ ಹಳ್ಳಿಗಳಿಗಿಂತ ಎಲ್ಲ ವಿಷಯಗಳಲ್ಲೂ ಕನಿಷ್ಠ ಮೂವತ್ತು ವರುಷಗಳಷ್ಟು ಹಿಂದೆ ಬಿದ್ದಿವೆ. ನಾವು ಅವರನ್ನು ತಲುಪುವಷ್ಟರಲ್ಲಿ ಅವರು ನಮಗಿಂತ ಮತ್ತೆ ಮತ್ತೆ ಮುಂದೆ ಹೋಗುತ್ತಲೇ ಇರುತ್ತಾರೆ.

ಕೃಷ್ಣೆ ಹರಿದು ಇಪ್ಪತ್ತೈದು ವರುಷಗಳಾದರೂ , 371 ಜೆ ಲಾಗೂ ಆದರೂ ಮಾನವ ಅಭಿವೃದ್ದಿ ಪ್ರಗತಿಯಲ್ಲಿ ನಾವು ಅತ್ಯಂತ ಹಿಂದಿರುವುದು ದಿಟ. ಆರೇಳು ಜಿಲ್ಲೆಗಳುದ್ದಕ್ಕೂ ಹರಿದಾಡುವ ಕೃಷ್ಣೆ , ತುಂಗಭದ್ರೆಯರು ನಮಗೆ ” ಜೀವನದಿ ” ಗಳಾಗುವುದು ಯಾವಾಗ..? ನಮ್ಮ ಜನ ಪ್ರತಿನಿಧಿ ರಾಜಕಾರಣಿಗಳಿಗೆ ಇದು

ಅರ್ಥವಾಗುವುದು ಯಾವಾಗ ?

ಈಗಲೂ ನನ್ನ ಹುಟ್ಟೂರಲ್ಲಿ ಜನಗಳು – ದನಗಳು ಕುಡಿಯುವ ಅಶುದ್ದ ನೀರು ಒಂದೇ. ಸಣ್ಣ ಪುಟ್ಟ ನೆಗಡಿ – ಕೆಮ್ಮಿಗೂ ಯಡ್ರಾಮಿಗೇ ಓಡೋಡಿ ಬರಬೇಕು. ಅಲ್ಲಮನೆತ್ತರದ ಕಡಕೋಳ ಮಡಿವಾಳಪ್ಪನಂತಹ ಅನುಭಾವದ ಹರಿಕಾರನ ಹೆಸರಲ್ಲಿ ತತ್ವಜ್ಞಾನ ಪದಗಳ ಅಭಿವೃದ್ದಿ ಪ್ರಾಧಿಕಾರ, ಇಲ್ಲವೇ ಅಧ್ಯಯನ ಪೀಠವನ್ನಾದರೂ ಮಾಡಿರೆಂದು ನಾಲ್ಕು ದಶಕಗಳಿಂದ ಅಲವತ್ತುಗೊಳ್ಳುತ್ತಲೇ ಇದ್ದೇವೆ.

ರಾಜಕಾರಣಿಗಳು ಪಕ್ಷಾತೀತವಾಗಿ ಎಲ್ಲರೂ ಒಂದೇ ಆಗಿದ್ದಾರೆ. ಹೌದು ರಾಜಕಾರಣಿಗಳೆಲ್ಲರದೂ ಒಂದೇ ಜಾತಿಯ ಬ್ಲಡ್ ಗ್ರುಪ್. ಸಾಮಾಜಿಕ ಹಾಗೂ ಅರಣ್ಯ ಭೂ ಪರಿಸರದ್ದು ಬಿಗ್ ಝೀರೋ ಸಾಧನೆ ನಮ್ಮದು. ಸ್ವಚ್ಛ ಭಾರತ, ಶೌಚಾಲಯ, ಮನರೇಗಾದ ಈ ತಾಲೂಕಿನ ಕತೆಗಳನ್ನು ಕೇಳದಿರುವುದೇ ಪಾಡ. ಇಲ್ಲಿನ ಗ್ರಾಮ ಭಾರತದ ಸಮಷ್ಟಿ ಪ್ರಜ್ಞೆಯ ಕನಸುಗಳು ಪುಡಿ ಪುಡಿಯಾದಂತೆ ಗೋಚರಿಸುತ್ತಿವೆ. ” ರಾಜಕೀಯ ಪ್ರಜ್ಞೆ ” ಎಂಬ ಪದ ನಮಗೆ ಅಪರಿಚಿತ.

ಹೀಗೆ ಯಡ್ರಾಮಿಯೆಂಬ ಒಂದು ವರುಷದ ತಾಲೂಕಿಗೆ , ಒಂದು ವರುಷದ ಮಗುವಿಗೆ ಬರ ಬಹುದಾದ ಕಿಲ್ಲರ್ ಡಿಸೀಸ್ ಗಳೆಲ್ಲ ಇವೆ. ಬಾಲಗ್ರಹ ಪೀಡೆಗಳಿಂದ ಪಾರಾಗಲು ಬರೀ ಸರಕಾರಿ ನೌಕರರಿಂದ ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯವಿಲ್ಲ.

ಈ ಭಾಗದ ಯುವಕ ಯುವತಿಯರ, ರೈತ, ರೈತನಾಯಕರ ಸಹಭಾಗಿತ್ವದ ಸಾಂಸ್ಕೃತಿಕ ಚಳವಳಿ ಮೂಲಕ ರೋಗ ನೀಗಬೇಕಿದೆ. ಧಾರ್ಮಿಕ ಕಾರ್ಯಗಳಿಗಾದರೂ ಲಕ್ಷ ಲಕ್ಷ ಖರ್ಚು ಮಾಡುವ ಮನಸುಗಳು, ಇದಕ್ಕಾಗಿ ಲಕ್ಷ ಲಕ್ಷ ಖರ್ಚು ಮಾಡಬೇಕಿಲ್ಲ. ಜನರ ಸಾಂಘಿಕ ಮತ್ತು ಪ್ರಾಮಾಣಿಕ ಲಕ್ಷ್ಯವೊಂದಿದ್ದರೆ ಸಾಕು. ಬನ್ನಿ ಅಂತಹ ಭರವಸೆಯ ಬೇರುಗಳಿಗೆ ನೀರೆರೆಯೋಣ.

-ಮಲ್ಲಿಕಾರ್ಜುನ ಕಡಕೋಳ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here