ಒಂದಲ್ಲ, ಎರಡಲ್ಲ, ಬರೋಬ್ಬರಿ ಎಂಟು ವರುಷಗಳ ಕಾಲ ಅವಳ ಕಣ್ಣಲ್ಲಿ ಕಣ್ಣಿಟ್ಟು ನಿರಂತರವಾಗಿ ನೋಡಿದ ನನ್ನ ನೆನಪಿಗೆ ಸಾವಿಲ್ಲ. ಮರೆತೆನೆಂದರೂ ಮರೆಯಲಾಗದ ಮಧುರ ಮುಖವದು. ಅದೊಂದು ಮಧುರ ಸ್ಮೃತಿ.
ಹೌದು, ಅವಳ ” ಆ ಮುಖ ” ನನ್ನ ಸ್ಮೃತಿ ಪಟಲದಲ್ಲಿ ಕಳೆದ ಶತಮಾನದಿಂದ ಹಾಗೇ ಸಾಗಿ ಬರುತ್ತಲೇ ಇದೆ. ಅದೊಂದು ಬಗೆಯ ಸಂವೇದನಾಶೀಲ ಪ್ರತಿಭೆಯ ಸುಮಧುರ ಸಮಾರಾಧನೆ. ಅವಳನ್ನು ಅದೆಷ್ಟು ಬಾರಿ ಭೆಟ್ಟಿ ಮಾಡಿ, ಅವಳೊಂದಿಗೆ ಮಾತಾಡಿ, ಜೀವ ಹಗುರ ಮಾಡಿ ಕೊಂಡಿದ್ದೇನೆಂಬುದು ಲೆಕ್ಕವಿಟ್ಟಿಲ್ಲ.
ಯಡ್ರಾಮಿಯ ಶಾಲಾ ದಿನಗಳು ಮುಗಿಯುವ ಮುಜೇತಿ.. ಅವಳ ನನ್ನ ಭೆಟ್ಟಿ. ಅವಳನ್ನು ಮಾತಾಡಿಸುವ ದಿವ್ಯ ಕುತೂಹಲ ನನಗೆ. ಅವಳು ಹುಂ..ಹೂಂ.. ನನ್ನನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ನಾನ್ಯಾವ ಲೆಕ್ಕವೆಂದು ನನಗೆ ನಾನೇ ಅಂದುಕೊಳ್ಳುತ್ತಿದ್ದೆ. ವರುಷ ನಾಲ್ಕು ಕಳೆದಿರಬಹುದು.
ಅದೊಂದು ಮಟ ಮಟ ಮಧ್ಯಾಹ್ನ . ದುಡಿದು, ದಣಿದು ಬಂದಿದ್ದಳು. ಅವಳ ಕಡಲೇ ಬೇಳೆ ಬಣ್ಣದ ಹಣೆಯ ಮೇಲಿಂದ ಕಟಿನೀರು ಬಸಿದು ಮೃದು ಮಲ್ಲಿಗೆ ಮುತ್ತಿನಂತೆ , ಹವಳದ ತುಟಿ ದಾಟಿ ಎದೆಯ ದಾಸವಾಳಗಳ ಮೇಲೆ ತಟಕು ತಟಕೆಂದು ಹನಿಸುತ್ತಿದ್ದವು.
ಬಾವಾಗೋಳ ತೆಕ್ಕೆಯ ಪಕ್ಕದ ಹಣಮಂದೇವರ ಗುಡಿಯ ಬಾಜೂಕೆ ರುದ್ರಯ್ಯ ಮುತ್ಯಾನ ಹೊಟೇಲ್. ಜೋಡು ಬಸರಿ ಗಿಡದ ದಟ್ಟ ನೆರಳು.., ಪತರಾಸಿನ ಹೊಟೇಲಿಗೂ ಹಣಮಪ್ಪನ ಗುಡಿಯ ಪೌಳಿಗೂ.
ಗುಡಿ ಕಟ್ಟೆಯ ಮೇಲೆ ಕುಂತಿದ್ದಾಕೆ.., ಇನ್ನೇನು ನಾನು ಬಂದು ” ತನ್ನ ಮಾತಾಡಿಸಿ ಬಿಡುತ್ತೇನೆಂಬಂತೆ ” ಕಮಟಾದ ಹರಕು ಸೀರೆಯ ಸೆರಗಿನಿಂದ ಮುಖದ ಮೇಲಿಂದುದುರುವ ಕಟ್ನೀರು ಒರೆಸಿಕೊಂಡಳು. ಸೆರಗ ಮರೆಯಲಿದ್ದ ಕೆಂಪು ಕುಪ್ಪಸದ ದಾಸವಾಳಗಳ ಮೇಲೆ ಬಿದ್ದ ಕಟಿ ನೀರಿನ ಹಸಿ ಗುರುತುಗಳು..! ಆ ಹಸಿ ಗುರುತುಗಳ ಮೇಲೆ ಬಿಸಿ ಹಾಡಿನ ಸಾಲುಗಳನ್ನು ಬರೆಯಲು ನನ್ನ ಎಳೆಗಣ್ಣು ಕನಸಿದವು.
ಅವು ನನ್ನ ಕಳ್ಳಗಣ್ಣಿಗೆ ಬಿದ್ದುದ ಗೊತ್ತಾಗಿ ನನ್ನತ್ತ ಮಿಂಚಿನ ಕಣ್ಣು ಹಾಯಿಸಿ, ಸೆರಗು ಸರಿಪಡಿಸಿಕೊಂಡಳು. ಆಹಾ..! ಅದೆಂಥ ಮಾಧುರ್ಯದ ಕಣ್ಣುಗಳವು…! ಒಂದೊಂದು ಕಣ್ಣಲ್ಲೂ ಪೂರ್ಣ ಚಂದಿರಿನ ಹಾಲ್ಬೆಳದಿಂಗಳು…
ನನಗೆ ಮಧ್ಯಾಹ್ನವೇ ಮರೆತು ಹೋಗಿತ್ತು. ಏನಿಲ್ಲವೆಂದರೂ ವಯಸಿನಲ್ಲಿ ನನಗಿಂತ ಒಂದೆರಡು ವರುಷವಾದರೂ ಹಿರೀಕಳು. ಅದ್ಯಾವುದು ಅಡ್ಡಿಯಾಗಿ ಇಬ್ಬರನು ಕಾಡಲಿಲ್ಲ. ಕಣ್ಣಿಗೆ ಕಾಣದ ವಯಸು. ಕೊರಳ ಮೋಹದ ಬಲೆಗೆ ಸುತ್ತಿಕೊಂಡ ಖಂಡುಗ ಖಂಡುಗ ಕನಸು.
ಹೇಳು ಕನಸುಗಳಿಗೆ ಒಡತಿಯಾಗುವೆಯಾ… ಎಂದು ಕೇಳುವುದನ್ನ ತಡೆ ಹಿಡಿದು ಹೆಸರು ಕೇಳಿದೆ. ರೇಣುಕ ಎಂದಳು. ನಾನು ಈ ಊರಿನವಳಲ್ಲ.. ಅಪ್ಪ ಗೊತ್ತಿಲ್ಲ. ಅವ್ವ ಜೋಗೇರ ಚೆಂಗಳಿ… ದೇವರಿಗೆ ಬಿಟ್ಟವಳು…
ನಾನು ಪ್ರಶ್ನಿಸದಿದ್ದರೂ ತಾನೇ ಕತೆ ಹೇಳಿದಂತೆ ಹೇಳ ತೊಡಗಿದಳು. ನಂಗೊತ್ತಿಲ್ಲ. ಅದೇಕೋ ನಿಮ್ಮುಂದೆ ಎಲ್ಲ ಹೇಳಿ ಕೊಳ್ಳಬೇಕನಸ್ತಿದೆ. ತನ್ನ ಜೀವದ ಗೆಳತಿ ಲಂಬಾಣಿ ತಾಂಡಾದ ನಿಂಬೆವ್ವ ತನಗೆ ಮಾಡಿದ ಸಹಾಯ, ಸಹಕಾರ ಕುರಿತು ಹೇಳುತ್ತಾ ನನ್ನ ತಾಯಿಯ ಜೀವ ಉಳಿಸಿದಾಕೆ ನಿಂಬೆವ್ವ ಎಂದಳು.
ಅಂದು ಸಂತೆಯ ದಿನ, ಹೆಚ್ಚು ದುಡ್ಡು ಅಮ್ಮನ ಕೊಡ ತುಂಬುತ್ತದೆ. ಹಣಮಂದೇವರ ಮುಂದಿಟ್ಟ ತುಂಬಿದ ತಾಮ್ರದ ಕೊಡ, ಬಿಚ್ಚಿಟ್ಟ ತನ್ನ ಕಾಲ್ಗೆಜ್ಜೆ, ಭಂಡಾರದ ಚೀಲ ತೋರಿಸಿದಳು. ನನ್ನ ತಾಯಿಗೇ ಕಡೆಯಾಗಲಿಲ್ಲ. ನನಗೂ ಕೊಡ ಹೊರಿಸಿದಳು ಗುಡ್ಡದ ಅಮ್ಮ. ಮೂರು ವರುಷಗಳಿಂದ ಗುಡ್ಡಕ್ಕೆ ಹರಕೆ ತೀರಿಸುತ್ತಿದ್ದೇನೆ. ಅಮ್ಮನ ಶಕ ಸಣ್ಣದಲ್ಲ ಮತ್ತು ಸುಮ್ಮನಲ್ಲ..
ಡೇಕರಿಕೆ ಶುರುವಾಗಿ., ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತಾ ಲೋಕಾಕರ್ಷಣೆಯ ಅಮಲಿನಲಿ ಹಾಡ ತೊಡಗಿದಳು. ನೋಡ ನೋಡುತ್ತಿದ್ದಂತೆ ಸಂತೆಯ ಜನ ಗಿಜಿಗುಡತೊಡಗಿದರು. ರೊಕ್ಕದ ಝಣ ಝಣ. ಎಣ್ಣೆಗಮಟಿನ ಜಡೆ ಮುದುಕನೊಬ್ಬ ತುಂತಣಿ, ಚೌಡಿಕೆ ನುಡಿಸುತ್ತ ಜನರ ಹಣೆಗೆ ಭಂಡಾರ ಹಚ್ಚುತ್ತಾ ಹೋದ.
ಆರಂಭಕ್ಕೆ ಅದೆಷ್ಟೋ ವರಗಳು ಮುಂದೆ ಬಂದರೂ, ಗುಡ್ಡದ ಅಮ್ಮ ಹಾಗೂ ತನ್ನ ತಾಯಿಗೋಸ್ಕರ ರೇಣುಕ ಮದುವೆ ನಿರಾಕರಿಸಿದಳು. ಆಕೆ ಹಾಡುತ್ತಿದ್ದ ಪಾರಿಜಾತ ಶೈಲಿಯ ರಾಧೆ – ಕೃಷ್ಣರ ಹಾಡಿನ ಮೋಡಿ…! ಆಹಾ ! ಆ ಲೋಕ ಸಂಗೀತದ ಘಮಲಿನಿಂದ ನಾನಿನ್ನೂ ಪಾರಾಗಿ ಬಂದಿಲ್ಲ.
– ಮಲ್ಲಿಕಾರ್ಜುನ ಕಡಕೋಳ